ಅರಣ್ಯ ಜಮೀನಿನ ಹಸ್ತಾಂತರ, 1972ರ ಆದೇಶ ರದ್ದತಿಗೆ ಅಭಿಯಾನ
ಲೋಕದರ್ಶನ ವರದಿ
ಮುಂಡಗೋಡ:ಸರ್ಕಾರದ 1969ರ ಆದೇಶದನ್ವಯ ಜಿಲ್ಲೆಯ 50,708 ಎಕರೆ ಅರಣ್ಯ ಜಮೀನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಹಾಗೂ ಹಸ್ತಾಂತರಕ್ಕೆ ತಡೆಯಾಗಿರುವ 1972ರ ಸರ್ಕಾರದ ಆದೇಶ ಹಿಂಪಡೆಯುವಂತೆ ಜನಪ್ರತಿನಿಧಿಗಳಿಗೆ ಒತ್ತಾಯಿಸಲು ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕಿನಾದ್ಯಂತ ಜನಜಾಗೃತಿ ಅಭಿಯಾನ ಇಂದಿನಿಂದ 2 ತಿಂಗಳುಗಳ ಕಾಲ ನಡೆಯಲಿದೆ ಎಂದು ತಾಲೂಕಾ ಭೂ-ಹಕ್ಕುದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನೂರ್ಅಹ್ಮದ್ ಗದಗ ಹೇಳಿದರು.
ತಾಲೂಕಿನ 60ಹಳ್ಳಿಗಳಿಗೆ ಸಂಚರಿಸಲಿರುವ ಅಭಿಯಾನಕ್ಕೆ ಲೊಯೋಲ ವಿಕಾಸ ಕೇಂದ್ರದ ಆವರಣದಲ್ಲಿ ಬಡ್ಡಿಗೇರಿ, ವಡಗಟ್ಟಾ, ಹೊನ್ನಿಕೊಪ್ಪ ಹಾಗೂ ಕರಗಿನಕೊಪ್ಪದ ಅತಿಕ್ರಮಣ ರೈತರು ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಮುಂಬರುವ ಅಧಿವೇಶನದಲ್ಲಿ 1969, 1972ರ ಆದೇಶಗಳ ಕುರಿತು ಚರ್ಚೆ ನಡೆಸಲು ಹಾಗೂ ಪ್ರಶ್ನೆ ಕೇಳುವಂತೆ ಜಿಲ್ಲೆಯ ಶಾಸಕರಿಗೆ, ವಿಧಾನಸಭಾ ಅಧ್ಯಕ್ಷರಿಗೆ ಕಳೆದ ವಾರ ಪತ್ರ ಬರೆಯಲಾಗಿದೆ. ಅಭಿಯಾನದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರನ್ನು ಭೇಟಿಯಾಗಿ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದರು. ತಾಲೂಕಿನ ಜ್ವಲಂತ ಸಮಸ್ಯೆಗಳಾದ 6,800 ಎಕರೆ ಹಂಗಾಮಿ ಲಾಗಣಿ ಖಾಯಂ ಅಡಿ ಸಾಗುವಳಿ ಚೀಟಿ ಪಡೆದ 3,200 ರೈತರಿಗೆ ಪಹಣಿ ನೀಡದಿರುವುದು, ಶಾಸಕರ ನೇತೃತ್ವದ ಅಕ್ರಮ-ಸಕ್ರಮ ಸಮಿತಿ 135 ಅರ್ಜಿಗಳಲ್ಲಿ ಒಂದೂ ಅರ್ಜಿ ಇತ್ಯರ್ಥಪಡಿಸದ ಹಾಗೂ ಅರಣ್ಯ ಹಕ್ಕು ಕಾಯ್ದೆ ಅಡಿ ಉಪವಿಭಾಗ ಮಟ್ಟದಲ್ಲಿ ತಿರಸ್ಕೃತ 3,434 ಅರ್ಜಿಗಳ ಪುನರ್ ಪರೀಶೀಲನೆಗೆ ಪರಿಗಣಿಸಬೇಕಾದ ದಾಖಲೆಗಳ ಕುರಿತು ಜಾಗೃತಿ ಮೂಡಿಸಲಿದೆ ಎಂದು ಕಾರ್ಯದರ್ಶಿ ಶರೀಫ್ ವಡ್ಡರ ಹೇಳಿದರು. ಈ ವೇಳೆ ತಾಲೂಕಾ ಭೂ-ಹಕ್ಕುದಾರರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಪಾಂಡುರಂಗ ನಿಂಬಾಯಿ, ದೇವು ಪಾಲೆ, ಚಂದ್ರಶೇಖರ ಕುಂಬಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.