ಮನರಂಜನೆ

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ನಿಧನ

ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ನಿಧನ

ಚೆನ್ನೈ, ಏಪ್ರಿಲ್ 17: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ನಿಧನರಾಗಿದ್ದಾರೆ.  ಅವರಿಗೆ 59 ವರ್ಷ ವಯಸ್ಸಾಗಿತ್ತು.  ಶನಿವಾರ ಮುಂಜಾನೆ 5 ಗಂಟೆಗೆ ಕೊನೆಯುಸಿರೆಳೆದಿರುವುದಾಗಿ ಮೂಲಗಳು ತಿಳಿಸಿವೆ. ಹೃದಯಾಘಾತ ಸಂಭವಿಸಿದ ಕಾರಣ ಶುಕ್ರವಾರ ಮಧ್ಯಾಹ್ನ ನಟ ವಿವೇಕ್ ಎಸ್‌ಇಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದರು.  ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ, ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಇಂದು ಏಪ್ರಿಲ್ 17ರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಅವರು ತಮ್ಮ ಪತ್ನಿ ಹಾಗೂ ಪುತ್ರಿಯಲ್ಲಿ ಅಗಲಿದ್ದಾರೆ. 

ನಟ ವಿವೇಕ್ ಅವರ ನಿಧನಕ್ಕೆ ದಕ್ಷಿಣ ಚಿತ್ರರಂಗ ಸಂತಾಪ ಸೂಚಿಸಿದೆ. ಅವರು ಗುರುವಾರವಷ್ಟೆ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಕೊರೊನಾ ವೈರಸ್ ಲಸಿಕೆ ಪಡೆದ ಮರುದಿನವೇ ಹೃದಯಾಘಾತಕ್ಕೆ ಒಳಗಾಗಿದ್ದ ಅನುಮಾನ ಮೂಡಿಸಿತ್ತು. ಬಳಿಕ ವೈದ್ಯರು ಈ ಕುರಿತು ಸ್ಪಷ್ಟನೆ ನೀಡಿದ್ದರು. ಕೋವಿಡ್ ಲಸಿಕೆ ಪಡೆದುದ್ದರಿಂದ ಹೃದಯಾಘಾತ ಸಂಭವಿಸಿಲ್ಲ ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದರು. ತಮಿಳು ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಆರಂಭಿಸಿದ್ದ ವಿವೇಕ್ ಕಳೆದ ಮೂರುವರೆ ದಶಕದಿಂದ ಸಕ್ರಿಯರಾಗಿದ್ದರು.  ಕೆ ಬಾಲಚಂದಿರ್ ಅವರು ವಿವೇಕ್ ಅವರನ್ನು ಚಿತ್ರರಂಗಕ್ಕೆ ಪರಿಚಿಯಿಸಿದ್ದರು. ತಮಿಳಿನ ಜೊತೆಗೆ ತೆಲುಗು ಹಾಗೂ ಕನ್ನಡದ “ಚಂದ್ರ” ಚಿತ್ರದಲ್ಲಿಯು ನಟಿಸಿದ್ದಾರೆ. ಚಿತ್ರರಂಗಕ್ಕೆ ವಿವೇಕ್ ನೀಡಿರುವ ಕೊಡುಗೆ ಗೌರವಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಅದಲ್ಲದೇ ಫಿಲಂ ಫೇರ್ ಪ್ರಶಸ್ತಿ, ತಮಿಳು ರಾಜ್ಯ ಚಲಚನಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಎಲ್ಲ ಪ್ರಮುಖ ಹಾಗೂ ಉದಯೋನ್ಮುಖ ನಟರ ಜತೆಗೆ ವಿವೇಕ್ ತೆರೆ ಹಂಚಿಕೊಂಡಿದ್ದರು.  ಪ್ರೇಕ್ಷಕರಿಗೆ ಹಾಸ್ಯ ರಸಾಯನ ಉಣಬಡಿಸುತ್ತಿದ್ದರು.

  


ಸುದ್ದಿ ಓದಿ