ವಚನ ಸಾಹಿತ್ಯ ಮತ್ತು ಯುವಜನತೆ
ಎಲ್ಲಿಯವರೆಗೂ ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ದೂರಗಲಾರದು ಅಲ್ಲಿಯವರೆಗೂ ಎಲ್ಲರೂ ಸಮಾನರೂ ಎಂದು ಸಾರುವ ಶರಣರ ಸಾರಗಳು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗುತ್ತವೆ. ಜಾತಿ ವ್ಯವಸ್ಥೆ ಕಿತ್ತು ಹಾಕುವವರೆಗೂ ಅಣ್ಣ ಬಸವಣ್ಣನವರ ಅನುಭವ ಮಂಟಪದ ಸದುದ್ಧೇಶ ಈಡೇರಲು ಎಂದಿಗೂ ಸಾಧ್ಯವಿಲ್ಲ. ಕಾರಣ ಇಂದೇ ಯುವ ಜನಾಂಗವು ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಟೊಂಕ ಕಟ್ಟಿ ನಿಲ್ಲಬೇಕಿದೆ. ಶರಣರ ತತ್ವಾದರ್ಶಗಳು ಪಾಲನೆಯಲ್ಲಿ ಯುವ ಜನಾಂಗದ ಪಾಲು ಬಹು ದೊಡ್ಡದು.
ಶರಣರ ಬದುಕು ಮತ್ತು ಬರಹಗಳು ನುಡಿದಂತೆ ನಡೆಯುವಂತಾಗಿದ್ದವು. ಅವರ ಕಾಲಮಾನದ ದಿನವನ್ನು ನಾವು ಭಾರತದ ಸುಸಂಸ್ಕೃತವಾದ ಸುವರ್ಣ ಯುಗವೆಂತಲೂ ಕರೆಯಬಹುದು, “ಕಾಯಕವೇ ಕೈಲಾಸ” ಎಂಬ ಅರಿವು-ಆಚಾರ, ಸಮಾನತೆ ಮತ್ತು ಜಾತ್ಯಾತೀತ ಮನೋಭಾವನೆಯನ್ನು ಯಾರು ಕನಿಷ್ಠರಲ್ಲ ಮತ್ತು ಮೇಲಲ್ಲ ಎಂಬುದುನ್ನು ವಚನ ಸಾಹಿತ್ಯದ ಮೂಲಕವೇ, 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟವರು. ಶರಣ-ಶರಣೆಯರು ಅವರು ಬಾಳಿ ಬದುಕಿದ ಆದರ್ಶವಾದ ಕಲ್ಯಾಣದ ನಾಡಿನಲ್ಲಿ ನಾವು-ನೀವು ಜನ್ಮವೆತ್ತಿರುವುದು ಪುಣ್ಯದ ಫಲವೇನೋ. ಶ್ರೇಷ್ಠ ಪರಂಪರೆಯ ವಚನದ ಒಂದೊಂದು ಸಾಲಯಗಳು ಮನುಕುಲದ ಉದ್ದಾರಕ್ಕಾಗಿ, ಹೊಸ ಹೊಸ ದಿಕ್ಕು ದೆಸೆ ಭರವಸೆಗಳನ್ನು ಮೂಡಿಸುವ ಶಕ್ತಿ- ಯುಕ್ತಿಯು ವಚನ ಸಾಹಿತ್ಯಕ್ಕಿದೆ ಎಂಬ ಪ್ರಜ್ಞೆಯು ಇಂದಿನ ನಮ್ಮ ಯುವ ಜನತೆಯಲ್ಲಿ ಒಡಮೂಡಬೇಕಾಗಿದೆ.
ವಚನ ಸಾಹಿತ್ಯ ಮತ್ತು ವಚನ ಕ್ರಾಂತಿಕಾರಕವಾಗಿರುವ ಬಸವ ಯುಗ, 12ನೇ ಶತಮಾನದಿಂದಲೆ ಜಗತ್ತಿನಲ್ಲೇ ಪ್ರಥಮ ಅನುಭವ ಮಂಟಪದ ವೈಶಿಷ್ಟ್ಯತೆಗಳನ್ನು ಅರಿತು, ಬೆರೆತು, ಕೂಡಿ ಬಾಳುವ ಸಮಾನತೆಯ ತತ್ವ ಸಿದ್ಧಾಂತಗಳನ್ನು ಯುವ ಜನಾಂಗವು ಹೆಚ್ಚೆಚ್ಚು ಅಧ್ಯಯನ ಮಾಡಬೇಕಾಗಿದೆ. ಇದರ ಮೂಲಕ ವಿಶ್ವಕ್ಕೆ ವಚನ ಸಾಹಿತ್ಯದ ಸಾರದ ಅಮೃತತ್ವದ ಸಿಂಚನವನ್ನು ಪಸರಿಸಬೇಕಾಗಿದೆ. ಇದು ಭಾರತದ, ಕರ್ನಾಟಕದ ಪ್ರತಿಯೊಬ್ಬ ಯುವ ಜನಾಂಗದ ಆದ್ಯ ಕರ್ತವ್ಯ, ಸಂಕಲ್ಪವಾಗಬೇಕಾಗಿರುವುದು ಭಾರತದ ಪ್ರತಿಯೊಬ್ಬ ಶರಣ ಚಿಂತಕರ ಆಶಯವಾಗಿದ್ದು, ಇತ್ತಕಡೆ ಯುವ ಜನಾಂಗವು ವಚನ ಸಾಹಿತ್ಯದ ಕಡೆಗೆ ಒಲವು ತೋರಬೇಕು. ಆಗ ಅವರನ್ನು ಬುದ್ಧ, ಬಸವ, ಅಂಬೇಡ್ಕರರ ಹಾಗೂ ಮಹಾತ್ಮಗಾಂಧೀಜಿಯವರು ಕಂಡ ಕನಸನ್ನು ಸಾಕಾರ ಗೊಳಿಸಲು ಉತ್ತೇಜನವನ್ನು, ಪ್ರೇರಣೆಯನ್ನು ನೀಡಬಲ್ಲದು ಎಂಬುದು ಹಿರಿಯ ಸದಾಶಯವಾಗಿದೆ.
ಜಗತ್ತು ಇಂದು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಸಹ ಅದು ಹೆಚ್ಚು ಪ್ರಗತಿದಾಯಕವಾಗಿ ಗೋಚರಿಸಬೇಕಾದರೆ ಅಲ್ಲಿ ಸಮಾನತೆ, ಸಹಬಾಳ್ವೆ, ಸಹಭೋಜನ, ನಾವೆಲ್ಲರೂ ಸಹೋದರರು ಎಂಬ ಮನೋಭಾವನೆ, ಏಕತೆಯ ಹಿರಿಮೆ, ಗರಿಮೆಗಳು ಇಲ್ಲದಿದ್ದಾಗ ಅಲ್ಲಿ ಶಾಂತಿ, ಸಮೃದ್ಧಿಯ ಜೀವನ ನೆಲೆಸಲು ಸಾಧ್ಯವಿಲ್ಲ. ಇಂತಹ ವೈಚಾರಿಕ ಚಿಂತನೆಗಳು ನಮ್ಮ ನಾಡಿನ ವಚನ ಸಾಹಿತ್ಯದಲ್ಲಿ ಅದು ಇಂದಿಗೆ 900 ವರ್ಷಗಳ ಹಿಂದೆಯೇ ಕಲ್ಯಾಣ ಕರ್ನಾಟಕದಲ್ಲಿ ಇಂತಹದೊಂದು ಅತ್ಯದ್ಬುತವಾದ ಮಹಾನ್ ಕ್ರಾಂತಿಕಾರಕವಾದ ಬೆಳವಣಿಗೆ ವಚನ ಸಾಹಿತ್ಯದ ಮೂಲಕ ಚಳುವಳಿಯಾಗಿದೆ. ಇಂತಹ ವಚನ ಸಾಹಿತ್ಯವನ್ನು ನಮ್ಮ ಶಾಲಾ ಕಾಲೇಜು ವಿದ್ಯಾರ್ಥಿಗಳು ಯುವ ಜನಾಂಗವು ಸಹ ಅವುಗಳನ್ನು ಓದಬೇಕು. ವಚನ ಸಾಹಿತ್ಯದ ಸರ್ವಶ್ರೇಷ್ಠವಾದ ಮೌಲ್ಯಗಳನ್ನು ಸಾರಬೇಕು. ಇತ್ತ ಯುವಜನಾಂಗವೂ ಕೂಡಾ ತಮ್ಮ ಜೀವನದ ಸಮಯವನ್ನು ವ್ಯರ್ಥವಾಗಿ ಹಾಳುಮಾಡದೇ ವಚನ ಸಾಹಿತ್ಯಕ್ಕೆ, ಅದರ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ನಾವು ಕೂಡಾ ವಚನ ಸಾಹಿತ್ಯದ ತಿರುಳನ್ನು ತಿಳಿದು ಅದರಂತೆ ನಡೆಯುತ್ತೇವೆಂಬ ದೃಢವಾದ ಸಂಕಲ್ಪವನ್ನು ಯುವ ಜನಾಂಗವು ಸ್ವಇಚ್ಛೆಯಿಂದ ಮುಂದೆ ಬಂದು ವಚನ ಸಾಹಿತ್ಯದ ಆರಾಧಕರಾಗಬೇಕಿದೆ.
ಯುವಕರೇ, ಯುವತಿಯರೇ ನೀವು “ಸಮಯದ ಜೊತೆ ನಡೆಯುವ ಅವಕಶ್ಯತೆ ಇಲ್ಲ, ಸತ್ಯದ ಜೊತೆ ಜೊತೆಗೆ ನಡೆಯಿರಿ, ಆಗ ಒಂದು ದಿನ ಸಮಯವೇ ನಿಮ್ಮನ್ನು ಹುಡುಕುತ್ತಲೇ ಬರುತ್ತದೆ”. ಆ ಕಾರಣಕ್ಕಾಗಿ ನಮ್ಮನ್ನು ಹೆತ್ತ ತಂದೆ, ತಾಯಿ, ಗುರು ಹೊತ್ತ ಭೂಮಿಯ ಋಣವನ್ನು ತೀರಿಸಬೇಕಾದರೆ, ಈ ಹುಟ್ಟು ಸಾವಿನ ಮಧ್ಯದಲ್ಲಿಯೇ ಎಲ್ಲವನ್ನೂ ಸಾಧಿಸಬೇಕಾಗುತ್ತದೆ. ಇದಕ್ಕಾಗಿಯೇ ಅನುಭಾವಿಕರು ತಮ್ಮ ಅನುಭವಿಕ ನುಡಿಗಳಲ್ಲಿ ಹೇಳುತ್ತಾರೆ. ಅದೇನೆಂದರೆ ‘ಸೇವೆ’ಯನ್ನು ಮಾಡುವಾಗ ‘ಸಮಯ’ ನೋಡಬಾರದು, ‘ಪ್ರಸಾದ’ ಸ್ವೀಕರಿಸುವಾಗ ‘ಸ್ವಾದ’ ನೋಡಬಾರದು. ‘ಸತ್ಸಂಗ’ಗಳನ್ನು ಕೇಳುವಾಗ ಭಾಗಿಯಾಗುವಾಗ ‘ಜಾಗ’ ನೋಡಬಾರದು. ‘ವಿನಂತಿ’ ಮಾಡುವಾಗ ‘ಸ್ವಾರ್ಥ’ ನೋಡಬಾರದು. ‘ದಾನ’ ಮಾಡುವಾಗ ‘ಲೆಕ್ಕ’ ಹಾಕಬಾರದು. ‘ದಯೆ’ ತೋರುವುದಾದರೆ, ಅದರ ‘ಅವಶ್ಯಕತೆ’ ನೋಡಬಾರದು ಎಂಬ ಮಹತ್ವದ ಸದ್ವಿಚಾರಗಳನ್ನು ಹೇಳಿದ್ದಾರೆ. ಇವುಗಳ ಪಾಲನೆಯಲ್ಲಿ, ಪೋಷಣೆಯಲ್ಲಿ ಯುವ ಜನಾಂಗ ತಮ್ಮ ಜೀವನದ ಸಾರ್ಥಕತೆಯನ್ನು ಪಡೆದುಕೊಂಡಲ್ಲಿ ಅವರನ್ನು ಮೀರಿಸುವರುಂಟೇ?!
ಸಾವಿರಾರು ವರ್ಷಗಳನ್ನು ಕಳೆದರೂ ಸಹ 12ನೇ ಶತಮಾದ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು ಅಂದಿನ ಶರಣ-ಶರಣೆಯರ ದಿವ್ಯ ದೃಷ್ಟಿಕೋನವು ಎಷ್ಟೊಂದು ಹಿರಿದಾದುದು ಎಂಬುದನ್ನು ನಮ್ಮ ನಿಮ್ಮ ಅರಿವಿಗೆ ಇಂದಿಗೂ ನಿಲುಕದಂತಾದ ಮಹಾನ್ ಶಕ್ತಿ-ಯುಕ್ತಿಯುಳ್ಳ ಸಾರಗಳು; ನಮಗಿಂದಿಗೂ ದಾರಿ ದೀಪಗಳಾಗಿವೆ. ಇಂತಹ 770 ಅಮರ ಗಣಂಗಳು 330 ವಚನಕಾರರ 3000 ಶರಣ-ಶರಣೆಯರ ಲಕ್ಷ ಲಕ್ಷ ವಚನ ಸಾಹಿತ್ಯಗಳನ್ನು ಹಾಳು ಮಾಡಿದ್ದರು, ಸುಟ್ಟು ಹಾಕಿದ್ದರು, ಇಂದಿಗೂ ನಮ್ಮ ಪೂರ್ವಜರು ವಚನ ಸಾಹಿತ್ಯವನ್ನು ರಕ್ಷಿಸಲು ತಮ್ಮ ಜೀವನವನ್ನು ತ್ಯಾಗ ಬಲಿದಾನ ಮಾಡಿದ್ದಾರೆ. ಅವರೆಲ್ಲರೂ ವಚನ ಸಾಹಿತ್ಯವನ್ನು ಸಾಯಲು ಬಿಡಲಿಲ್ಲ. ಇಂತಹ 173 ಶರಣ-ಶರಣೆಯರ 25000 ವಚನಗಳು ಇಂದು 23 ಭಾಷೆಗಳಲ್ಲಿ, ದೇಶ ಪ್ರಪಂಚಕ್ಕೆ ಭಾಷಾಂತರಗೊಂಡು ಪ್ರಸಾರವಾಗಿವೆ, ಜಗತ್ತಿಗೆ ಸಮರೆ್ಣಯಾಗಿವೆ ಅಂದರೆ 12ನೇ ಶತಮಾನದ ಬಸವ ಯುಗ, ವಚನಕ್ರಾಂತಿ, ಸಮಾನತೆಯ ಮಹಾ ಹೆಬ್ಬಾಗಿಲು, ವಿಶ್ವದ ಮೊದಲ ಸಂಸತ್ತು ರಚನೆಯಾಗಿರುವ ನಮ್ಮ ಕಲ್ಯಾಣದ ನಾಡು, ಜಗತ್ತಿಗೆ ಪ್ರಥಮವಾಗಿರುವಾಗ, ನಾವು-ನೀವುಗಳು ಯುವ ಜನಾಂಗವು; ಇಂದು ಹೆಚ್ಚೆತ್ತುಕೊಂಡು, ನಮ್ಮ ಪರಂಪರೆಯ ಶಕ್ತಿ-ಯುಕ್ತಿಯಾಗಿರುವ, ಇತಿಹಾಸವಾಗಿರುವ ವಚನ ಸಾಹಿತ್ಯದ ಸದಾಶಯದಂತೆ ನಾವು ನೀವುಗಳು ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ನಮಗಿದೆ. ಇದಕ್ಕೆ ಯುವಕರು ನಾಡಿನೆಲ್ಲೆಡೆಯೂ, ದೇಶ ಪ್ರಪಂಚದೆಲ್ಲೆಡೆಯೂ ವಚನಸಾಹಿತ್ಯದ ಪ್ರಸಾರಕ್ಕೂ ಮುಂದಾಗಬೇಕಾದ ಅತ್ಯವಶ್ಯಕತೆ ಇದೆ; ಎಂಬುದನ್ನು ಯಾರು ಮರೆಯಬಾರದು.
ಕಾರ್ಲ್ಮಾರ್ಕ್ಸ್, ಮಾರ್ಟಿನ್ಲೂಥರ್ ಕಿಂಗ್ ಮೊದಲಾದವರು ಜಗತ್ತಿಗೆ ಮೊದಲ ಪಾರ್ಲಿಮೆಂಟ್ನ್ನು ರಚಿಸಿಕೊಟ್ಟ ಭಕ್ತಿ ಬಂಡಾರಿ ಬಸವಣ್ಣನ ಅನುಭವ ಮಂಟಪದ ನಿರ್ಮಾತೃ, ಮಹಾಜ್ಞಾನಿ, ಸುಜ್ಞಾನಿ, ತತ್ವಜ್ಞಾನಿ, ಸರ್ವಜನಾಂಗದ ಅಭಿವೃದ್ಧಿ ಹರಿಕಾರ, ಧೀನ ದಲಿತರ, ಹಿಂದುಳಿದ ವರ್ಗದ ಸೂರ್ಯರಾಗಿದ್ದರೆಂದು ಅವರ ಕಾರ್ಯಶೀಲತೆ ತತ್ವ ಸಿದ್ಧಾಂತಗಳ ಪ್ರತಿಪಾದಕ ಮಹಾನ್ ಮಾನವತವಾದಿ ಎಂದು ಅವರು ತಮ್ಮ ಇತಿಹಾಸಗಳಲ್ಲಿ ದಾಖಲಿಸಿದ್ದಾರೆ. ಇಂತಹ ಶ್ರೇಷ್ಠ ವೈಚಾರಿಕ ಚಿಂತನಾಶೀಲ ಬಸವಯುಗದ ಸಮಾಜಿಕ ಸಮಾನತೆಯ ಪ್ರತಿಪಾದನೆಗಳನ್ನು ಭಾರತದ, ಕರ್ನಾಟಕದ ಯುವಜನತೆ ಪಾಲಿಸಿ ವಚನ ಸಾಹಿತ್ಯವನ್ನು ಮನೆ ಮನಗಳಿಗೆ ತಲುಪಿಸಿ ಭಾರತದ ಬಸವ ಪ್ರಜ್ಞೆ ಜಾಗೃತಿ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಜಗತ್ತಿಗೆ ಕಲ್ಯಾಣ ಕರ್ನಾಟಕದ ಐತಿಹಾಸಿಕ ಪರಂಪರೆಗಳ, ಅನುಭವ ಮಂಟಪದ ವಚನಕಾರರ ಅನುಭಾವದ ಸಂದೇಶಗಳನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ತಲುಪಿಸುವ ಕಾರ್ಯವು ಪ್ರತಿಯೊಬ್ಬ ನಾಗರೀಕರಿಂದಲೂ ಶರಣ ಸಂಸ್ಕೃತಿಗಳ ಶ್ರೀಮಂತಿಕೆ, ಸಿರಿವಂತಿಕೆಯ ಮಹತ್ವದ ಪ್ರಸಾರದ ಕಾರ್ಯ ಎಲ್ಲೆಲ್ಲೂ ಆಗಬೇಕಿದೆ.
ವಚನ ಸಾಹಿತ್ಯದಲ್ಲಿ ಹಲವಾರು ಶರಣರು, ತಮ್ಮ ವಚನದ ಮೂಲಕ ಜಗದ ಅಜ್ಞಾನ, ಅಂಧಕಾರಗಳು ತೊಲಗಿ, ಸರ್ವ ಜಾತಿಯ ಮನುಜರೆಲ್ಲರೂ ಸಮಾನರು, ಕಾಯಕವನ್ನು ಯಾರು ನಿಷ್ಠೆಯಿಂದ ಮಾಡಿ ಇತರರಿಗೆ ನೆರವಾಗುತ್ತಾರೋ ಅವರು ಶ್ರೇಷ್ಠರು ಎಂಬ ಅನೇಕಾನೇಕ ಸಮಾಜೋದ್ಧಾರಕವಾದ, ನೂರಾರು ಉತ್ಕೃಷ್ಠವಾದ ಚಿಂತನ-ಮಂಥನಗಳನ್ನು ಶರಣರು ನುಡಿದಂತೆ ನಡೆದ ಬದುಕನ್ನು ಸಾರ್ಥಕವಾದ ಜೀವನಾಮೃತವಾದ ಸೆಲೆಯನ್ನು ನೆಲೆಯನ್ನು ತಿರುಳನ್ನು ಸರ್ವರಿಗೂ ಧಾರೆ ಎರೆದಿದ್ದಾರೆ. ಅವರ ಸನ್ಮಾರ್ಗದಲ್ಲಿ ಶರಣ ಸಾಹಿತ್ಯದ ದಿಕ್ಕಿನಲ್ಲಿ, ಪರಂಪರೆಯ ಜಾಡಿನಲ್ಲಿ ಯುವಜನಾಂಗವು ನಡೆದರೆ ನಿಜವಾದ ಭವ್ಯ ಭಾರತದ ಪರಿಕಲ್ಪನೆಯು, ಶೀಘ್ರ ಹೆಮ್ಮರವಾಗಿ ಫಲ ನೀಡುತ್ತದೆ. ವಿಶ್ವದಲ್ಲಿಯೇ ಭಾರತವು ಅಗ್ರಮಾನ್ಯ ರಾಷ್ಟ್ರವಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲದಂತಾಗುತ್ತದೆ.
ಸಮಯ, ಅಧಿಕಾರ, ಹಣ, ಯೌವ್ವನದ ಶರೀರ ಮಾನವನಿಗೆ ಎಲ್ಲಾ ಸಮಯದಲ್ಲೂ ನಮ್ಮ ಹಿಂದೇನೆ, ಪರವಾಗಿ ಇಲ್ಲದಿರುವುದೆಂದಿಗೂ ದಿಟ; ಸತ್ಯ. ನ್ಯಾಯ, ನೀತಿ, ಧರ್ಮ, ಪ್ರಾಮಾಣಿಕತೆ, ಒಳ್ಳೆಯ ಕೆಲಸ, ಸೇವಾ ಮನೋಭಾವನೆ ನಿತ್ಯದ ಕಾಯಕ ಪ್ರಜ್ಞೆ, ಒಳ್ಳೆಯ ಸತ್ಸಂಗ ತಿಳುವಳಿಕೆ ಉತ್ತಮವಾದ ಮನಸ್ಸುಗಳು ಯಾವಾಗಲೂ ನಮ್ಮ ಪರವಾಗಿರುತ್ತವೆ; ಇಂತಹ ಮೌಲ್ಯಯುಕ್ತ ಸಾರವನ್ನು ಪಡೆಯಲು ವಚನ ಸಾಹಿತ್ಯವನ್ನು ಓದಬೇಕು. ಇದಕ್ಕಾಗಿ ಒಂದೆರೆಡು ವಚನಗಳ ಬಗ್ಗೆ ವಿಶ್ಲೇಷಿಸಬೇಕಾಗಿದ್ದು ಇಲ್ಲಿ ಅನಿವಾರ್ಯವಾಗಿದೆ.
“ಸಾರ ಸಜ್ಜನರ ಸಂಗವನ್ನು ಮಾಡುವುದು,
ದೂರ, ದುರ್ಜನರ ಸಂಗ ಬೇಡವಯ್ಯ
ಆವ ಹಾವಾದರೇನು? ವಿಷವೊಂದೇ
ಅಂಥವರ ಸಂಗ ಬೇಡವಯ್ಯ
ಅಂತರಂಗ ಶುದ್ಧವಿಲ್ಲದವರ ಸಂಗ
ಸಿಂಗಿ ಕಾಳಕೂಟ ವಿಷವೋ
ಕೂಡಲ ಸಂಗಮದೇವ
ಒಳ್ಳೇಯ ಜನರ ಸಂಗವು ಹೆಜ್ಜೇನು ಸವಿದಂತೆ, ಯುವ ಜನಾಂಗವು ಇಂದು ತಮ್ಮ ಜೀವನದ ಶ್ರೇಯೋಭಿವೃದ್ಧಿಗಾಗಿ; ದುರ್ಜನರಿಂದ ಮೋಸ, ವಂಚನೆಕಾರರಿಂದ ಬಹು ಅಂತರ ಕಾಪಾಡಿಕೊಂಡು ಅವರಿಂದ ತಪ್ಪಿಸಿಕೊಂಡರೆ, ವಿಷದ ಹಾವಿನ ಬಾಯಿಂದ ತಪ್ಪಿಸಿಕೊಂಡ ಹಾಗೆ, ಎಂಬ ನೀತಿಯ ಸಾರವನ್ನು ಹೇಳಿದ್ದಾರೆ. ಹಾಗೆಯೇ ಇನ್ನೊಂದು ವಚನವನ್ನು ಅವಲೋಕಿಸುವುದಾದರೆ,
“ಪಲ್ಲಕ್ಕಿ ಹೊತ್ತರೆ ಬಡತನ ಹೋಗಲಾರದು
ದೇವರಿಗೆ ನಿತ್ಯ ನೈವೇದ್ಯ ನೀಡಿದರೆ ದಾರಿದ್ರ್ಯ ಹೋಗಲಾರದು !
ಪಾದಯಾತ್ರೆ ಗೈದರೆ ದೇವರು ಒಲಿಯಲಾರ
ಅರ್ಚನೆ ಪೂಜೆ ಮಾಡಿದರೆ ಸಾಲಗಾರರು ಬೆನ್ನತ್ತದೇ ಬಿಡಲಾರರು
ಹೋಮ ಹವನ, ಯಜ್ಞ ಯಗಾದಿಗಳಿಂದ ಬದುಕು
ಬದಲಾಗದು” !!
ಎಂಬ ಅನೇಕಾನೇಕ ವಿಚಾರಧಾರೆಗಳನ್ನು ಸರಳ ಸುಂಧರವಾದ ವಚನಗಳ ಮೂಲಕ ಬಸವಣ್ಣನವರು ಅಂದಿಗೂ, ಇಂದಿಗೂ ಪ್ರಸ್ತುತವಾದ ದಿವ್ಯ ಜ್ಞಾನವನ್ನು “ಕಾಯಕದಿಂದಲೇ ಕೈಲಾಸ”ವೆಂಬ ಉತ್ಕೃಷ್ಠವಾದ ಸಂದೇಶವನ್ನು ಅನುಭವ ಮಂಟದಪಲ್ಲಿ ಜಾತಿಯ ತಾರತಮ್ಯವಿಲ್ಲದೆ, ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿ, ಜಗತ್ತಿಗೆ ಕ್ರಾಂತಿಕಾರಕವಾದ ವಚನಗಳನ್ನು ಕಟ್ಟಿಕೊಟ್ಟ 12ನೇ ಶತಮಾನದ ಶರಣ-ಶರಣೆಯರಾದ ಪ್ರಮಥರನ್ನು ನಾವು ಇಂದು ಸ್ಮರಿಸಿ, ಅವರ ಆದರ್ಶ ಪಾಲನೆಯನ್ನು ಯುವ ಜನಾಂಗವು ನಾಡಿನಾದ್ಯಂತ ಪಸರಿಸಬೇಕಾಗಿದೆ. ಆಗ ಮಾತ್ರ ನಾವು ನೀವು ಕಂಡ ಬಸವ ಕ್ರಾಂತಿಯ ಪ್ರಜ್ವಲ ಬೆಳಕು, ಭವಿಷ್ಯದ ಹೊಂಗನಸನ್ನಾಗಿ ಬದಲಾವಣೆಯಾಗಿಯೂ ಬದಲಾಗಬಹುದು.
ಮಾನವನ ಸಮಗ್ರವಾದ ಕಲ್ಯಾಣ ಕಾರ್ಯ ಚಟುವಟಿಕೆಗೆ ಅಡ್ಡಗಾಲುಗಳಾಗಿರುವುದು ಹತ್ತು ಹಲವಾರು ಕಾರಣಗಳಿವೆ. ಅವುಗಳ ಪರಿಹಾರಕ್ಕಾಗಿ 12ನೇ ಶತಮಾನದ ಶಿವಶರಣೆಯರೆಲ್ಲರೂ ತಮ್ಮ ಹರಿತವಾದ ವಚನ ಸಾಹಿತ್ಯದ ಮೂಲಕ ಅಜ್ಞಾನ-ಅಂಧಕಾರಗಳು, ಸಮಾನತೆಗಳನು ತಿಳಿ ಹೇಳುತ್ತಾ ಬಂದಿದ್ದಾರೆ. ಜಗತ್ತಿನ ಭಾರತದ ಎಲ್ಲಾ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣಗಳು ಸಜ್ಜನ ನಿಷ್ಕೀಯತೆಗಳಿಂದ, ಅಜ್ಞಾನ, ಅಹಂಕಾರ, ನಾನೆಂಬ, ಶ್ರೇಷ್ಠರೆಂಬ ದುರಂಹಕಾರಗಳು, ಸರ್ವರಲ್ಲಿ ಮನೆ ಮಾಡಿರುವುದರಿಂದ; ಇವುಗಳನ್ನರಿತ ಶರಣರು, ಸಾಧು ಸಂತರು ಹೀಗೆ ಹೇಳಿದ್ದಾರೆ; ಲಿಂಗ ಧರಿಸಿದ ಮೇಲೆ ಮನುಷ್ಯನಿಗೆ ಭಯ ಮತ್ತು ಬ್ರಾಂತಿ ಇರಬಾರದು, ಲಿಂಗ ಧರಿಸಿದವರಿಗೆ ಜಾತಿ ಇರಬಾರದು, ಮನುಷ್ಯತ್ವ ಮಾತ್ರ ಇರಬೇಕು, ಎಂದು ನಿಜಗುಣ ಶಿವಯೋಗಿಗಳು ಹೇಳಿದ್ದು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕಾಗಿದೆ.
ಕಾಯಕ, ಪ್ರಸಾದ ಮತ್ತು ದಾಸೋಹ ಪದಗಳು, ಕೇವಲ ಲಿಂಗಾಯತ ಪದಗಳಷ್ಟೇ ಅಲ್ಲವೇ ಅಲ್ಲ, ಅವುಗಳು ವಿಶ್ವ ಗುರು ಬಸವಣ್ಣನವರ ಅರ್ಥಶಾಸ್ತ್ರದ ಸೂತ್ರಗಳಾಗಿವೆ. ಕಾಯಕವೆಂದರೆ, ಯೋಗ್ಯವಾದ ಉತ್ಪಾದನೆಯ ತತ್ವ ಅಡಗಿದೆ. ಪ್ರಸಾದವೆಂಬುದು ಸದ್ಭಳಕೆಯೂ ಹಾಗೂ ದಾಸೋಹವೆಂಬುದು ಯೋಗ್ಯ ವಿತರಣೆಯ ಪರಿಕಲ್ಪನೆಯಾಗಿದೆ. ಇಂತಹ ದಾಸೋಹ ಕಾರ್ಯ, ಪ್ರಸಾದ, ಭಯ, ಭಕ್ತಿ, ಯುಕ್ತಿ ಶ್ರಮ ಜೀವನದ ತತ್ವ ಸಿದ್ಧಾಂತಗಳ ಅರಿತುಕೊಂಡು; ಬಸವ ಯುಗದ ಶಿವಶರಣರ ಸನ್ಮಾರ್ಗದಲ್ಲಿ ಪ್ರತಿಯೊಬ್ಬ ಯುವ ಸಮುದಾಯದ ರುವಾರಿಗಳು ಪ್ರಜ್ಞಾವಂತರಾಗಿ, ವಚನ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ, ಎಂಬುದು ಶರಣರ, ಸಂತರುಗಳ ಮಹತ್ವಾಕಾಂಕ್ಷಿಯುಳ್ಳ ಚಿಂತನೆಯಾಗಿದೆ.
ವಚನ ಸಾಹಿತ್ಯದ ಬಗ್ಗೆ ಎಷ್ಟು ಬರೆದರೂ ಸಾಲದು, ವಚನ ಸಾಹಿತ್ಯದ ಶಕ್ತಿಯು ಆಕಾಶ-ಭೂಮಿ ಪಾತಾಳಕ್ಕೂ ಮಿಗಿಲಾದದ್ದು, ಒಬ್ಬೊಬ್ಬ ಶಿವಶರಣ-ಶರಣೆಯರ ವಚನ ಸಾಹಿತ್ಯವು ಜಗತ್ತಿಗೆ ಶಕ್ತಿ, ಯುಕ್ತಿ ಮುಕ್ತಿಯನ್ನು ತಂದು ಕೊಡಬಲ್ಲ ಮಹಾನ್ ವಿಚಾರಧಾರೆಗಳು, 12ನೇ ಶತಮಾನದಿಂದ 21ನೇ ಶತಮಾನದ ಅಂಚಿನವರೆಗೂ ವಚನಗಳ ಸಾರ್ಥಕತೆಯು ಇದೆ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಇದಕ್ಕೆ ಭಾರತದ, ಕರ್ನಾಟಕದ ಸಾಧು ಸಂತರು, ಸತ್ಪುರಷರು ಹೇಳುವುದು ಬಸವಣ್ಣನವರ ಅನುಭವ ಮಂಟಪದ ವಚನ ಕ್ರಾಂತಿಯ ಹಾದಿಯಲ್ಲಿ; ಯುವ ಜನಾಂಗ ಮುಂದೆ ಮುಂದೆ ಸಾಗಬೇಕು. ವಚನದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು; ಜಗತ್ತಿಗೆ ಭಾರತದ ಸರ್ವ ಶ್ರೇಷ್ಠತೆಯನ್ನು ಮೆರೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಶಿವಶರಣರ ಪರಂಪರೆಯಲ್ಲಿ ಮುನ್ನಡೆದು ಅವರ ಆತ್ಮಕ್ಕೂ ವಿಚಾರಧಾರೆಗಳಿಗೆ ಶಕ್ತಿ, ಯುಕ್ತಿ ತುಂಬುವಲ್ಲಿ ಪ್ರಪಂಚಕ್ಕೆ ಮಾದರಿಯಾಗಬೇಕು ಎಂಬುದು ಮುಂದಾಗಬೇಕೆನ್ನುವುದು ಅನುಭಾವಿಕರ ನುಡಿಗಳಾಗಿವೆ.
“ರಾಜಕೀಯ ಪ್ರಚಾರ ಮಾಡಲು ಹಳ್ಳಿ, ರಾಜ್ಯ, ದೇಶದಲ್ಲಿ ಸಾವಿರಾರು ಯುವಕರು ಸಿಗುತ್ತಾರೆ. ಆದರೆ, ಜಾತಿಯೆಂಬ ಪಿಡುಗು, ಅವ್ಯವಸ್ಥೆಯ ಆಗರವನ್ನು ಮುರಿಯುವ ಅಥವಾ ಅಸ್ಪೃಶ್ಯತೆಯ ನಿರ್ಮೂಲನೆಯ ಕೆಲಸಕ್ಕೆ ಒಬ್ಬರೇ ಒಬ್ಬ ಯುವಕರು ಸಿಗುವುದಿಲ್ಲ” ಎಂಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ವಿಚಾರಧಾರೆಯನ್ನು ಕೇಳಿದಾಗ ಇಂದಿಗೂ ಭಾರತ, ಕರ್ನಾಟಕ, ಇತರೆ ರಾಜ್ಯಗಳಲ್ಲಿ ಯುವ ಜನಾಂಗವನ್ನು ಭಾರತೀಯರನ್ನು, ಕನ್ನಡಿಗರನ್ನು ಕಾಡುವ ಪ್ರಶ್ನೆ ಜಾತಿ ಎಂಬ ಮಹಾ ಪಿಡುಗು, ದೇಶದ ಏಕತೆ, ಐಕ್ಯತೆ, ಸಮಗ್ರವಾದ ಪ್ರಗತಿಗೆ ಮಾರಕವಾಗಿದ್ದು, ಇಂತಹ ಅವೈಜ್ಞಾನಿಕ ಮಡಿವಂತಿಕೆಗಳೆಂಬ ಅಜ್ಞಾನ, ಅನಾಚರಗಳು ಬದಿಗೊತ್ತಲು, ಬೇರು ಸಹಿತ ಕಿತ್ತು ಹಾಕಲು; ಇಂದಿಗೂ ನಮ್ಮೆಲ್ಲರಿಗೆ ಸಾಧ್ಯವಾಗಿಲ್ಲ. ಇದಕ್ಕೆ ಪರಿಹಾರವೆಂದರೆ, 12ನೇ ಶತಮಾನದ ಶರಣ-ಶರಣೆಯರ ವಚನ ಸಾಹಿತ್ಯದಿಂದ ಸಾಧ್ಯವಿದ್ದು, ಯುವ ಜನಾಂಗ ಮತ್ತು ಪ್ರಜೆಗಳೆಲ್ಲರೂ ಸೇರಿದಂತೆ ವಚನ ಸಾಹಿತ್ಯವನ್ನು ಓದಿ ತಿಳಿದು ಅದರ ಸದಾಶಯದಂತೆ ಬಾಳಿ ಬದುಕಬೇಕೆಂಬುದು ಸಮಾಜದ ಹಿತ ಚಿಂತಕರುಗಳ ಸದಾಭಿಪ್ರಾಯವಾಗಿದೆ.
ಸ್ವಾಮಿ ವಿವೇಕಾನಂದರು ಹೇಳಿದಂತೆ “ಯುವಕರೇ ಏಳಿ, ಎದ್ದೇಳಿ, ನಿಮ್ಮ ಗುರಿ ತಲುಪುವವರೆಗೆ ವಿಶ್ರಮಿಸದಿರಿ”, ಭವ್ಯ ಭಾರತದ ಸುವರ್ಣ; ಐತಿಹಾಸಿಕ ಚರಿತ್ರೆಯ ಕಂಪನು, ಇಂಪನು, 12ನೇ ಶತಮಾನದ ಭಾರತದ ಶ್ರೇಷ್ಠ ವಚನ ಸಾಹಿತ್ಯದ ಐಸಿರಿಯನ್ನು ಮಲಗಿರುವ ಸಮುದಾಯಕೆ ಸಾರಿ ಸಾರಿ ಹೇಳಿ, ಜಗದಲ್ಲೆಲ್ಲಾ ವಚನ ಸಾಹಿತ್ಯದ ಪಿತಾಮಹ, ಹರಿಕಾರ ಮತ್ತು ಪ್ರಪಂಚಕ್ಕೆ ಅನುಭವ ಮಂಟಪದಿಂದ ಸಮಾನತೆ, ಏಕತೆ, ಸಮಗ್ರ ಪ್ರಗತಿಯ, ಆರ್ಥಿಕ ನೀತಿಯ, ಸಾರವನ್ನು ಕಟ್ಟಿಕೊಟ್ಟಿರುವ ಬಸವಕ್ರಾಂತಿ, ಯುಗದ ಪುರುಷರಾಗಿರುವ, ಅಣ್ಣ ಬಸವಣ್ಣನವರ ಆದರ್ಶ ಚಿಂತನೆಗಳು ಇಂದಿಗೂ ಮಾದರಿಯಾಗಿವೆ. ಈ ಮೇಲೆ ಹೇಳಿದ ಎಲ್ಲಾ ದಾರ್ಶನಿಕರ ಧ್ಯೇಯೋದ್ದೇಶಗಳು ಒಂದೇ ಆಗಿದೆ. ಭಾರತವು ಶಕ್ತಿಮಾನ ರಾಷ್ಟ್ರವಾಗಿ, ಜಗತ್ತಿಗೆ ಬೆಳಕಾಗಬೇಕಾಗಿರುವುದು, ಇಂದು ಯುವಜನಾಂಗವು, ಶ್ರೇಷ್ಠವಾದ ವಚನ ಸಾಹಿತ್ಯದ ಸದುದ್ದೇಶಗಳಿಂದ ಭಾರತದ ಸರ್ವವಿಘ್ನಗಳಿಗೆ ವಿಮೋಚನಾಕಾರರಾಗಿ ತಾವು ದೇಶದ, ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಆರಿಸಲು ಸನ್ನದ್ದರಾಗಿ. ಏಳಿ, ಎದ್ದೇಳಿ, ಯವಕರೇ, ಯುವತಿಯರೇ, ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ನಿಮ್ಮ ಉಳಿವಿಗಾಗಿ ಪ್ರಜಾಪ್ರಭುತ್ವದ ಜಾತ್ಯಾತೀತ ಜಯಕ್ಕಾಗಿ, ಹಿರಿಯರ ಆದರ್ಶವಾದ ಹೆಜ್ಜೆಗಳಲ್ಲಿ ಹೆಜ್ಜೆ ಹಾಕಿರಿ ಎಂದು ಹೇಳಿರುವುದು ಸೂಕ್ತವಾದ ಮಾರ್ಗದರ್ಶನವಾಗಿದೆ. ಇವುಗಳ ಪರಿಪಾಲನೆ ನಿಮ್ಮ ಕೈಯಲ್ಲಿದೆ.
ಕೊನೆಯ ಮಾತು : ಯಾವುದೇ ದೇಶ, ರಾಜ್ಯ ಅತ್ಯುನ್ನುತ ಸ್ಥಾನವನ್ನು ಕಂಡಿದೆ ಎಂದರೆ ಅದು ಆ ದೇಶದ ಯುವಕರಲ್ಲಿನ ಶಕ್ತಿ-ಯುಕ್ತಿಗಳಿಂದ ಸಾಧ್ಯವಾಗಿದೆ, ಎಂಬ ಅನುಭವಿಕರ ನುಡಿಯಂತೆ ನಮ್ಮ ಭಾರತದ ಜನಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚಿರುವ ಯುವಕ-ಯುವತಿರೆಲ್ಲರೂ ಇಂದೇ ಪ್ರತಿಜ್ಞೆ ಮಾಡಬೇಕಾಗಿದೆ. ಬುದ್ಧ, ಬಸವ, ಅಂಬೇಡ್ಕರರ, ಮಹಾತ್ಮಗಾಂಧೀಜಿ, ಸುಭಾಷಚಂದ್ರ ಬೋಸ್, ಡಾ.ರಾಧಾಕೃಷ್ಣ, ನೆಹರೂ, ಇಂದಿರಾಗಾಂಧಿ, ಮನಮೋಹನಸಿಂಗ್, ವಾಜಪೇಯಿ, ನರೇಂದ್ರಮೋದಿ ಯವರಂತೆ ಹಗಲಿರುಳು ದೇಶಕ್ಕಾಗಿ ದುಡಿಯುವ ಸಂಕಲ್ಪಗೈದು ಅವರಂತೆ 24*7 ಕಾರ್ಯಪ್ರವೃತ್ತರಾದರೆ, ನಮ್ಮ ದೇಶವು ಕೂಡ 12ನೇ ಶತಮಾನದಲ್ಲೇ ಕನಸು ಕಂಡ, ಅನುಭವ ಮಂಟಪದ ಶರಣ-ಶರಣೆಯರ ವಚನ ಕ್ರಾಂತಿಯ, ಸಮೃದ್ಧಿಯು, ಕೇವಲ ಭಾರತಕ್ಕೆ ಸೀಮಿತವಲ್ಲ. ಜಗತ್ತಿಗೆ ಹರಡಲಿದೆ. ಇದಕ್ಕಾಗಿ ಯುವ ಜನರಲ್ಲಿ ವಿನಂತಿ, ‘ಏನಾದರೂ ಆಗು ನೀ ಮೊದಲು ಮಾನವನಾಗು’ ಎಂಬ ಸಿದ್ಧಯ್ಯ ಪುರಾಣಿಕರ ವಚನದ ಸಾರದಂತೆ ಮೊದಲು ನೀವು ಮನೆ ಮನವ ಗೆದ್ದು ಆನಂತರ ಮಾರು ಗೆಲ್ಲು ಎಂಬ ಗಾದೆಯಂತೆ ಸಂಸ್ಕಾರವಂತರಾಗಿ ಜಗತ್ತಿಗೆ ಭಾರತದ ಹಿರಿಯಮೆಯನ್ನು ಎತ್ತಿ ತೋರುವ ರಾಯಭಾರಿಗಳಾಗಬೇಕು, ಅಂದಾಗ ಮಾತ್ರ ಅನುಭವ ಮಂಟಪದ ಸದುದ್ದೇಶ ಸಾರ್ಥಕವಾಗುತ್ತದೆ. ಆಗಲೇ ಭಾರತವು ಜಗತ್ತಿಗೆ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲದಾಗಿದೆ.
ಲೇಖಕರು : ಜಿ.ಎಸ್. ಗೋನಾಳ
ಕೊಪ್ಪಳ