ಕೇಂದ್ರ ಸರ್ಕಾರದ ವಿಸ್ಟಾ ಪ್ರಾಜೆಕ್ಟ ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ
ನವದೆಹಲಿ, ಜನವರಿ 5: ಬೃಹತ್ ಸಂಸತ್ ಭವನ ಒಳಗೊಂಡಂತೆ ವಿವಿಧ ಯೋಜನೆಗಳನ್ನು ನಿರ್ಮಿಸುವ ಕೇಂದ್ರ ಸರ್ಕಾರದ ವಿಸ್ಟಾ ಕಾಮಗಾರಿ ಯೋಜನೆಗೆ ಸುಪ್ರೀಂಕೋರ್ಟ್ ಕೊನೆಗೂ ಹಸಿರು ನಿಶಾನೆ ತೋರಿಸಿದೆ.ಸರ್ಕಾರ ನಿರ್ಮಾಣ ಕಾರ್ಯ ನಡೆಸಲು ಅಡ್ಡಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಸರ್ಕಾರ ಮತ್ತು ಸೆಂಟ್ರಲ್ ವಿಸ್ಟಾ ಸಮಿತಿಯ ಯೋಜನೆಗೆ ಅನುಮತಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅನೇಕರು, ಅದರ ಪಾರದರ್ಶಕತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಎಂ ಖನ್ವಿಲ್ಕರ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಈ ಆದೇಶ ನೀಡಿದೆ.ಪರಿಸರ ಸಂಬಂಧಿ ಅನುಮೋದನೆ, ಶಾಸನ ಮತ್ತು ಮುನಿಸಿಪಲ್ ಕಾನೂನುಗಳ ಉಲ್ಲಂಘನೆ, ಪಾರಂಪರಿಕ ತಾಣ ಸಂರಕ್ಷಣೆ, ದೆಹಲಿ ಅಭಿವೃದ್ಧಿ ಕಾಯ್ದೆಯಡಿ ಭೂಮಿಯ ಬದಲಾವಣೆ ಮತ್ತು ಸಾರ್ವಜನಿಕ ಅಹವಾಲು ಆಲಿಕೆಗೆ ಆಹ್ವಾನಿಸುವ ಸ್ವರೂಪ ಹಾಗೂ ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆ ಕುರಿತಂತೆ ಅನೇಕ ಬಗೆಯ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಯೋಜನೆಯ ಬಿಡ್ಡಿಂಗ್, ನೇಮಕಾತಿ ಮತ್ತು ಸಲಹೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ನೋಟಿಸ್ಗಳನ್ನು ಸುಪ್ರೀಂಕೋರ್ಟ್ ಅನುಮೋದಿಸಿತು.ನಿರ್ಮಾಣ ಸ್ಥಳಗಳಲ್ಲಿ ದೂಳು ಮತ್ತು ಹೊಗೆ ನಿಗ್ರಹ ಗಳನ್ನು ಅಳವಡಿಸಬೇಕು ಮತ್ತು ಸ್ಮಾಗ್ ಟವರ್ ಸ್ಥಾಪಿಸಬೇಕು ಎಂದು ನ್ಯಾಯಾಲಯ ಷರತ್ತು ಹಾಕಿದೆ. ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿ ಆರಂಭಿಸಲು ಪಾರಂಪರಿಕ ತಾಣ ಸಮಿತಿಯ ಅನುಮತಿ ಅಗತ್ಯ ಎಂದೂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.