ಈ ಬಾರಿ ಬಿಜೆಪಿ ಹೀನಾಯವಾಗಿ ಸೋಲಲಿದೆ: ಕಳ್ಳಿಮನಿ
ತಾಳಿಕೋಟಿ: ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಬಿಜೆಪಿ ಈಗಾಗಲೇ ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಅದರ ದುರಾಡಳಿತಕ್ಕೆ ಜನರು ಬೇಸತ್ತು ಹೋಗಿದ್ದು ಚುನಾವಣೆಯಲ್ಲಿ ಅದಕ್ಕೆ ತಕ್ಕ ಪಾಠವನ್ನು ಕಲಿಸಲು ಕಾತುರರಾಗಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ದೇ.ಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುಜಾತಾ ಕಳ್ಳಿಮನಿ ಹೇಳಿದರು.
ದೇವರ ಹಿಪ್ಪರಗಿ ಮತಕ್ಷೇತ್ರದ ಕುದರಿ ಸಾಲವಾಡಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಆಡಳಿತ ವೈಫಲ್ಯಗಳನ್ನು ಜನರಿಗೆ ತಿಳಿಸಿಕೊಡಲು ಹಮ್ಮಿಕೊಂಡ ಜನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಈಗ ಮುಳುಗುತ್ತಿರುವ ಹಡಗು ಇದ್ದಂತೆ ಅದರಲ್ಲಿ ಪ್ರಯಾಣಿಸಲು ಯಾರೂ ಬಯಸುವದಿಲ್ಲ ಅದು ಈ ರಾಜ್ಯ ಕಂಡ ಅತಿ ಭ್ರಷ್ಟ ಸರಕಾರವಾಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ ಕಾಂಗ್ರೆಸ್ದಿಂದ ಮಾತ್ರ ಜನರ ಉದ್ಧಾರ ಸಾಧ್ಯ ಎಂದು ಹೇಳಿದರು.
ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ ಬಿಜೆಪಿಯವರು ಜನರ ಮುಂದೆ ಹೋಗಿ ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಕೇವಲ ಜಾತಿ ಧರ್ಮಗಳ ಹೆಸರಿನಲ್ಲಿ ಜನರ ಮಧ್ಯೆ ದ್ವೇಷವನ್ನು ಬೆಳೆಸಿ ರಾಜಕಾರಣ ಮಾಡುವುದನ್ನು ಪರಿಪಾಠ ಮಾಡಿಕೊಂಡ ಬಿಜೆಪಿ ತನ್ನ ದೌರ್ಬಲ್ಯಗಳನ್ನು ಮೆಚ್ಚಿಕೊಳ್ಳಲು ಮಾಡುತ್ತಿರುವ ಈ ನಾಟಕ ಹೆಚ್ಚು ದಿನ ನಡೆಯುವದಿಲ್ಲ. ಈ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ತರಲು ತೀಮರ್ಾನಿಸಿದ್ದಾರೆ.
ಅಧ್ಯಕ್ಷತೆವಹಿಸಿ ಮಾತನಾಡಿದ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಜನರ ವಿಶ್ವಾಸವನ್ನು ಕಳೆದುಕೊಂಡಿವೆ. ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಸಿದ್ಧರಾಮಯ್ಯನವರು ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ರಾಜಕೀಯ ದುರುದ್ದೇಶದಿಂದ ಸ್ಥಗಿತಗೊಳಿಸಿದ್ದಾರೆ. ಇದೊಂದು ಕೆಟ್ಟ ಸರಕಾರ ಇವರನ್ನು ಈ ಬಾರಿ ನಾವೆಲ್ಲರೂ ಸೇರಿ ಮನೆಗೆ ಕಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಡಾ. ನಂದಕುಮಾರ ಭೈರಿ, ಮುಖಂಡರಾದ ಸುರೇಶ ಬಾಬುಗೌಡ ಬಿರಾದಾರ, ಎಚ್.ಬಿ. ಬಿರಾದಾರ, ಮೈನು ಕಲಕೇರಿ, ಪ್ರಭುಗೌಡ ಬಿರಾದಾರ, ಬಾಲು ತಳವಾರ ಇದ್ದರು.