ಲೇಖನಗಳು

ಕೇವಲ ಎಂಟು ವರ್ಷದವಳಿದ್ದಾಗಲೇ ಬ್ರಿಟಿಷರಿಗೆ “ಗೋಬ್ಯಾಕ್ ಸೈಮನ್‌” ಎಂಬ ಕೂಗು ಹಾಕಿದ ವೀರ ಮಹಿಳೆ ಉಷಾ ಮೆಹ್ತಾ

ಕೇವಲ ಎಂಟು ವರ್ಷದವಳಿದ್ದಾಗಲೇ ಬ್ರಿಟಿಷರಿಗೆ “ಗೋಬ್ಯಾಕ್ ಸೈಮನ್‌” ಎಂಬ ಕೂಗು ಹಾಕಿದ ವೀರ ಮಹಿಳೆ ಉಷಾ ಮೆಹ್ತಾ

ಉಷಾ ಮೆಹ್ತಾ ಮೊದಲು ಗುಜರಾತ್ ನಲ್ಲಿದ್ದವರು .ಐದು ವರ್ಷದ ಮಗುವಾಗಿದ್ದಾಗಲೇ ಅವರ ಮನೆಯ ಹತ್ತಿರವೇ ಗಾಂಧೀಜಿಯವರು ಕ್ಯಾಂಪ್ ಹಾಕಿದ್ದರು. ಆ ಕ್ಯಾಂಪಿಗೆದಿನವೂ ಹೋಗುತ್ತಿದ್ದ ಉಷಾ ಅಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುತ್ತಿದ್ದಳು .ಬಾಲ್ಯದಲ್ಲೇ /ಉಷಾ ಮೆಹ್ತಾಳ ಮೇಲೆ ನೇರವಾದ ಪ್ರಭಾವ ಬೀರಿದವರು ಮಹಾತ್ಮ ಗಾಂಧೀಜಿಯವರು.  

ಕೇವಲ ಎಂಟು ವರ್ಷದವಳಿದ್ದಾಗಲೇ ಗೋಬ್ಯಾಕ್ ಸೈಮನ್ ಎಂಬ ಕೂಗನ್ನು ಹಾಕಿದವಳು ಉಷಾ. ಅವಳ ತಂದೆ ಬ್ರಿಟಿಷ್ ಸರ್ಕಾರದಲ್ಲಿ ನ್ಯಾಯಾಧೀಶರಾಗಿದ್ದರು. ಆದರೂ ಕೂಡ ಉಷಾ ಬ್ರಿಟಿಷರ ವಿರುದ್ಧವೇ ಘೋಷಣೆ ಕೂಗುತ್ತಿದ್ದಳು. ಒಂದು ಸಲ ಎಲ್ಲ ಚಿಕ್ಕ ಮಕ್ಕಳು ಯುವಜನರು ಮತ್ತು ಉಷಾ ತ್ರಿವರ್ಣ ಧ್ವಜವನ್ನುಹಿಡಿದು ಬ್ರಿಟಿಷರ ಬಂಗಲೆ, ಮದ್ಯದಂಗಡಿಯ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಆಗ ಪೊಲೀಸರು ಎಲ್ಲರ ಕೈಯಿಂದ ಧ್ವಜವನ್ನು ಕಿತ್ತೆಸೆದರು. ಅದು ಪುಟ್ಟ ಮಕ್ಕಳ ಮೇಲೆ ವಿಪರೀತ ಪರಿಣಾಮವನ್ನುಂಟು ಮಾಡಿತು. ಅವರೆಲ್ಲ ಮನೆಗೆ ಬಂದು ಹೇಳಿದಾಗ, ತಂದೆ ತಾಯಿಗಳು ತ್ರಿವರ್ಣ ಧ್ವಜದ ಬಣ್ಣದ ಉಡುಗೆಯನ್ನೇ ಹೊಲಿಸಿ, ಹಾಕಿ ಕಳಿಸಿದರು. ಧ್ವಜವಾದರೆ ಕಿತ್ತೆಸೆಯಬಹುದು, ಉಡುಗೆ ಕೂಡ ಕಿತ್ತುಕೊಳ್ಳಬಹುದು, ಆದರೆ ಮನಸ್ಸಿನ ಭಾವನೆಯಲ್ಲಿ ರಾಷ್ಟ್ರ ಪ್ರೇಮ ಅಚ್ಚೊತ್ತಿರುವಾಗ ಅದನ್ನು ಹೇಗೆ ಕಸಿದುಕೊಳ್ಳಬಲ್ಲರು  ಎಂದು ಪೋಲಿಸರಿಗೆ ಆ ಗುಂಪು ಎಚ್ಚರಿಸಿತ್ತು.  

ಆಗಸ್ಟ್‌ 9 1942 ರಲ್ಲಿ ಕ್ವಿಟ್ ಇಂಡಿಯಾ ಮೂವ್ ಮೆಂಟ್ ನಡೆದಿತ್ತು. ಅದರಲ್ಲೂ ಭಾಗವಹಿಸಿದ ಉಷಾ ತ್ರಿವರ್ಣ ಧ್ವಜವನ್ನು ಹಿಡಿದು ನಿಂತಿದ್ದಳು. ಅಗಸ್ಟ್‌ 14.1942ರಂದು ಉಷಾ ತಮ್ಮ ಕೆಲವು ನಿಕಟವರ್ತಿಗಳೊಂದಿಗೆ ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದರು. ಇದನ್ನು ಕಾಂಗ್ರೆಸ್ ರೇಡಿಯೋ ಎಂದೇ ಕರೆಯುತ್ತಿದ್ದರು.  

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ವಾರ್ತಾ ಪ್ರಸಾರ, ಸಂವಹನಗಳಿಗೆ ಬಂಧಿ ಹೇರಲಾಗಿತ್ತು.  

ಆಗ ಉಷಾ ಮೆಹ್ತಾ ಕೆಲವರೊಂದಿಗೆ ಕೂಡಿ ರಹಸ್ಯವಾಗಿ ಈ ರೇಡಿಯೋ ಪ್ರಾರಂಬಿಸಿದ್ದರು. ಊರಲ್ಲಿ ವಿಠಲ್ ಭಾಯ್ ಜವರಿ, ಬಾಬೂಭಾಯಿ ಠಾಕೂರ್ ಹಾಗೂ ಚಂದ್ರಕಾಂತ ಜವೆರಿ ಮುಂತಾದವರಿದ್ದರು. ಇದರಲ್ಲಿ ಮೋಟ್ವಾನಿ ಚಿಕ್ಯಾಗೋ ರೇಡಿಯೋನ ಮುಖ್ಯಸ್ಥರಾಗಿದ್ದು, ಇವರು ಉಷಾ ಹಾಗೂ ಸಹವರ್ತಿಗಳಿಗೆ ಅಗತ್ಯವಾಗಿದ್ದ ತಂತ್ರಜ್ಞಾನ ಸಲಕರಣೆಗಳನ್ನು ಪೂರೈಸುತ್ತಿದ್ದರು. ಇವರಲ್ಲದೇ ರಾಮಮನೋಹರ ಲೋಹಿಯಾ, ಅಚ್ಚುತರಾವ್ ಪಟವರ್ಧನ್ ಕೂಡ ರೇಡಿಯೋ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ರೇಡಿಯೋದಿಂದ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ದೇಶದೆಲ್ಲೆಡೆ ಕೇಳಿಸುವ ಪಸರಿಸುವ ಉದ್ದೇಶವಾಗಿತ್ತು. ಆದರೆ ದುರದೃಷ್ಟವಶಾತ್ ಬ್ರಿಟಿಷರು ಈ ನಿಗೂಢ ರೇಡಿಯೋದ ಚಟುವಟಿಕೆಗಳ ನ್ನರಿತು ಅದನ್ನು ಬಂದ್ ಮಾಡಿದರಷ್ಟೇ ಅಲ್ಲ, ಉಷಾ, ಮತ್ತಿತರರನ್ನೆಲ್ಲ ಬಂಧಿಸಿ ಎರವಡ ಜೈಲಿಗೆ ಕಳುಹಿಸಿದರು.  

1947ರಲ್ಲಿ  ನಮಗೆ ಸ್ವತಂತ್ರ ಸಿಕ್ಕ ಮೇಲೆ ಉಷಾ ಅವರು ತಮ್ಮ ಉನ್ನತ ಶಿಕ್ಷಣವನ್ನು ಪಡೆದು ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಕಳಿಸಿದರು. ಅಧ್ಯಾಪಕಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಿ 1980 ರಲ್ಲಿ ನಿವೃತ್ತಿ ಹೊಂದಿದರು.  

ಸ್ವಾತಂತ್ರ್ಯ ನಂತರವೂ ಉಷಾ ಅವರು ಗಾಂಧಿ ತತ್ವ ಅನುಯಾಯಿಯಾಗಿ ಗಾಂಧಿವಾದದ ಪ್ರಚಾರಪಡಿಸುವಿಕೆ ಗಾಂಧಿ ತತ್ವದ ಆದರ್ಶದ ಕುರಿತಾಗಿ ಅನೇಕ ಲೇಖನಗಳನ್ನು ಪುಸ್ತಕಗಳನ್ನು ಬರೆದಿದ್ದಾರೆ. ಕೊನೆಯವರೆಗೂ ತಾವು ಖಾದಿ ಧಾರಿಗಳಾಗಿ ಉಳಿದರು. ಭಾರತ ಸರ್ಕಾರವು ಉಷಾ ಅವರ ಸಾಮಾಜಿಕ ಸೇವೆ, ಸ್ವಾತಂತ್ರ್ಯ ಹೋರಾಟದಲ್ಲಿಯ ಗಣನೀಯ ಪಾತ್ರವನ್ನು ಗುರುತಿಸಿ 1998ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.  

 ಆಗಸ್ಟ್‌ 11 2000ರಲ್ಲಿ ಅವರು ತಮ್ಮ 80ನೇ ವಯಸ್ಸಿನಲ್ಲಿ ಕಾಲವಶವಾದರು.  

  - ದೀಪಿಕಾ ಚಾಟೆ 

    ಬೆಳಗಾವಿ 


- * * * - 


ಸುದ್ದಿ ಓದಿ