ಇಂದು ಶ್ರೀಮಾರಿಕಾಂಬಾ ದೇವಿ ರಥೋತ್ಸವ
ಲೋಕದರ್ಶನ ವರದಿ
ಮುಂಡಗೋಡ:ಪಟ್ಟಣದ ಹಳೂರ ಓಣಿಯ ಗ್ರಾಮದೇವಿ ಶ್ರೀಮಾರಿಕಾಂಬಾ(ದ್ಯಾಮವ್ವ)ದೇವಿ ಜಾತ್ರಾ ಮಹೋತ್ಸವ ಮಂಗಳವಾರದಿಂದ ಆರಂಭಗೊಂಡಿತು.
ಅಮ್ಮನವರ ಮಂಗಲಕಾರ್ಯ(ತಾಳಿ ಕಟ್ಟುವ ಶಾಸ್ತ್ರ) ನಡೆಯಿತು. ದೇವಸ್ಥಾನದ ಆವರಣದಲ್ಲಿ ಗಣಹವನ, ನವಚಂಡಿ ಹವನ ಕಾರ್ಯಗಳು ಜರುಗಿದವು. ಪೂರ್ಣಾಹುತಿ ನಂತರ ತೀರ್ಥಪ್ರಸಾದ ವಿತರಣೆ ನಡೆಯಿತು.
ಬುಧವಾರ ಬೆಳಗ್ಗೆ 8-14ಕ್ಕೆ ಶ್ರೀದೇವಿಯ ರಥೋತ್ಸವ ಪ್ರಾರಂಭವಾಗುವುದು. ರಥೋತ್ಸವವನ್ನು ಮಂಚಿಕೇರಿಯ ಶ್ರೀಲಕ್ಷ್ಮೀನಾರಾಯಣ ಭಟ್ಟರು ಉದ್ಘಾಟಿಸುವರು. ಈ ವೇಳೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉಪಸ್ಥಿತಿ ಇರುವರು. ರಥೋತ್ಸವದ ಮೆರವಣಿಗೆ ದೇವಸ್ಥಾನದ ಮುಂಭಾಗದಿಂದ ಹೊರಟು ಮಧ್ಯಾಹ್ನ 1-45ಕ್ಕೆ ಚೌತಮನೆ(ಜಾತ್ರಾ ಗದ್ದುಗೆ)ಯಲ್ಲಿರುವ ಪೀಠದಲ್ಲಿ ಶ್ರೀದೇವಿಯ ಮೂರ್ತಿ ಪ್ರತಿಷ್ಠಾಪನೆ ನೆರವೇರುವುದು. ಮೆರವಣಿಗೆಯಲ್ಲಿ ಪಂಚವಾದ್ಯ, ಡೊಳ್ಳು ಕುಣಿತ, ಚಂಡಿವಾದ್ಯ ನೃತ್ಯ ಮತ್ತು ವೇಷಭೂಷಣಗಳ ಜೊತೆಗೆ ಜಾಂಜ್ಮೇಳ ಮುಂತಾದ ಸಾಂಸ್ಕೃತಿಕ ವೈಭವಗಳೊಂದಿಗೆ, ಭಕ್ತರ ಜಯಘೋಷಗಳೊಂದಿಗೆ ಮೆರವಣಿಗೆ ಸಾಗುವುದು. ದಿ.1ರಿಂದ ಬೆಳಗ್ಗೆ 7ಗಂಟೆಯಿಂದ ದಿ.8ರ ಮಧ್ಯಾಹ್ನ 2ಗಂಟೆವರೆಗೆ ಹಣ್ಣು-ಕಾಯಿ ಸೇವೆ ನಡೆಯಲಿದೆ.