ಡಿ 17 ರಂದು ಮೋದಿ-ಶೇಖ್ ಹಸೀನಾ ನಡುವೆ ವರ್ಚುವಲ್ ಸಭೆ
ಢಾಕಾ, ಡಿ 11 : ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು
ಡಿ 17 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ
ವರ್ಚುವಲ್ ಸಭೆ ನಡೆಸಲಿದ್ದು, ವಿವಿಧ ವಿಷಯಗಳ ಕುರಿತಂತೆ
ಈ ವೇಳೆ ಚರ್ಚೆ ನಡೆಯಲಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು
ಶುಕ್ರವಾರ ತಿಳಿಸಿದ್ದಾರೆ.
ಎರಡೂ ದೇಶಗಳ ನಡುವಿನ ಚರ್ಚೆಗಳ ನಂತರ ಸಭೆಯ ದಿನಾಂಕ ಮತ್ತು ಸಮಯವನ್ನು ಅಂತಿಮಗೊಳಿಸಲಾಗಿದೆ. ಉಭಯ ದೇಶಗಳ ಪ್ರಧಾನಿಗಳ ನಡುವಿನ ಸಭೆಗೂ ಮುನ್ನ ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಅಂತರ ಸಚಿವಾಲಯದ ಸಭೆ ಈಗಾಗಲೇ ನಡೆಸಲಾಗಿದೆ. ಉಭಯ ದೇಶಗಳ ನಡುವಿನ ಸೌಹಾರ್ದ ಮತ್ತು ಸುರಕ್ಷಿತ ಗಡಿ ಹಾಗೂ ಭಾರತದ ಸಾಲ ನೆರವಿನ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ವಿಷಯಗಳನ್ನು ಮಾತುಕತೆ ವೇಳೆ ಚರ್ಚಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಡಿ 17ರಂದು ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಉಭಯ ನಾಯಕರ ನಡುವಿನ ಮಾತುಕತೆ ಸುಮಾರು ಒಂದೂವರೆ ತಾಸು ನಡೆಯಲಿದೆ. ಇದೇ ವೇಳೆ ಇಬ್ಬರೂ ಪ್ರಧಾನಿಗಳು ಹಲ್ದಿಬಾರಿ-ಚಿಲಹತಿ ರೈಲ್ವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಮುಂದಿನ ಮಾರ್ಚ್ 26 ರಂದು ಢಾಕಾಗೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕರೋನಾ ಪರಿಸ್ಥಿತಿ ಸುಧಾರಿಸಿದರೆ ಮೋದಿಯವರು ಢಾಕಾಗೆ ಭೇಟಿ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.