ರಾಷ್ಟ್ರೀಯ

ವಾಜಪೇಯಿ ಅವರ 96ನೇ ಜನ್ಮದಿನ: ಸದೈವ್ ಅಟಲ್ ಗೆ ಪ್ರಧಾನಿ ಗೌರವ ನಮನ

ವಾಜಪೇಯಿ ಅವರ 96ನೇ ಜನ್ಮದಿನ: ಸದೈವ್ ಅಟಲ್ ಗೆ ಪ್ರಧಾನಿ ಗೌರವ ನಮನ

ನವದೆಹಲಿ, ಡಿಸೆಂಬರ್ 25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಸ್ಮಾರಕ 'ಸದೈವ್ ಅಟಲ್' ಗೆ ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರು ಮತ್ತು ಹಲವು ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪ್ರಧಾನಿ ಮೋದಿ, ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದರು.

ಇದಕ್ಕೂ ಮೊದಲು ಇಂದು ಬೆಳಿಗ್ಗೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರಿಗೆ ಗೌರವ ಮತ್ತು ನಮಸ್ಕಾರ ಎಂದು ಪ್ರಧಾನಿ ಟ್ವೀಟ್ ಮಾಡಿದ್ದರು.

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ. ದೂರದೃಷ್ಟಿಯ ನಾಯಕತ್ವದಲ್ಲಿ  ಅವರು ದೇಶವನ್ನು ಅಭೂತಪೂರ್ವ ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ದರು. ಬಲಿಷ್ಠ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ಅವರ ಪ್ರಯತ್ನಗಳು ಎಂದಿಗೂ ಸ್ಮರಣೀಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಮೂರು ಬಾರಿ ಪ್ರಧಾನಿಯಾಗಿದ್ದರು.  ಹಿಂದಿ ಕವಿ, ಪತ್ರಕರ್ತ ಮತ್ತು ಅತ್ಯುತ್ತಮ ಭಾಷಣಕಾರರಾಗಿಯೂ ಅವರು ಹೆಸರು ಗಳಿಸಿದ್ದರು.

ಜನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು, 1968 ರಿಂದ 1973 ರವರೆಗೆ ಅದರ ಅಧ್ಯಕ್ಷರಾಗಿದ್ದರು, ಮತ್ತು ಅವರು ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.

ವಾಜಪೇಯಿ 1924 ರ ಡಿಸೆಂಬರ್ 25 ರಂದು ಗ್ವಾಲಿಯರ್‌ನಲ್ಲಿ ಜನಿಸಿದ್ದರು.

ಸುದ್ದಿ ಓದಿ