ಬೆಳಗಲ್ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ
ಅಧ್ಯಕ್ಷರಾಗಿ ಉಂಡೋಡಿ ಉಪಾಧ್ಯಕ್ಷರಾಗಿ ಗೌಡರ ಆಯ್ಕೆ
ಹುನಗುಂದ 4: ತಾಲೂಕಿನಲ್ಲಿಯೇ ಬಹುಕುತೂಹಲ ಮೂಡಿಸಿದ್ದ ಬೆಳಗಲ್ಲ ಗ್ರಾಮ ಪಂಚಾಯತಿ ಕೊನೆಗೂ ಬಿಜೆಪಿ ತೆÀಕ್ಕೆಗೆ ಸೇರಿಕೊಂಡಿದ್ದು, ಅಧ್ಯಕ್ಷರಾಗಿ ಪ್ರಿಯದರ್ಶಿನಿ ಉಂಡೋಡಿ, ಉಪಾಧ್ಯಕ್ಷರಾಗಿ ವೀರೇಶ ಗೌಡರ ಆಯ್ಕೆಯಾಗಿದ್ದಾರೆ.
14 ಜನ ಸದಸ್ಯರ ಸಂಖ್ಯೆ ಬಲಯುಳ್ಳ ಬೆಳಗಲ್ಲ ಗ್ರಾ.ಪಂಯಲ್ಲಿ 7 ಜನ ಬಿಜೆಪಿ ಬೆಂಬಲಿತ ಸದಸ್ಯರು, 6 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಓರ್ವ ಎಸ್ಆರ್ಎನ್ಇ ಪೌಂಡೇಶನ್ ಬೆಂಬಲಿತರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಕ್ಕೆ ಮೀಸಲಾಗಿತ್ತು.
ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಪ್ರಿಯದರ್ಶಿನಿ ಉಂಡೋಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೀರೇಶ ಗೌಡರ, ಕಾಂಗ್ರೆಸ್ ಬೆಂಬಲಿತ ಸಂಗಮ್ಮ ಹಿರೇಮಠ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸೀರಸಾಬ ದಫೇದಾರ ನಾಮಪತ್ರ ಸಲ್ಲಿಸಿದರು.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಿಜೆಪಿ ಬೆಂಬಲಿತ ಪ್ರಿಯದರ್ಶಿನಿ ಉಂಡೋಡಿ ಅವರಿಗೆ 11 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರೇಶ ಗೌಡರ 9 ಮತಗಳನ್ನು ಪಡೆಯುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದರು. ಬೆಳಗಲ್ಲ ಗ್ರಾಮ ಪಂಚಾಯತಿ ನಿರೀಕ್ಷೆಯಂತೆ ಬಿಜೆಪಿಯ ಮಡಿಲಿಗೆ ಸೇರಿತು.
ವಿಜಯೋತ್ಸವ-ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲ ಎರಚಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.