ಯುಪಿಎಸ್ಸಿಯಲ್ಲಿ 42ನೇ ರಾ್ಯಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ
ಮಹಾಲಿಂಗಪುರ 17: ಸಮೀಪದ ಅಕ್ಕಿಮರಡಿ ಗ್ರಾಮದ ಪ್ರಗತಿಪರ ರೈತ ಸದಾಶಿವ ಕಂಬಳಿ ಅವರ ಪುತ್ರ ಪಾಂಡುರಂಗ ಕಂಬಳಿ ಕಳೆದ ವರ್ಷ ನವ್ಹಂಬರನಲ್ಲಿ ಜರುಗಿದ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ಸಿ) (ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರಾ್ಯಂಕ್ ಪಡೆದು ಆಯ್ಕೆಯಾಗಿದ್ದಾರೆ.
ಸಮೀಪದ ಸೈದಾಪೂರ-ಸಮೀರವಾಡಿಯ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ 5 ನೇ ವರ್ಗದವರೆಗೆ ಮುಗಿಸಿ ಕುಳಗೇರಿ ಕ್ರಾಸ್ನಲ್ಲಿರುವ ಜವಾಹರ ನವೋದಯ ಶಾಲೆಗೆ ಆಯ್ಕೆಯಾಗಿ ಅಲ್ಲಿ 6 ನೇ ವರ್ಗದಿಂದ ಎಸ್ಎಸ್ಎಲ್ಸಿ ವರೆಗೆ ಶಿಕ್ಷಣ ಪಡೆದು, ಯಲ್ಲಟ್ಟಿಯ ಕೊಣ್ಣೂರ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಆರ್ವಿ ಕಾಲೇಜನಲ್ಲಿ 2018 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ನಂತರ ಎರಡು ವರ್ಷ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಪಾಂಡುರಂಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ದರ್ಜೆಯ ಸರ್ಕಾರಿ ಸೇವೆಯಲ್ಲಿ ಸೇರಬೇಕೆಂಬ ಇಚ್ಚೆಯಿಂದ ನೌಕರಿ ತೊರೆದು ಆಭ್ಯಾಸದಲ್ಲಿ ತೊಡಗಿ ಯಾವುದೇ ಕೋಚಿಂಗ ಕ್ಲಾಸ್ಗೆ ಸೇರದೇ ಸ್ವಂತ ಪರಿಶ್ರಮದಿಂದ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ.
ನಾನು ಈ ಮೊದಲು ಎರಡು ಬಾರಿ ಯುಪಿಎಸ್ಸಿ(ಸಿವಿಲ್) ಪರೀಕ್ಷೆ ಪಾಸಾಗಿ ದೇಹಲಿಯಲ್ಲಿ ಮೌಖಿಕ ಸಂದರ್ಶನಕ್ಕೆ ಹಾಜರಾಗಿದ್ದೆ. ಆದರೆ ಅಲ್ಲಿ ಆಯ್ಕೆಯಾಗಲಿಲ್ಲ.ಈ ಬಾರಿ ಅರಣ್ಯ ಸೇವೆಗೆ ಪ್ರಥಮ ಬಾರಿ ಪ್ರಯತ್ನಿಸಿ ಆಯ್ಕೆಯಾಗಿದ್ದೇನೆ.ನನ್ನ ತಂದೆ ಹಾಗೂ ಮನೆಯಲ್ಲಿ ಎಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು
ಪಾಂಡುರಂಗ ಕಂಬಳಿ.
ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಅಭ್ಯರ್ಥಿ