ಇಂಡಿ

ಚನ್ನಮ್ಮನ ವಂಶಸ್ಥರ ಮೂರು ಸುತ್ತಿನ ಕೋಟೆ ನಶಿಸುವತ್ತ

ಚನ್ನಮ್ಮನ ವಂಶಸ್ಥರ ಮೂರು ಸುತ್ತಿನ ಕೋಟೆ ನಶಿಸುವತ್ತ

ಕೋಟೆಯ ರಕ್ಷಣೆಗೆ ಯಾವೊಂದೂ ಸರಕಾರ ಮುಂದಾಗದಿರುವುದು ವಿಷಾದಕರ:  ಸ್ವಾತಂತ್ರ್ಯ ಹೋರಾಟಗಾರರ ಕೋಟೆಗೆ ಬೇಕಿದೆ ಕಾಯಕಲ್ಪ  

ವಿಶೇಷ ವರದಿ: ರಾಜಕುಮಾರ ನಾಯ್ಕೋಡಿ.. 

ಇಂಡಿ 13: ಭಾರತದ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮನವರು ಇಂಡಿ ತಾಲ್ಲೂಕಿನ ಕೊಟ್ನಾಳ ಮತ್ತು ನಾಗಠಾಣ ಸಮೀಪದ ಜಂಬಗಿ ಗ್ರಾಮದಲ್ಲೇ ಜನಿಸಿದ್ದರು ಎಂದು ಹೇಳಲಾಗುತ್ತಿದೆ. 

ಸಧ್ಯ ಅವನತಿ ಅಂಚು ತಲುಪಿರುವ ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದ ಮೂರು ಸುತ್ತಿನ ಕೋಟೆ ಹಾಗೂ ಒಳಾಂಗಣದಲ್ಲಿರುವ ವಾಡೆ ನಶಿಸಿ ಹೋಗುತ್ತಿವೆ. ಈ ಕೋಟೆಯ ಬಗ್ಗೆ ಇತಿಹಾಸದ ಪುಟಗಳಲ್ಲೂ ವ್ಯಾಖ್ಯಾನಿಸಲಾಗಿದೆ. ಆದರೆ ಈ ಕೋಟೆಯ ರಕ್ಷಣೆಗೆ ಮಾತ್ರ ಇದುವರೆಗೂ ಯಾವೊಂದೂ ಸರಕಾರ ಮುಂದಾಗದಿರುವುದು ದುರ್ದೈವದ ಸಂಗತಿ. 

ಕೋಟೆ ಏಕೆ ನಿರ್ಮಾಣ ಮಾಡಲಾಯಿತು? 

 ದೇಶಕ್ಕೆ ಕಾಲಿಟ್ಟ ಬ್ರಿಟಿಷರು ರಾಜ ಮನೆತನಗಳ ಮೇಲೆ ದಾಳಿ ನಡೆಸಿ ರಾಜ ಮನೆತನಗಳನ್ನು ಸೋಲಿಸಿ ಅಲ್ಲಿನ ಮುತ್ತು, ರತ್ನ, ವಜ್ರ ವೈಢೂರ‌್ಯಗಳಲ್ಲು ತಮ್ಮ ದೇಶಕ್ಕೆ ಸಾಗಿಸಲು ಶುರು ಮಾಡಿದ್ದರು. ಹೀಗಾಗಿ ಬ್ರಿಟಿಷರ ಮೇಲೆ ಯುಧ್ಧ ಮಾಡಲು ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಳ್ಳಲು ಕೊಟ್ನಾಳ ಗ್ರಾಮದಲ್ಲಿ ಬೃಹತ್ ಕೋಟೆ ನಿರ್ಮಾಣ ಮಾಡಲಾಯಿತು. ಆ ಕೋಟೆ ಮಧ್ಯದಲ್ಲಿ ಕೋಟೆಶ್ವರ ದೇವಸ್ಥಾನ ನಿರ್ಮಿಸಲಾಯಿತು.  

ಚನ್ನಮ್ಮ ಪ್ರೇರಣೆ?: 

ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ಸ್ವಾತಂತ್ಯ್ರೆಕ್ಕಾಗಿ ಹೋರಾಡಿದ್ದು ದೇಶಮುಖ ಮನೆತನಕ್ಕೆ ಪ್ರೇರಣೆಯಾಗಿತ್ತು. ಹೀಗಾಗಿ ದೇಶಮುಖ ಮನೆತನದವರು ಬ್ರಿಟಿಷರ ವಿರುಧ್ಧ ಯುಧ್ಧ ಮಾಡಲು ತಯಾರಿಯಲ್ಲಿ ತೊಡಗಿಕೊಂಡಿದ್ದರು. 

1857ರ ಸ್ವಾತಂತ್ರ್ಯ ದಂಗೆ ಕೊಟ್ನಾಳ ಕೋಟೆಯ ಸಂಬಂಧ ಹೇಗೆ? 

ದೇಶಮುಖ ಮನೆತನದವರು ಸುರಪೂರು ವೆಂಕಟಪ್ಪ ನಾಯಕ ಅವರೊಡನೆ ಕೈ ಮಿಲಾಯಿಸಿ ಬ್ರಿಟಿಷರ ಮೇಲೆ ಯುಧ್ಧ ಮಾಡಲು ತೀರ್ಮಾನಿಸಿ ಶಸ್ತ್ರಾಸ್ತ್ರ ತಯಾರಿಸಿ ಸುರಪೂರಕ್ಕೆ ಸಾಗಿಸುತ್ತಿದ್ದರು. 1857ರ ದಂಗೆಯ ಸಂದರ್ಭದಲ್ಲಿ ದೇಶಮುಖರು ಶಸ್ತ್ರಾಸ್ಥ್ರ ತಯಾರಿಸಿ ತಮ್ಮ ವಿರುಧ್ಧ ಯುದ್ಧಕ್ಕೆ ಸಿಧ್ಧತೆ ಮಾಡಿಕೊಳ್ಳುತ್ತಿರುವ ವಿಚಾರ ತಿಳಿದು ಬ್ರಿಟಿಷರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಏಕಕಾಲಕ್ಕೆ ದಾಳಿ ನಡೆಸಿ ಕೋಟೆಯನ್ನು ಕೆಡವಿ ದೇಶಮುಖರ ಮನೆತನದ ವೀರಸಂಗಪ್ಪ ಮತ್ತು  ಅವರ ಮಗ ಬಸಲಿಂಗಪ್ಪನನ್ನು ಬಂಧಿಸಿ ಸೋಲಾಪೂರದಲ್ಲಿ ಗಲ್ಲಿಗೇರಿಸಿದರು ಎಂದು ಹೇಳಲಾಗುತ್ತದೆ. 

ಯಾರೀ ದೇಶಮುಖರು? 

ವಿಜಯಪುರದ ಆದಿಲ್‌ಶಾಹಿ ರಾಜ ಮನೆತನದವರು ತಮ್ಮ ರಾಜ್ಯದಲ್ಲಿ ಸಾಹಸಗಾರರು ಅಥವಾ ಶೂರರನ್ನು ಗುರುತಿಸಿ ಅವರಿಗೆ ಇಂತಿಷ್ಟು ಹಳ್ಳಿಗಳ ಆಡಳಿತ ನಡೆಸಲು ಅನುಮತಿ ಆಜ್ಞೆ ಮಾಡುತ್ತಿದ್ದರು. ಪ್ರತೀ ವರ್ಷ ಅವರಿಗೆ ರಾಜ ಮನೆತನಕ್ಕೆ ಈ ಶೂರರು ಕಾಣಿಕೆ ನೀಡಬೇಕಿತ್ತು. ಅದರಂತೆ ಕೊಟ್ನಾಳ ಹಾಗೂ ಜಂಬಗಿಯ ದೇಶಮುಖ ಮನೆತನದವರಿಗೆ 14 ಹಳ್ಳಿಗಳ ಜವಾಬ್ದಾರಿ ನೀಡಿದ್ದಲ್ಲದೆ. ವಿಜಯಪುರದಲ್ಲಿರುವ  ಶಹಾಪುರ ಅಗಸಿ (ಮುಳ್ಳಗಸಿ) ಯಲ್ಲಿ ಈಗಿನ ಟೋಲ್‌ಗಳಂತೆ ಮೊದಲು ಸುಂಕ ಪೆಡಯುತ್ತಿದ್ದರು. ಆ ಸುಂಕ ಸಂಗ್ರಹ ಮಾಡುವುದನ್ನ ಸಹ ದೇಶಮುಖ ಮನೆತನಕ್ಕೆ ಒಪ್ಪಿಸಲಾಗಿತ್ತು ಎಂದು ತಿಳಿದು ಬರುತ್ತದೆ. 

ಚನ್ನಮ್ಮ ಮತ್ತು ಕೊಟ್ನಾಳ ಕೋಟೆ:   

ಕಿತ್ತೂರು ಚನ್ನಮ್ಮ ಅವರ ತಾಯಿಯ ತವರು ಮನೆ ಇಂಡಿ ತಾಲ್ಲೂಕಿನ ಕೊಟ್ನಾಳ ್ಳ ಗ್ರಾಮದ ದೇಶಮುಖ ಮನೆತನ. ಈ ಮನೆಯತನ ಹೆಣ್ಣು ಮಗಳು ಕಾಕತಿಯ ದೇಸಾಯ ಅವರ ಮನೆತನಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ಮೇಲೆ ಪ್ರಥಮ ಬಾಣಂತನಕ್ಕೆ ಚನ್ನಮ್ಮನ ತಾಯಿ ಪಾರ್ವತಿ ತನ್ನ ತಾಯಿಯ ಮನೆಗೆ ಬಂದು ಚನ್ನಮ್ಮನನ್ನು ಕೊಟ್ನಾಳ ಗ್ರಾಮದಲ್ಲೇ ಹೆತ್ತಿದ್ದರು. ಹೀಗಾಗಿ ಕೊಟ್ನಾಳ ಗ್ರಾಮ ಚನ್ನಮ್ಮನ ಜನನ ಸ್ಥಾನವಾಗಿದೆ. 

ವಿಜಯಪುರದ ರಾಜ ಮನೆತನದ ಅಡಿಯಲ್ಲಿ ಕೊಟ್ನಾಳ (ಜಹಗೀರ ಹಳ್ಳಿ) ದೇಶಮುಖ ಮನೆತನಕ್ಕೆ 14 ಹಳ್ಳಿಗಳ ಆಡಳಿತವನ್ನು ವಹಿಸಿಕೊಟ್ಟಿದ್ದರು. ಜಂಬಗಿ (ದೇಶಗತ್ತಿ), ಚಾಂದಕವಠೆ (ಪರಗಣ), ಇವು ಮೂರು ಆಡಳಿತಕ್ಕೆ ಸಂಭಂಧಿಸಿದ ಹಳ್ಳಿಗಳಿಗಳಾಗಿದ್ದವು ಅಲ್ಲದೆ, ಸರಸೆಟ್ಟಿ ಪ್ರಾಂತ ಎಂದು ಈಗಿನ ಸುರಪುರ ಅಗಸಿಯಲ್ಲಿ ಟೋಲ್ ನಿರ್ಮಿಸಿ ಆಗಿನ ಚಕ್ಕಡಿ ಗಾಡಿಗಳಿಂದ ಸುಂಕ ವಸೂಲಿ ಮಾಡಲು ಸಹ ದೇಶಮುಖ ಮನೆತನಕ್ಕೆ ನಿಯೋಜನೆ ಮಾಡಲಾಗಿತ್ತು. 

ದೇಶಮುಖರು ಜಂಬಗಿಯಲ್ಲಿ ವಾಸವಿದ್ದರು ಕೊಟ್ನಾಳದಲ್ಲಿ ಕೇವಲ ಶಸ್ತ್ರಾಸ್ತ್ರ ತಯಾರಿಸಲಾಗುತ್ತಿತ್ತು ಎಂದು ಕೆಲವು ಹೇಳಿದರೆ ದೇಶಮುಖರು ಕೊಟ್ನಾಳದಲ್ಲೇ ವಾಸವಿದ್ದರು ಎಂದು ಇನ್ನೂ ಕೆಲವು ಹೇಳುತ್ತಾರೆ. ಒಟ್ಟಿನಲ್ಲಿ ಕೊಟ್ನಾಳ ಕೋಟೆಗೂ ಮತ್ತು ಚನ್ನಮ್ಮನಿಗೂ ಸಂಬಂಧ ಇರುವುದಂತೂ ನಿಜ. 

ವೀರಗಲ್ಲು ಸ್ಥಾಪನೆ: ಕೊಟ್ನಾಳ ದೇಶಮುಖ ಮನೆತನದ ವೀರಸಂಗಪ್ಪ ಮತ್ತು ಅವರ ಮಗ ಬಸಲಿಂಗಪ್ಪ ಅವರ ನೆನಪಿಗಾಗಿ ಹುತಾತ್ಮ ಚೌಕ್ ನಿರ್ಮಿಸಿ ಗೌರವ ಸಲ್ಲಿಸಲಾಗಿದೆ. 

ಆದರೆ ಅವರ ಮೃತ ದೇಹಗಳನ್ನು ಬ್ರಿಟಿಷರು ದೇಶಮುಖ ಮನೆತನಕ್ಕೆ ಹಸ್ತಾಂತರಿಸದೇ ಸೋಲಾಪೂರದಲ್ಲೇ ಮಣ್ಣು ಮಾಡಿದ್ದರು. ಅವರ ಮರಣ ದಾಖಲೆಯೂ ಸಹ ದೇಶಮುಖ ಮನೆತನಕ್ಕೆ ಸಿಕ್ಕಿಲ್ಲ. ಅಂತಹ ವೀರರನ್ನು ಮಣ್ಣು ಮಾಡಿದ ಭೂಮಿ ಎಲ್ಲಿದೆ ಎಂಬುದನ್ನು ಪತೆ ಹಚ್ಚಿ ಅವುಗಳನ್ನು ಅಭಿವೃಧ್ಧಿ ಪಡಿಸಬೇಕೆಂಬುದು ಕೊಟ್ನಾಳ ಗ್ರಾಮಸ್ಥರ ಆಶಯ. 

ಇಂತಹ ವೀರಪರಂಪರೆ ಹೊಂದಿದ ಕೊಟ್ನಾಳ ಗ್ರಾಮದ ಕೋಟೆ ರಕ್ಷಣೆ ಸರಕಾರ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. 

ಕೊಟ್ನಾಳ ಕೋಟೆ ನಶಿಸಿ ಹೋಗುತ್ತಿದೆ. ಜನಪ್ರತಿನಿಧಿಗಳು ಇಛ್ಛಾಶಕ್ತಿ ವಹಿಸಿದರೆ ಮಾತ್ರ ಈ ಪಾಚೀನ ಕೋಟೆಯ ರಕ್ಷಣೆ ಸಾಧ್ಯ. ಸಂಭಂಧಿಸಿದ ಇಲಾಖೆಯವರು ಕೊಟ್ನಾಳ ಕೋಟೆಯ ಬಗ್ಗೆ ಸಂಶೋಧನೆ ನಡೆಸಬೇಕು. ಕೊಟ್ನಾಳ ಕೋಟೆಯನ್ನು ಪ್ರವಾಸಿಗರ ತಾಣ ಮಾಡಬೇಕು. 

ಸೋಮಶೇಖರ ದೇಸಾಯಿ,  

ಚನ್ನಮ್ಮನ 7 ನೇ ತಲೆಮಾರಿನ ವಂಶಸ್ಥರು. 

ಬಸವರಾಜ ದೇಶಮುಖ 

ಚನ್ನಮ್ಮನ ಅಜ್ಜಿಯ ಮನೆಯ ವಂಶಸ್ಥರು. 


ಸುದ್ದಿ ಓದಿ