ತೆನೆ ತಿಗಣೆ ಬಾಧೆ ನಿರ್ವಹಣೆಗೆ ಸಲಹೆ
ಲೋಕದರ್ಶನ ವರದಿ
ಮುಂಡಗೋಡ ೧೩: ತಾಲೂಕಿನ ಕೆಲವು ಗ್ರಾಮಗಳಲ್ಲಿ ಭತ್ತದ ಬೆಳೆ ಹೂವಾಡುವ ಹಂತದಿಂದ ಕಾಳು ಕಟ್ಟುವ ಹಂತಕ್ಕೆ ಬಂದಿದ್ದು ತೆನೆ ತಿಗಣೆ ಬಾಧೆ ಕಂಡು ಬಂದಿರುತ್ತದೆ. ಪ್ರೌಢ ಮತ್ತು ಮರಿ ಹುಳುಗಳು ತೆನೆಯ ಕಾಳುಗಳಲ್ಲಿನ ಹಾಲನ್ನು ಹೀರುತ್ತವೆ. ಇದರಿಂದಾಗಿ ಕಾಳುಗಳು ಜೊಳ್ಳಾಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಹುಳುಗಳು ಕೆಟ್ಟ ವಾಸನೆ ಸೂಸುವುದರಿಂದ ವಾಸನೆ ಹುಳು ಅಥವಾ ಬಾಂಬ್ ಹುಳು ಎಂದು ಕರೆಯುವ ವಾಡಿಕೆ ಇದೆ. ಈ ಬಾಧೆಯ ನಿರ್ವಹಣೆಗಾಗಿ ಬದುಗಳಲ್ಲಿನ ಬೆಳೆಯುವ ಹುಲ್ಲು ಮತ್ತು ಕಳೆಗಳನ್ನು ಕಾಲ-ಕಾಲಕ್ಕೆ ಕೊಯ್ದು ಸ್ವಚ್ಛವಾಗಿಡಬೇಕು. ಪ್ರತಿ ಲೀಟರ್ ನೀರಿಗೆ ಮೆಲಾಥಿಯಾನ್ 50ಇ.ಸಿ. 20ಮಿ.ಲೀ.ಗೆ ಹೂವಾಡುವ ಮತ್ತು ನಂತರದ 1ವಾರದ ಅಂತರದಲ್ಲಿ ಸಿಂಪರಣೆ ಮಾಡಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕು. ರಿಯಾಯಿತಿ ದರದಲ್ಲಿ ಪಟ್ಟಣದ ಮತ್ತು ಪಾಳಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಸ್ಯ ಸಂಸ್ಕರಣಾ ಔಷಧಿಗಳು ದೊರೆಯುತ್ತಿದ್ದು ರೈತರು ಸದುಪಯೋಗ ಪಡೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.