ಹಿಮಾಚಲ ಪ್ರದೇಶದಲ್ಲಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಕಂದಕಕ್ಕೆ ಉರುಳಿ; 40ಕ್ಕೂ ಹೆಚ್ಚು ಮಂದಿಗೆ ಗಾಯ, ಮೂವರು ಪಿಜಿಐಗೆ ರವಾನೆ
ಉನಾ (ಹಿಮಾಚಲ ಪ್ರದೇಶ), ಆಗಸ್ಟ್ 25 : ಸುಮಾರು 50 ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಮಂಗಳವಾರ ಉನಾ ಜಿಲ್ಲೆಯ ಪ್ರಸಿದ್ಧ ಪೀರ್ ನಿಗಾಹಾ ಕ್ಷೇತ್ರದ ಸಮೀಪ ನಡೆದಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು, ಓರ್ವ ಮಗುವು ಸೇರಿದಂತೆ, ಪ್ರಾಥಮಿಕ ಚಿಕಿತ್ಸೆ ಬಳಿಕ ಚಂಡೀಗಢದ ಪಿಜಿಐ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಗೊಂಡ ಎಲ್ಲಾ ಯಾತ್ರಿಕರು ಹರಿಯಾಣದ ಕರ್ನಾಲ್ ಜಿಲ್ಲೆಯ ಇಂದ್ರಿ ಪ್ರದೇಶದ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಪೀರ್ ನಿಗಾಹಾ ದೇವಸ್ಥಾನಕ್ಕೆ ಆಗಮಿಸಿದ್ದ ಅವರು ದೇವರ ದರ್ಶನ ಪಡೆದು ಭಂಡಾರ (ಸಾಮೂಹಿಕ ಅನ್ನಸಂತರ್ಪಣೆ) ಆಯೋಜಿಸಿದ್ದರು.
ಮಂಗಳವಾರ ಬೆಳಗ್ಗೆ ಪೀರ್ ನಿಗಾಹಾದಿಂದ ಮಾತಾ ನೈನಾದೇವಿ ದೇವಸ್ಥಾನದತ್ತ ಯಾತ್ರಿಕರು ಪ್ರಯಾಣ ಆರಂಭಿಸಿದ್ದರು. ದೇವಸ್ಥಾನದಿಂದ ಟ್ರಕ್ ಹೊರಟ ಕೆಲವೇ ಸಮಯದಲ್ಲಿ ತೀಕ್ಷ್ಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಕಂದಕಕ್ಕೆ ಬಿದ್ದಿದ್ದ ಯಾತ್ರಿಕರನ್ನು ರಕ್ಷಿಸುವ ಕಾರ್ಯದಲ್ಲಿ ಸ್ಥಳೀಯರು ತೊಡಗಿಸಿಕೊಂಡರು.
ಮಾಹಿತಿ ದೊರೆತ ಕೂಡಲೇ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ತಂಡಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್ಗಳ ಮೂಲಕ ಉನಾದ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಿದರು.
ಉನಾ ಪ್ರಾದೇಶಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಮಂಕೋಟಿಯಾ ಮಾತನಾಡಿ, ಪೀರ್ ನಿಗಾಹಾ ಅಪಘಾತದಲ್ಲಿ ಗಾಯಗೊಂಡ 40ಕ್ಕೂ ಹೆಚ್ಚು ಯಾತ್ರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಓರ್ವ ಮಗು ಸೇರಿದಂತೆ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಪಿಜಿಐ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೆ ಉನಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ.
ಅಪಘಾತಕ್ಕೆ ಕಾರಣವೇನು ಮತ್ತು ಚಾಲಕನ ನಿಯಂತ್ರಣ ಏಕೆ ತಪ್ಪಿತು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಾಯಗೊಂಡ ಎಲ್ಲ ಯಾತ್ರಿಕರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸುವಂತೆ ಆಸ್ಪತ್ರೆ ಆಡಳಿತಕ್ಕೆ ಅಧಿಕಾರಿಗಳು ಸೂಚಿಸಿದ್ದಾರೆ.