ಲೇಖನಗಳು

ಇದೊಂದು ನಮ್ಮ ಆತ್ಮವಿಸ್ತರಣೆಯ ಅವಕಾಶ

ಇದೊಂದು ನಮ್ಮ ಆತ್ಮವಿಸ್ತರಣೆಯ ಅವಕಾಶ

ಪ್ರಧಾನಿ ಮೋದಿಯವರು ತಮ್ಮ ತಾಯಿಯವರ ಮೃತಶರೀರಕ್ಕೆ ಹೆಗಲುಕೊಟ್ಟ ಆ ದೃಶ್ಯ ಕಂಡಾಗ, ಊರಿಗೆ ಅರಸನಾದರೂ ತಾಯಿಗೆ ಮಗ ಎಂಬ ಮಾತು ನಿಜವೆನಿಸಿತು. ಅಂತೆಯೇ ಸಾವಿನ ಮನೆಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ನಾನು ಗಮನಿಸುತ್ತಿರುವ ಒಂದು ವಿಷಯವನ್ನು ನಿಮಗೆ ಈಗ ಸಂದರ್ಭೋಚಿತವಾಗಿ ಹೇಳಲೇಬೇಕೆನಿಸಿತು. 

ವ್ಯಕ್ತಿ ಮೃತನಾದ ಸಂದರ್ಭದಲ್ಲಿ ಹೇಗಿದ್ದರೂ ವಾಹನ ತರಿಸಿದ್ದೇವೆಂಬ ಕಾರಣದಿಂದ, ಸಾವಿನ ಮನೆಯ ಮುಂದೆ ನೂರಾರು ಜನರಿದ್ದರೂ ಕೂಡ ಆ ಮೃತಶರೀರವನ್ನು ನೇರವಾಗಿ ಆ ಗಾಡಿಯೊಳಗಿಟ್ಟು ಸ್ಮಶಾನಕ್ಕೋ ಅಥವಾ ಚಿತಾಗಾರಕ್ಕೋ ಗಾಡಿಯ ಮೂಲಕವೇ ಒಯ್ಯುವ ಪದ್ಧತಿ ಆರಂಭವಾಗಿದೆ. ಕೆಲ ವೇಳೆ ಚಟ್ಟ ಕಟ್ಟುವವನೇ ಆ ವಾಹನದ ಚಾಲಕನಾಗಿರುತ್ತಾನೆ. ಆತ ಚಟ್ಟ ಕಟ್ಟುವ ಚಂದ ನೋಡಿದರೆ ದೇವರಿಗೇ ಪ್ರೀತಿ ಎಂಬತ್ತಿರುತ್ತದೆ.  

ಸಮಯದ ಆಧಾರದ ಮೇಲೆ ತೀರ್ಮಾನ ಮಾಡಬೇಕು ಎನ್ನುವುದು ಒಪ್ಪಬಹುದಾದ ಸಂಗತಿಯಾದರೂ ಮೃತ ಶರೀರಕ್ಕೆ ಹೆಗಲು ಕೊಡುವುದು ಒಂದು ಭಾಗ್ಯವೇ ಸರಿ. ಅದರಿಂದ ಮೃತರಿಗೆ ಏನು ಸಿಗುತ್ತೆ ಅಥವಾ ಹೆಗಲು ಕೊಟ್ಟವರಿಗೆ ಪುಣ್ಯ ಎಂಬಿತ್ಯಾದಿ ಆಲೋಚನೆಗಳಿಗಿಂತ, ಅದೊಂದು ನಮ್ಮ ಆತ್ಮವಿಸ್ತರಣೆಯ ಅವಕಾಶ ಎಂಬುದು ನನ್ನ ಭಾವನೆಯಾಗಿದೆ. 

ಅದೆಕ್ಕೋ ಗೊತ್ತಿಲ್ಲ, ವೈಯಕ್ತಿಕವಾಗಿ ನಾನು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ, ಯಾವಾಗಲೂ ಮೃತ ಶರೀರಕ್ಕೆ ಹೆಗಲು ಕೊಡಲು ಮುಂದೆ ಹೋಗುತ್ತೇನೆ. ಚಟ್ಟ ಕಟ್ಟಲು ಕೈ ಹಾಕುತ್ತೇನೆ. ಸಣ್ಣ ವಯಸ್ಸಿನಲ್ಲಿ ಈ ಸಾವಿನ ಮನೆಗಳಲ್ಲಿ ಬಂದು ಎಲ್ಲದರಲ್ಲೂ ಮುಂದಾಗಿ ಧೈರ್ಯದಿಂದ ಭಾಗಿಯಾಗಿ, ಚಟ್ಟ ಕಟ್ಟಿ, ಶವವನ್ನು ಆ ಕಡೆ ಈ ಕಡೆ ಎತ್ತಿಡಲು ಸಹಾಯ ಮಾಡುತ್ತಾ, ಸ್ಥಿತಪ್ರಜ್ಞರಂತೆ ಕೆಲಸ ಮಾಡುವವರು ನನಗೆ ಅಕ್ಷರಶಃ ಈ ಸಮಾಜದ ರಿಯಲ್ ಹೀರೋಗಳು ಅನ್ನಿಸುತ್ತಿದ್ದರು.  

ಇಂತಹವರು ಮದುವೆ ಮುಂಜಿಯಂತಹ ಶುಭ ಕಾರ್ಯಕ್ರಮಗಳಲ್ಲಿ ನಮಗೆ ಅಷ್ಟು ಕಾಣುವುದಿಲ್ಲ. ಬೇರೆ ಜಾತಿಯವನಾದರೂ ನಮ್ಮ ಓಣಿಯ ಆಟೋ ಓಡಿಸುತ್ತಿದ್ದ ಭೀಮಪ್ಪ ನನಗೆ ನೆನಪಾಗ್ತಾರೆ. ಆತ ಪ್ರತಿ ಸಾವಿನ ಮನೆಯಲ್ಲೂ ಹಾಜರ್ ಆಗಿರುತ್ತಿದ್ದ. ಚಿತೆಗೆ ಸೀಮೆಎಣ್ಣೆ ಎಷ್ಟು ಹೇಗೆ ಹಾಕಬೇಕು, ಯಾವ ಸೌದೆ ಎಲ್ಲಿ ಹೇಗೆ ಇಡಬೇಕು.. ತಲೆ ಭಾಗಕ್ಕೆ ಯಾವುದು ಬರಬೇಕು, ಸೊಂಟಕ್ಕೆ ಯಾವುದು.. ಹಸಿ ಸೌದೆ ಆದರೆ ಹೇಗೆ, ಮಳೆ ವಾತಾವರಣ ಇದ್ದರೆ ಹೇಗೆ.. ಗಾಳಿ ನೋಡಿಕೊಂಡು ಸೀಮೆ ಎಣ್ಣೆ ಎರಚುವುದು... ತಲೆಬುರುಡೆ ಒಡೆಯುವ ಶಬ್ಧ ಹೇಗಿರುತ್ತೆ. ಚಟ್ಟವಾದರೆ ಅದನ್ನು ಹೇಗೆಲ್ಲಾ ಕಟ್ಟಬೇಕು. ಹೊರಬೇಕು ಎಂಬಿತ್ಯಾದಿ ವಿಷಯಗಳನ್ನೆಲ್ಲಾ ತಿಳಿಸಿಕೊಡುತ್ತಿದ್ದ. ನಿಜಕ್ಕೂ ನನಗೆ ಆತ ಡೇರ್ ಡೆವಿಲ್ ಅನ್ನಿಸುತ್ತಿದ್ದ. 

ಇತ್ತೀಚೆಗೆ ಕೆಲ ಘಟನೆಗಳನ್ನು ನೋಡಿ ಬಹಳ ಬೇಸರ ಪಟ್ಟು ಸ್ನೇಹಿತರೊಡನೆ ಹಳಹಳಿಸಿದ್ದೇನೆ. ಅದೂ ಸಾರ್ವಜನಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದವರು, ಜಾತಿ ಮತ ಅನ್ನದೆ ನೂರಾರು ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದವರು ಸತ್ತಾಗಲೂ, ಹೆಗಲು ಕೊಡಲು ಹತ್ತಾರು ಜನ ತಯಾರಿದ್ದರೂ, ಯಾರೋ ಒಬ್ಬ ತಲೆಮಾಸಿದವನು ಗುಂಪಿನಲ್ಲಿ "ಗಾಡಿ ಇದ್ಯಲ್ಲ, ಇದರಲ್ಲೇ ತೆಗೆದುಕೊಂಡು ಹೋಗಿಬಿಡೋಣ" ಅಂತ ಹೇಳಿಬಿಡ್ತಾರೆ. ಆಗ ಅದಕ್ಕೆ ಎಲ್ಲರೂ ಓಕೆ ಅಂದು ಬಿಡ್ತಾರೆ. ಭೂತಯ್ಯನ ರೀತಿ ಬದುಕಿ ಸತ್ತರೆ ಅದು ಬೇರೆ ಮಾತು. ಆದರೆ ಎಲ್ಲರಿಗೂ ಬೇಕಾಗಿ ಸತ್ತವನಾದರೂ. 

ನಾವು ಈ ವಿಷಯದಲ್ಲಿ ಮುಸಲ್ಮಾನರನ್ನು ನೋಡಿ ಸಲ್ಪ ಕಲಿಯಬೇಕು. ಅವರು ಸತ್ತವ ಯಾರು ಎತ್ತ ಅಂತ ನೋಡದೇ, ತಮ್ಮವರು ಅಂತ ತಿಳಿದ ಕ್ಷಣ ಎಂಥವನೇ ಆಗಿದ್ದರೂ ಚಪ್ಪಲಿ ತೆಗೆದು ಸ್ವಲ್ಪ ಕ್ಷಣ ಹೆಣಕ್ಕೆ ಹೆಗಲು ಕೊಡುತ್ತಾರೆ. ಸಾವು ಕುಟುಂಬಕ್ಕೆ ಸೀಮಿತವಾದರೂ, ಈ ಮೂಲಕ ಅದು ಸಮಾಜ ಒಗ್ಗೂಡಿಸುವುದಕ್ಕೆ ಕಾರಣವೂ ಕೂಡಾ. ಉತ್ತರ ಭಾರತದಲ್ಲಿಯೂ ಈ ಅಭ್ಯಾಸ ಇನ್ನೂ ಇದೆ. ಗ್ರಾಮೀಣ ಭಾಗಗಳಲ್ಲಿ ಈಗಲೂ ಸತ್ತ ಮನೆಯವರು ಹಣ ಕೊಟ್ಟು ಸೌದೆಗೆ ಹೇಳುವ ಹಾಗಿಲ್ಲವಂತೆ. ಹಳ್ಳಿಯವರೆಲ್ಲಾ ತಾವಾಗಿಯೇ ಒಂದು ಕಡೆ ಸಂಸ್ಕಾರಕ್ಕೆ ಬೇಕಾಗುವ ಸೌದೆ ತಂದು ಗುಡ್ಡೆಹಾಕುತ್ತಾರಂತೆ.  

ಕೊನೆೆ ಪಕ್ಷ ಗಾಡಿಯನ್ನು ರಸ್ತೆ ತುದಿಯಲ್ಲಿ ನಿಲ್ಲಿಸಿ, ನೂರು ಮೀಟರ್ ಆದರೂ ಶವವನ್ನು ನಾಲ್ಕು ಜನ ಹೆಗಲುಕೊಟ್ಟು ಸಾಗುವ ಪದ್ಧತಿಯನ್ನಾದರೂ ನಮ್ಮವರು ಉಳಿಸಿಕೊಳ್ಳಬೇಕು. ಅದಕ್ಕೆ ಕುಟುಂಬದವರೂ ಕೂಡ ಸ್ವಲ್ಪ ಸಮಾಜಕ್ಕೆ ಅವಕಾಶ ಮಾಡಿಕೊಡಬೇಕು. ಹೆಗಲುಕೊಡಲು ಯಾರೂ ಇಲ್ಲವೆಂದರೆ ಇದ್ದೆಯಲ್ಲ ಗಾಡಿಸವಾರಿ.  

ಈ ನಿಟ್ಟಿನಲ್ಲಿ ನಮ್ಮ ಯುವಜನರನ್ನು ಜಾತಿ ಮತ ಬೇಧಗಳಿಲ್ಲದೆ ಸಾವಿನ ಮನೆಯ ಕಾರ್ಯಗಳಲ್ಲಿ ಭಾಗಿಯಾಗುವಂತೆ ಹಿರಿಯರು ಪ್ರೇರೇಪಿಸಬೇಕು. ಏಕೆಂದರೆ ಇದೊಂದು ನಮ್ಮ ಆತ್ಮವಿಸ್ತರಣೆಯ ಅವಕಾಶ. ಇದನ್ನು ಯಾರೂ ತಪ್ಪಿಸಿಕೊಳ್ಳಬಾರದು. ಬಹುಶಃ ಇದೇ ಪಾಠವನ್ನು ಮೋದಿ ನಮಗೆಲ್ಲರಿಗೂ ಮಾರ್ಮಿಕವಾಗಿ ತಿಳಿಸಿ ಕೊಟ್ಟಿದ್ದಾರೆ. 

- ಮಂಜುನಾಥ ಎಸ್‌. ಕಟ್ಟಿಮನಿ  

ಸಾಹಿತಿ, ವಿಜಯಪುರ 

- * * * -  


ಸುದ್ದಿ ಓದಿ