ರಾಷ್ಟ್ರೀಯ

ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರನ ಕಂಪನಿ ವಾರ್ಷಿಕ ಆದಾಯ ಶೇ. 15000ರಷ್ಟು ವೃದ್ದಿ...! ಕಾಂಗ್ರೆಸ್ ಕೆಂಗಣ್ಣು...

ಕೇಂದ್ರ ಗೃಹ ಸಚಿವ  ಅಮಿತ್ ಶಾ  ಪುತ್ರನ  ಕಂಪನಿ ವಾರ್ಷಿಕ ಆದಾಯ  ಶೇ. 15000ರಷ್ಟು  ವೃದ್ದಿ...! ಕಾಂಗ್ರೆಸ್  ಕೆಂಗಣ್ಣು...

ನವದೆಹಲಿ, ನ 2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ  ಕೇಂದ್ರ ಗೃಹ ಸಚಿವ  ಅಮಿತ್ ಶಾ ಅವರ ಪುತ್ರ  ಜಯ್  ಶಾ  ಮಾಲೀಕತ್ವದ ಕಂಪನಿಯ ಆದಾಯ    "ಹಠಾತ್"   ವೃದ್ದಿಗೆ   ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಪ್ರತಿಪಕ್ಷ  ಕಾಂಗ್ರೆಸ್,    ದೇಶ ಗಂಭೀರ  ಆರ್ಥಿಕ  ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ  ಅಮಿತ್  ಶಾ ವಂಶ  ಹಾಗೂ  ಸರ್ಕಾರದ ಸ್ನೇಹಿತರು ಮಾತ್ರ   "ವಿಕಾಸ" ಹೊಂದುತ್ತಿದ್ದಾರೆ  ಎಂದು ವ್ಯಂಗ್ಯವಾಡಿದೆ.

ಜಯ್ ಶಾ  ಅವರ  ಕಂಪನಿ  ಅದ್ಬುತ ಬೆಳವಣಿಗೆ  ಕಂಡಿದೆ.   ಕಂಪನಿಯ ಲೆಕ್ಕದ ಪುಸ್ತಕಗಳನ್ನು  ನೋಡಿದರೆ,  ದೇಶದಲ್ಲಿ     ಆರ್ಥಿಕ    ಹಿಂಜರಿತವೇ ಇಲ್ಲ ಎಂಬುದನ್ನು  ಎಲ್ಲರೂ  ನಂಬಬೇಕಾಗುತ್ತದೆ ಎಂದು ಲೇವಡಿ ಮಾಡಿದೆ.

ಏಐಸಿಸಿ  ಕೇಂದ್ರ ಕಚೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ ,  2014ರಲ್ಲಿ  ಕೇವಲ 80ಲಕ್ಷ ಆದಾಯ   ಹೊಂದಿದ್ದ  ಜಯ್ ಶಾ ಅವರ ಕಂಪನಿ, "ಕುಸುಮ್ ಫಿನ್ ಸರ್ವ್ಸ್"  2019ರಲ್ಲಿ  119.61 ಕೋಟಿ ರೂಪಾಯಿಗೆ  ಹೆಚ್ಚಳಗೊಂಡಿದೆ ಎಂದು ಅಂಕಿ ಅಂಶ ನೀಡಿದರು.

ಅಮಿತ್ ಶಾ  ವಂಶದ  ರಾಜಕುಮಾರನ   ಕಂಪನಿ   ಯಾವರೀತಿ ವ್ಯವಹಾರ ನಡೆಸುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ,  ಜಯ್ ಅಮಿತ್ ಶಾ ಅವರಿಗೆ  ಮಾತ್ರ ತಮ್ಮ  ವ್ಯವಹಾರ ಗುಟ್ಟ ಎಂಬುದು ಗೊತ್ತಿರುತ್ತದೆ.  ಶೇ. 15000 ರಷ್ಟು  ಆದಾಯ ತರುವ  ಈ ವ್ಯವಹಾರವಾದರೂ ಏನು ?ಎಂದು  ಖೇರಾ ಪ್ರಶ್ನಿಸಿದ್ದಾರೆ.

ಕಂಪನಿ ವ್ಯಹಾರಗಳ  ಸಚಿವಾಲಯಕ್ಕೆ  ಜಯ್ ಶಾ ಕಂಪನಿ ಸಲ್ಲಿಸಿರುವ ಲೆಕ್ಕಪತ್ರ ಉಲ್ಲೇಖಿಸಿರುವ  ಖೇರಾ,  2017 ಹಾಗೂ 2018ರ  ಲೆಕ್ಕ ಪತ್ರಗಳನ್ನು  ಜಯ್ ಶಾ   ಸಲ್ಲಿಸಿಯೇ ಇಲ್ಲ   ಎಂದು ಹೇಳಿದ್ದಾರೆ.

ವ್ಯಾಪಾರಿಗಳು  ಪ್ರತಿ ವರ್ಷ ಅಕ್ಟೋಬರ್ 30ರೊಳಗೆ  ಕಂಪನಿ ವ್ಯವಹಾರಗಳ ಸಚಿವಾಲಯಕ್ಕೆ  ಲೆಕ್ಕ ಪತ್ರ ಸಲ್ಲಿಸಿ  ದಾಖಲೆ ಪಡೆಯಬೇಕು. ವಿಫಲವಾದರೆ  5 ಲಕ್ಷ  ರೂ ದಂಡ ಹಾಗೂ ಶಿಕ್ಷೆ ಎದುರಿಸಬೇಕು.  ಆದರೆ, ಜಯ್ ಶಾ ಲೋಕಸಭಾ ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದು,   ನಂತರ ತಮ್ಮ ಕಂಪನಿಯ ಲೆಕ್ಕಪತ್ರ ಸಲ್ಲಿಸಿದ್ದಾರೆ.  ಚುನಾವಣೆ ಮುಗಿಯುವವರೆಗೂ  ಅವರು ಏಕೆ ಕಾಯಬೇಕಾಗಿತ್ತು ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

ಜಯ್ ಅಮಿತ್ ಶಾ ಕಂಪನಿಗೆ   "ದೇಶದಲ್ಲಿರುವ ಎಲ್ಲ ದೇವತೆಗಳು  ಪರಮ ದಯಾಳುವಾಗಿವೆ  ಎಂದು ವ್ಯಂಗ್ಯವಾಡಿರುವ ಖೇರಾ,   ದೇಶದ ಗೃಹ ಸಚಿವರ ಪುತ್ರ  ಎಲ್ಲ ಅಡೆತಡೆಗಳನ್ನು ಮುರಿದು  ಹೊಸ ಎತ್ತರಕ್ಕೆ ಏರಿದ್ದಾರೆ ಎಂದು ಹೇಳಿದ್ದಾರೆ.

 2015ರಲ್ಲಿ   37.80 ಲಕ್ಷ ರೂ  ಆಸ್ತಿ  ಹೊಂದಿದ್ದ  ಜಯ್ ಶಾ ಕಂಪನಿ,   ಪ್ರಸಕ್ತ  ಹೊಂದಿರುವ ಆಸ್ತಿ 33.44ಕೋಟಿರೂಪಾಯಿಗೆ ಏರಿದೆ. ಈ ಹೆಚ್ಚಳ ಶೇ 88ರಷ್ಟಾಗಿದೆ. 2017ರಲ್ಲಿ  216 ರಷ್ಟು ಏರಿಕೆಯಾಗಿತ್ತು ಎಂದು ಖೇರಾ  ಅಂಕಿ ಅಂಶ ನೀಡಿದ್ದಾರೆ.  

2014ರಲ್ಲಿ  ವಾರ್ಷಿಕ 80ಲಕ್ಷ ರೂಪಾಯಿ ಇದ್ದ  ಕುಸುಮ್ ಫಿನ್ ಸರ್ವ್ಸ್ ಕಂಪನಿ ಆದಾಯ  2019ರಲ್ಲಿ 119.61 ಕೋಟಿ ರೂಪಾಯಿಗಳಿಗೆ ಏರಿದೆ.  2015ರಲ್ಲಿ  1.21 ಕೋಟಿ ಇದ್ದ  ನಿವ್ವಳ ಆಸ್ತಿ, 2019ರ ಸಾಲಿನಲ್ಲಿ 25.83 ಕೋಟಿರೂ ಹೆಚ್ಚಳಗೊಂಡಿದೆ.  ನಿವ್ವಳ  ಸ್ಥಿರ  ಆಸ್ತಿ 51.74 ಲಕ್ಷ ದಿಂದ 2019ರಲ್ಲಿ  23.25 ಕೋಟಿಗೆ ಏರಿಕೆ ಕಂಡಿದೆ ಎಂದು ವಿವರಿಸಿದ್ದಾರೆ. 

ದೇಶದ ಆರ್ಧಿಕ  ಮಂದಗತಿಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ವಕ್ತಾರ,   ದೇಶದಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇಲ್ಲ  ಸಾಬೀತು ಪಡಿಸಲು ಕೇಂದ್ರ   ಸರ್ಕಾರ ಇನ್ನಿಲ್ಲ  ಪ್ರಯಾಸ ಪಡುತ್ತಿದೆ. ಒಂದೊಮ್ಮೆ  ಜಯ್ ಶಾ ಕಂಪನಿಯ  ಲೆಕ್ಕ ಪತ್ರಗಳನ್ನು  ನೋಡಿದರೆ,  ದೇಶದಲ್ಲಿ ಯಾವುದೇ ರೀತಿಯ  ಆರ್ಥಿಕ  ಹಿಂಜರಿತವಿಲ್ಲ ಎಂಬುದನ್ನು ನಂಬಬೇಕಾಗುತ್ತದೆ  ನುಡಿದರು.

ಸುದ್ದಿ ಓದಿ