ರಾಷ್ಟ್ರೀಯ

ಕೊರೊನಾ ಲಸಿಕೆ ಕಡ್ಡಾಯವಲ್ಲ, ವಿತರಣೆ ಜೊತೆಗೆ ಅಡ್ಡಪರಿಣಾಮ ಎದುರಿಸಲು ರಾಜ್ಯಗಳು ಸಿದ್ಧವಾಗಿರಬೇಕು; ಕೇಂದ್ರ

ಕೊರೊನಾ ಲಸಿಕೆ ಕಡ್ಡಾಯವಲ್ಲ, ವಿತರಣೆ ಜೊತೆಗೆ ಅಡ್ಡಪರಿಣಾಮ ಎದುರಿಸಲು ರಾಜ್ಯಗಳು ಸಿದ್ಧವಾಗಿರಬೇಕು; ಕೇಂದ್ರ

ನವದೆಹಲಿ, ಡಿ 18:ಕೊರೊನಾ ವೈರಸ್ ತಡೆ  ಲಸಿಕೆ  ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.  ಆದರೆ,   ಸಾಂಕ್ರಾಮಿಕ  ಪ್ರಸರಣ  ನಿಗ್ರಹಿಸಲು    ಎರಡು ಡೋಸ್  ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ ಎಂದು ಹೇಳಿದೆ.  ಈ ಹಿಂದೆ  ಕೊರೊನಾ ಸೋಂಕಿಗೆ ಒಳಗಾಗಿದ್ದವರು,  ಒಳಗಾಗಿಲ್ಲದವರು ಎಂಬದನ್ನು  ಪರಿಗಣಿಸದೆ,   ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳುವಂತೆ ಸೂಚಿಸಿದೆ.  ಇದರಿಂದ  ದೇಹದಲ್ಲಿ ರೋಗ ನಿರೋಧಕ ಶಕ್ತಿ   ಹೆಚ್ಚಲಿದೆ  ಎಂದು ಹೇಳಿದೆ. 

 

ಎರಡನೇ ಡೋಸ್  ಲಸಿಕೆ  ಹಾಕಿಸಿಕೊಂಡ ಎರಡು ವಾರಗಳಲ್ಲಿ ದೇಹದಲ್ಲಿ ಪ್ರತಿಕಾಯಗಳು ಸಂಪೂರ್ಣವಾಗಿ ಬೆಳೆಯಲಿವೆ  ಎಂದು  ಹೇಳಿದೆ.  ಗುರುವಾರ ರಾತ್ರಿ ವ್ಯಾಕ್ಸಿನೇಷನ್ ಬಗ್ಗೆ ಮಾಧ್ಯಮಗಳ  ಪ್ರಶ್ನೆಗಳಿಗೆ ಆರೋಗ್ಯ  ಸಚಿವಾಲಯ ಈ ಉತ್ತರ ನೀಡಿದೆ. ಪ್ರಸ್ತುತ,   ದೇಶದಲ್ಲಿ ಒಟ್ಟು 6 ಲಸಿಕೆಗಳು  ಪ್ರಯೋಗದ ವಿವಿಧ ಹಂತಗಳಲ್ಲಿವೆ. ಲಸಿಕೆಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿ,  ಪ್ರಯೋಗ ನಡೆಸಿದ  ನಂತರ  ಜನರ  ಬಳಕೆಗೆ ಅನುಮೋದಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.  ಕ್ಯಾನ್ಸರ್, ಮಧುಮೇಹ  ಹಾಗೂ ಅಧಿಕ ರಕ್ತದೊತ್ತಡ ಇರುವವರಿಗೆ ಲಸಿಕೆ ಹಾಕಬೇಕೆಂದು ಆರೋಗ್ಯ ಸಚಿವಾಲಯ  ಶಿಫಾರಸು ಮಾಡಿದೆ.

 

28 ದಿನಗಳ ಅವಧಿಯಲ್ಲಿ  ಲಸಿಕೆಯ ಎರಡು  ಡೋಸು  ತೆಗೆದುಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ನಂತರ  ಅಡ್ಡಪರಿಣಾಮಗಳು ಸಹಜ ವಾಗಿರಲಿವೆ. ಲಸಿಕೆ ನೀಡಿದ ಜಾಗದಲ್ಲಿ ನೋವು,  ಜ್ವರ ಸಾಮಾನ್ಯವಾಗಿರಲಿದೆ  ಎಂದು ಆರೋಗ್ಯ ಸಚಿವಾಲಯ ಹೇಳುತ್ತಿದೆ.  ಲಸಿಕೆ ವಿತರಣೆ ಜೊತೆಗೆ ಅಡ್ಡಪರಿಣಾಮಗಳನ್ನು ಎದುರಿಸಲು ರಾಜ್ಯಗಳು ಸಿದ್ಧರಾಗಿರಬೇಕು ಎಂದು ಅದು ಸೂಚಿಸಿದೆ.   ಲಸಿಕೆ ಆದ್ಯತೆಯ ಕ್ರಮದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.


ಸುದ್ದಿ ಓದಿ