ರಾಷ್ಟ್ರೀಯ ಶಿಕ್ಷಣ ನೀತಿ ಅಭಿವೃದ್ಧಿಗೆ ರಹದಾರಿ: ಶ್ರೀನಿವಾಸ ಪಾಟೀಲ.

ಮಹಾಲಿಂಗಪುರ 22:ಆಂಗ್ಲರು ಭಾರತಕ್ಕೆ ಬರುವ ಮುಂಚೆ ಭಾರತದಲ್ಲಿ ಶೇ. 90 ರಷ್ಟು ಸಾಕ್ಷರತೆ ಮತ್ತು ಶೇ. 30 ರಷ್ಟು ಜಿಡಿಪಿ ಇತ್ತು ಆದರೆ 1947 ರಲ್ಲಿ ಅವರು ದೇಶ ಬಿಟ್ಟು ತೊಲಗುವಾಗ ಭಾರತದ ಸಾಕ್ಷರತೆ ಶೇ 23 ಹಾಗೂ ಜಿಡಿಪಿ ಶೇ. 2 ರಿಂದ 3 ಕ್ಕೆ ಕುಸಿದಿತ್ತು , ಈ ದುಸ್ಥಿತಿಗೆ ಬ್ರಿಟೀಷರು ಮಾಡಿದ ಕುಟಿಲ ಶಿಕ್ಷಣ ನೀತಿಯೇ ಕಾರಣ ಇದಕ್ಕೆ ಪರಿಹಾರವೆಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಎಂದು ರಾಷ್ಟ್ರೋತ್ಥಾನ ಪರಿಷತ್ ಬಾಗಲಕೋಟೆ ಜಿಲ್ಲಾ ಸಂಯೋಜಿಕ ಶ್ರೀನಿವಾಸ ಪಾಟೀಲ ಹೇಳಿದರು.   

ಸ್ಥಳೀಯ ಜೆಸಿ ಶಾಲೆ ಸಹಯೋಗದಲ್ಲಿ ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು, ಪ್ರಶಿಕ್ಷಣ ಭಾರತಿ ಬಾಗಲಕೋಟೆ ಇವರು ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಮತ್ತು ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.  

ಕೊಣ್ಣೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಬಸವರಾಜ ಕೊಣ್ಣೂರ ಮಾತನಾಡಿ, ಮಕ್ಕಳು ಬುದ್ಧಿವಂತರಾಗುವುದಕ್ಕಿಂತ ಸೃಜನಶೀಲರಾಗಬೇಕು, ಸಮಾಜಕ್ಕೆ ನೀಡಿದಷ್ಟನ್ನು ಭಗವಂತ ನಮಗೆ ಮರಳಿಕೊಡುತ್ತಾನೆ ಹಾಗಾಗಿ ಸದಾ ಕೊಡುವ ಗುಣ ಮತ್ತು ಸೇವಾ ಮನೋಭಾವವನ್ನು ಪ್ರತಿ ವಿದ್ಯಾರ್ಥಿಯೂ ಬೆಳೆಸಿಕೊಳ್ಳಬೇಕು ಎಂದರು.  

ರಾಜ್ಯ ಸಂಪನ್ಮೂಲ ವ್ಯಕ್ತಿ ಡಿ.ವ್ಹಿ . ಹಿರೇಮಠ ಆದರ್ಶ ಶಿಕ್ಷಕ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ದೇಶ ಕಟ್ಟುವ ಏಕೈಕ ಶಿಲ್ಪಿ ಶಿಕ್ಷಕ ಅಂತಹ ಶಿಕ್ಷಕ  ಆದರ್ಶವಾಗಿರಬೇಕೆಂದರು.  

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾನಿಪ ಅಧ್ಯಕ್ಷ ಮಹೇಶ ಆರಿ ಮತ್ತು ಪತ್ರಕರ್ತ ಮಹೇಶ ಮನ್ನಯ್ಯನವರಮಠ ಕಾರ್ಯಕ್ರಮ ಉದ್ಘಾಟಿಸಿದರು.  

ವ್ಯಕ್ತಿತ್ವ ವಿಕಸನ,, ಶಿಕ್ಷಣದ ಮೂಲ ಪರಿಕಲ್ಪನೆ,  ಮಗುವಿನ ಸವಾಂರ್ಗೀಣ ವಿಕಾಸ, ಆಂಗ್ಲ ಭಾಷಾ ಕೌಶಲ್ಯ, ಆದರ್ಶ ಶಿಕ್ಷಕ ವಿಷಯಗಳ ಮೇಲೆ ಉಪನ್ಯಾಸ ನೀಡಲಾಯಿತು.  

ಮಹಾಲಕ್ಷ್ಮಿ ಗುಳದಳ್ಳಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಮುಖ್ಯೋಪಾಧ್ಯಾಯ ಎಸ್‌. ಜಿ.ಕೌಜಲಗಿ ಸ್ವಾಗತಿಸಿ, ಶಿಕ್ಷಕ ಎಂ.ಎಸ್‌.ಕೊಪ್ಪ ವಂದಿಸಿ, ಶಿಕ್ಷಕ ನಾರನಗೌಡ ಉತ್ತಂಗಿ ನಿರೂಪಿಸಿದರು.