ಹಗರಿಬೊಮ್ಮನಹಳ್ಳಿ

ಅಂಗನವಾಡಿಯ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾದರೆ ಸೂಕ್ತ ಕ್ರಮ: ಶಿವಕುಮಾರ

ಅಂಗನವಾಡಿಯ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾದರೆ ಸೂಕ್ತ ಕ್ರಮ: ಶಿವಕುಮಾರ

ಹಗರಿಬೊಮ್ಮನಹಳ್ಳಿ 01: ರಾಜ್ಯದಲ್ಲೆಡೆ ಸದ್ದು ಮಾಡಿದ್ದ ಮೊಟ್ಟೆ ಹಗರಣ ಸದ್ಯ ಗ್ರಮ ಪಂಚಾಯತಿ ಮಟ್ಟದಕ್ಕೂ ತಟ್ಟಿದೆ, ತಾಲೂಕಿನ ತಂಬ್ರಹಳ್ಳಿ ಗ್ರಾ.ಪಂ.ಕಚೇರಿಯಲ್ಲಿ ನಡೆದ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಶಿಕ್ಷಕಿಯರು ಗ್ರಾಮದ ಅಂಗನವಾಡಿಯಲ್ಲಿ ಸಮರ​‍್ಕವಾಗಿ ಮೊಟ್ಟೆ ವಿತರಣೆ ಮಾಡುತ್ತಿಲ್ಲ ಎಂದು ಗ್ರಾ.ಪಂ.ಉಪಾಧ್ಯಕ್ಷ ಮೈಲಾರ ಶಿವಕುಮಾರ ಶಿಕ್ಷಕಿಯರ ವಿರುದ್ದ ಹರಿಹಾಯ್ದರು. 

ಗ್ರಾ.ಪಂ.ಅಧ್ಯಕ್ಷೆ ಸಿ.ಪ್ರತಿಭಾ ಗೀರೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ 8ಮೊಟ್ಟೆ, ಗರ್ಭೀಣಿಯರಿಗೆ 25ಮೊಟ್ಟೆ ಕೊಡಬೇಕೆಂದು ಇಲಾಖೆಯ ನಿಯಮವಿದ್ದರೂ ಕೆಲ ಅಂಗನವಾಡಿ ಶಿಕ್ಷಕಿಯರು ಮಕ್ಕಳಿಗೆ 2ರಿಂದ4ಮೊಟ್ಟೆಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ ಎಂಬ ದೂರುಗಳಿವೆ. ಇದೇ ರೀತಿ ಮುಂದುವರೆದರೆ ಕಡಿಮೆ ಮೊಟ್ಟೆ ಕೊಡುವ ಅಂಗನವಾಡಿ ಶಿಕ್ಷಕಿಯರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದು ಗರಂ ಆದರು.  

ಈ ಸಾಲಿನಲ್ಲಿ 15ನೇ ಹಣಕಾಸು ಯೋಜನೆ ಮೊತ್ತ ಎಷ್ಟು ಬಂದಿದೆ ಎಂದು ಸದಸ್ಯ ಸಂಡೂರು ಮೆಹಬೂಬ್ ಪ್ರಶ್ನಿಸಿದರು. ಹೊಟೇಲ್, ಎಗ್‌ರೈಸ್, ಇತರೆ ಅಂಗಡಿಗಳಿಗೆ ವಾರ್ಷಿಕ ತೆರಿಗೆ ಮೊತ್ತ ಹಿಂದೆ 500 ಇರುವುದನ್ನು 1000ರೂಗೆ ಹೆಚ್ಚಿಸಲು, ಗ್ರಾಮದ ಲಿಕ್ಕರ್‌ಶಾಪ್ 5000ರೂ ತೆರಿಗೆ ವಿಧಿಸಲು, ಹಾಗೂ ಗ್ರಾಮದ ಮುಖ್ಯರಸ್ತೆಯಲ್ಲಿರುವ ಅಂಗಡಿಯವರು ಸ್ವಚ್ಚತೆ ಕಾಪಾಡಿ ಕೊಳ್ಳದಿದ್ದರೆ 2000ಸಾವಿರರೂ ದಂಡ ವಿಧಿಸಿ ಎಂದು ಎಲ್ಲಾ ಸದಸ್ಯರು ಒಕ್ಕೋರಲಿನಿಂದ ತೀರ್ಮಾನಿಸಿ ಸಭೆಯಲ್ಲಿ ತಿಳಿಸಿದರು. 

ಗ್ರಾ.ಪಂ.ಅಧ್ಯಕ್ಷೆ ಪ್ರತಿಭಾ ಮಾತನಾಡಿ, ಸಭೆಯಲ್ಲಿ ಮೊಬೈಲ್‌ಗಳನ್ನು ತರಕೂಡದು, ಮುಖ್ಯವಾದ ವಿಷಯ ಚರ್ಚೆ ಸಂದರ್ಭದಲ್ಲಿ ಕಿರಿಕಿರಿಯಾಗುತ್ತದೆ. ಗ್ರಾ.ಪಂ.ಸದಸ್ಯರು ಮತ್ತು ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. ತಂಬ್ರಹಳ್ಳಿ ಉತ್ತರಭಾಗದ ಶಾಲೆಯ ಮುಂಭಾಗದ ಚರಂಡಿ, ಊರು ಒಳಗಿನ ಚರಂಡಿಗಳನ್ನು ಸ್ವಚ್ಚಗೊಳಿಸಿ, ಬಿದ್ದುಹೋದ ಚರಂಡಿಗಳನ್ನು ಪುನ: ನಿರ್ಮಾಣ ಮಾಡಿ ಎಂದು ಸದಸ್ಯೆ ಏಣ್ಗಿ ಪೂರ್ಣಿಮ ಪಿಡಿಒಗೆ ತಿಳಿಸಿದರು. ಪಿಡಿಒ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ ಈ ಬಾರಿಯ ನರೇಗಾ ಯೋಜನೆಯಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಇಕೋ ಪಾರ್ಕ್‌ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಸುಸಜ್ಜಿತ ನಿರ್ಮಾಣಕ್ಕೆ ಕ್ರಮವಹಿಸಿ ಎಂದು ಸದಸ್ಯ ದೊಡ್ಡಬಸಪ್ಪ ಪಿಡಿಒಗೆ ತಿಳಿಸಿದರು. 1ನೇ ವಾರ್ಡ್‌ನಲ್ಲಿ ನಿರ್ಮಾಣವಾದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಅರ್ಹ ಆಪರೇಟರ್ ನೇಮಕ ಮಾಡಿ ಎಂದು ಸದಸ್ಯ ಆನೇಕಲ್ ದೊಡ್ಡಬಸಪ್ಪ ತಿಳಿಸಿದರು. ಕಟ್ಟಿಬಸವಣ್ಣ ದೇವಸ್ಥಾನದಲ್ಲಿ ಸ್ಥಗಿತಗೊಂಡಿರುವ ಚರಂಡಿಯನ್ನು ಪುನ: ನಿರ್ಮಾಣ ಮಾಡಿ ನೀರು ಸರಾಗವಾಗಿ ಹೋಗುವಂತೆ ಮಾಡಿ ಎಂದು ಸದಸ್ಯೆ ಮ್ಯಗಳಮನಿ ರುದ್ರಮ್ಮ ತಿಳಿಸಿದರು.  

ಜೆಸ್ಕಾಂ ಕಚೇರಿಯ ಹಿರಿಯ ಲೈನ್‌ಮ್ಯಾನ್ ನೌಕರನೋರ್ವ ಸರಿಯಾಗಿ ಕೆಲಸ ನಿರ್ವಹಣೆ ಮಾಡದೆ ಸಾರ್ವಜನಿಕರಿಗೆ ಉದ್ದಟತನದಿಂದ ಮಾತನಾಡುತ್ತಾನೆ, ಎಂಬುವ ದೂರಿನ ಹಿನ್ನಲೆಯಲ್ಲಿ ಸದಸ್ಯ ಮಡಿವಾಳರ ಮಂಜುನಾಥ ನೌಕರನನ್ನು ಪಂಚಾಯ್ತಿ ಕರೆಯಿಸಿ ಸಮರ​‍್ಕವಾಗಿ ಕೆಲಸ ನಿರ್ವಹಣೆ ಮಾಡಿ ಎಂದು ತಾಖೀತು ಮಾಡಿದರು. ಗ್ರಾಮದಲ್ಲಿ ಲೈನ್‌ಮ್ಯಾನ್‌ಗಳ ಕೊರತೆಯಿದ್ದು ಇಲಾಖೆಯವರು ಕೂಡಲೇ ಲೈನ್‌ಮ್ಯಾನ್‌ಗಳನ್ನು ಭರ್ತಿ ಮಾಡಲು ಪತ್ರ ಬರೆಯಿರಿ ಎಂದು ಸೂಚಿಸಿದರು.  

ಗ್ರಾಪಂ. ಸದಸ್ಯ ಶಕೀರಾಬೇಗಂ, ಬಣಕಾರ ಬಸಮ್ಮ, ಸಪ್ಪರದ ಕಮಲಾಕ್ಷಿ ಇದ್ದರು. ಸಭೆಯನ್ನು ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಕಾಶೀನಾಯ್ಕರ ಕೊಟ್ರೇಶ ನಿರ್ವಹಿಸಿದರು. 


ಸುದ್ದಿ ಓದಿ