ಚಿಕ್ಕೋಡಿ

ಹಸಿರೇ ಉಸಿರು ಎಂಬ ಮಾತನ್ನು ಪ್ರತಿಯೊಬ್ಬರೂ ಸಾಕಾರಗೊಳಿಸಿ: ಅಜಯ ಸೂರ್ಯವಂಶಿ

ಹಸಿರೇ ಉಸಿರು ಎಂಬ ಮಾತನ್ನು ಪ್ರತಿಯೊಬ್ಬರೂ ಸಾಕಾರಗೊಳಿಸಿ: ಅಜಯ ಸೂರ್ಯವಂಶಿ
ಚಿಕ್ಕೋಡಿ: ಮಾಂಜರಿ ಗ್ರಾಮದಲ್ಲಿ ಹಮ್ಮಿಕೊಂಡ ಸ್ವಚ್ಛ ಗ್ರಾಮ ಮತ್ತು ಹಸಿರು ಗ್ರಾಮ ಕುರಿತು ಯುವ ಜನರಿಗೆ ತರಭೇತಿ ಕಾರ್ಯಕ

ಚಿಕ್ಕೋಡಿ 24: ಹಸಿರೇ ಉಸಿರು ಎಂಬ ಮಾತನ್ನು ಪ್ರತಿಯಬ್ಬರೂ ಸಾಕಾರಗೊಳಿಸಬೇಕಿದೆ. ಪ್ರತಿಯೊಂದು ಮನೆಯಲ್ಲೂ ಮಳೆ ನೀರು ಕೊಯ್ಲು ಯೋಜನೆ ಹಾಗೂ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿ ಅಂತರ್ಜಲ ಮಟ್ಟ ಹೆಚ್ಚಳ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಪರಿಸರಕ್ಕೂ ಹಾನಿ, ಮನುಷ್ಯನ ಆರೋಗ್ಯದಲ್ಲೂ ಕೂಡ ಏರುಪೇರು ಆಗುತ್ತದೆ ಎಂದು ಯಡೂರಿನ ಶಿವತೇಜ ಸೋಷಿಯಲ್ ಫೌಂಡೇಶನ್ ಅಧ್ಯಕ್ಷ ಅಜಯ ಸೂರ್ಯವಂಶಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಯುವಕ ಮಂಡಳ, ಸರ್ವೋದಯ ಪದವಿ ಪೂರ್ವ ಮಹಾವಿದ್ಯಾಲಯ , ಗ್ರಾಮ ಪಂಚಾಯಿತಿ ಮಾಂಜರಿ ಹಾಗೂ ನೆಹರು ಯುವ ಕೇಂದ್ರ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಚ್ಛ ಗ್ರಾಮ ಮತ್ತು ಹಸಿರು ಗ್ರಾಮ ಕುರಿತು ಯುವ ಜನರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಪರಿಸರ ಮಾಲಿನ್ಯ ವಿಪರೀತವಾಗುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳ ಯಶಸ್ವಿಗೆ ಪ್ರತಿಯೊಬ್ಬರೂ ಪಣತೊಡಬೇಕಿದೆ ಎಂದು ಹೇಳೀದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಟರ್ ನ್ಯಾಷನಲ್ ಬೆಸ್ಟ್ ಲೀಡರ್ ಪ್ರಶಸ್ತಿ ಪುರಸ್ಕೃತೆ ವಿಮಲಾ ಕದಮ ಮಾತನಾಡುತ್ತಾ ಇಡೀ ಜಗತ್ತಿನಲ್ಲಿ ಪ್ಲಾಸ್ಟಿಕ್ ನಂತಹ ಮಾರಕ ವಸ್ತು ಬೇರೊಂದಿಲ್ಲ. ಎತೇಚ್ಛವಾಗಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಭೂ ಮಾಲಿನ್ಯ, ಜಲ ಮಾಲಿನ್ಯ, ವಾಯು ಮಾಲಿನ್ಯವಾಗುತ್ತಿದೆ ಎಂದರು.

ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಚಿನಕೇಕರ ಅವರು  ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಿ ಪರಿಸರ ಮಾಲಿನ್ಯವಾಗುವುದನ್ನು ತಡೆಯಬಹುದಾಗಿದೆ, ಹೀಗೆ ಮಾಡಿದ್ದಲ್ಲಿ ನೀರಿನ ಅಭಾವದಿಂದ ಮುಕ್ತರಾಗಬಹುದಾಗಿದೆ, ಕೇಂದ್ರ ಸರ್ಕಾರದ ಮಳೆ ನೀರು ಕೊಯ್ಲು ಅಭಿಯಾನವನ್ನು ಪ್ರತಿಯೊಬ್ಬರೂ ಪ್ರಾರಂಭಿಸಿ ಇಡೀ ಜಗತ್ತಿಗೆ ಭಾರತ ಮಾದರಿಯಾಗುವಂತೆ ಮಾಡಬೇಕಾದ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಕ್ಯಾಚ್ ದಿ ರೇನ್ ಎಂಬ ಮಳೆ ನೀರು ಕೊಯ್ಲು ಅಭಿಯಾನದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. 

ಸರ್ವೋದಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಿ.ಎ. ತಾಂಬಟ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎ.ಎಮ್ ತೋರಸೆ, ಸರ್ವೋದಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್ ಸಾಳುಂಕೆ ಮುಂತಾದವರು ಉಪಸ್ಥಿತರಿದ್ದರು. 

ಆರ್.ಎಸ್ ಲಂಬುಗೋಳ ಸ್ವಾಗತಿಸಿದರು. ಕೀರ್ತಿ ಲೋಕುರೆ ನಿರೂಪಿಸಿ, ಪಿ.ಪಿ. ಕಾಂಬಳೆ ವಂದಿಸಿದರು.

ಸುದ್ದಿ ಓದಿ