ಈ ಸಿನಿಮಾ ಯುರೋಪಿಯನ್ ಯೂನಿಯನಿಗೆ ಬರೆದ ಒಂದು ಭಾಷ್ಯ
Unclinching the Fists:ರಶ್ಯನ್ ಭಾಷೆಯ ಈ ಸಿನಿಮಾ ಸಣ್ಣ ಊರೊಂದರಲ್ಲಿ ನಡೆಯುತ್ತದೆ.ತಂದೆ,ಇಬ್ಬರು ಸಹೋದರರನ್ನು ಅಡಾ ಅಪಾರವಾಗಿ ಪ್ರೀತಿಸುತ್ತಾಳೆ.ಆದರೆ ಅವಳು ಇಷ್ಟಪಟ್ಟ ಪರ್ಪ್ಯೂಮ್ ಹಾಕಲು,ತಲೆಕೂದಲು ಬೆಳೆಸಲು ಅವಳಿಗೆ ಸ್ವಾತಂತ್ರ್ಯವಿಲ್ಲ.ಕನ್ಯತ್ವವನ್ನು ಸ್ವ ಇಚ್ಚೆಯಿಂದ ಕಳೆದುಕೊಳ್ಳಲು ಬಯಸಿದರೆ, ಡಯಾಪರ್ ಬಿಚ್ಚುವುದಕ್ಕಿಂತ ಮುಂದೆ ಹೋಗದ ಪ್ರಿಯಕರ.ಲಕ್ವ ಹೊಡೆದು ಮಾತು ಕಳಕೊಂಡ ತಂದೆಯ ಕಬಂಧ ಬಾಹುಗಳಿಂದ ಬಿಡುಗಡೆ ಪಡೆದು ಹೊರಡುವ ಅಡಾಳಿಗೆ ಅಣ್ಣನೂ ಅಪ್ಪನ ವಾಸನೆ ಸೂಸುತ್ತಾನೆ.ಗಂಡಾಳ್ವಿಕೆಯನ್ನು ಮೀರುವ ಪೋಸಿಟಿವ್ ನೋಟ್ ನಿಂದ ಸಿನಿಮಾ ಕೊನೆಗೊಂಡರೂ ಏಕತಾನತೆಯಿಂದಾಗಿ ಆವರಿಸಿಕೊಳ್ಳುವುದಿಲ್ಲ
Persian Lessons:ಜರ್ಮನಿಯ ಈ ಚಿತ್ರದಲ್ಲಿ ಯಹೂದಿಯೊಬ್ಬ ಪಾರ್ಸಿಯೆಂದು ಹೇಳಿ ನಾಜಿಗಳಿಂದ ಬದುಕಿಕೊಳ್ಳಲು ಬಯಸುತ್ತಾನೆ.ಅಡುಗೆಯ ಉಸ್ತುವಾರಿ ನೋಡುವ ನಾಜಿ ಸೈನ್ಯಾಧಿಕಾರಿಗೆ ಪರ್ಶಿಯನ್ ಕಲಿತು,ಯುದ್ಧಾನಂತರ ಟೆಹರಾನ್ ನಲ್ಲಿ ರೆಸ್ಟುರಾ ತೆರೆಯುವಾಸೆ.ಪರ್ಶಿಯನ್ ಇನಿತೂ ಗೊತ್ತಿರದ ಯಹೂದಿ,ಬಂಧಿತರ ಹೆಸರನ್ನಾಧರಿಸಿ ಪದಗಳನ್ನು ಸೃಷ್ಟಿಸಿ ಪರ್ಶಿಯನ್ ಎಂದು ಬಿಂಬಿಸುತ್ತಾನೆ.
ನಿಜ ಘಟನೆಗಳನ್ನು ಆಧರಿಸಿದ ಹೇಳಲಾದ ಈ ಚಿತ್ರದಲ್ಲಿ ನಿಜವೆಷ್ಟೋ? ಆದರೆ ಆತ ಸೃಷ್ಟಿಸಿದ 2840 ಪದಗಳಿಂದ ಅಷ್ಟು ಜನ ಸತ್ತವರ ಮಾಹಿತಿ ಸಿಗುತ್ತದೆ ಎನ್ನುವುದು ಬೆರಗುಗೊಳಿಸುತ್ತದೆ.ಯಹೂದಿ ಮತ್ತು ನಾಜಿ ಅಧಿಕಾರಿ ಕ್ಲಾಸ್ ಕೋಚ್ ಪಾತ್ರಗಳ ನಟನೆ ಚೆನ್ನಾಗಿದೆ.ಕ್ಷಣಕ್ಷಣದ ಕುತೂಹಲ,ನವಿರು ಹಾಸ್ಯ,ಯುಕ್ತ ಹಿನ್ನೆಲೆ ಸಂಗೀತ ಚಿತ್ರವನ್ನು ಮೇಲ್ಮಟ್ಟದಲ್ಲಿರಿಸಿದೆ.
I Never Cry:ಪೋಲೆಂಡ್ ದೇಶದ ಈ ಸಿನಿಮಾ ಯುರೋಪಿಯನ್ ಯೂನಿಯನಿಗೆ ಬರೆದ ಒಂದು ಭಾಷ್ಯ. ಐರ್ಲಾಂಡ್ ನಲ್ಲಿ ಸತ್ತ ಅಪ್ಪನ ಶವವನ್ನು ಪೋಲೆಂಡಿಗೆ ತರಬಯಸುವ ಮಗಳ ಕತೆ ಸರಳವಾದರೂ ಹರಿವು ವಿಸ್ತಾರವಾಗಿದ್ದು, ಮನಕಲಕುವಂತಿದೆ.ಪೋಲೀಸ್,ಕಾನೂನು,ಅಧಿಕಾರಿಗಳ ಮರ್ಜಿ ಬಾರಿಬಾರಿಗೂ ತೊಡರುಗಾಲು ಹಾಕುತ್ತದೆ.EU ಆದ ಬಳಿಕ ದೇಶದಿಂದ ದೇಶಕ್ಕೆ ಹೋಗಿ ಕೆಲಸ ಮಾಡುವವರ ಕಷ್ಟ,ಅಧಿಕಾರಿಗಳ ದರ್ಪ,ಕಾನೂನುಗಳು,ಬದಲಾದರೂ ತಪ್ಪದ ಸಾಮಾನ್ಯರ ಬವಣೆ ಇವೆಲ್ಲವನ್ನೂ ಚಿತ್ರ ಸೂಕ್ಷ್ಮವಾಗಿ ಒಳಗೊಂಡಿದೆ.ಖಾಸಗಿ ವ್ಯವಸ್ಥೆಯ ಸುಲಿಗೆ ಮುಖಕ್ಕೆ ರಾಚುತ್ತದೆ.ಇವೆಲ್ಲದರೊಂದಿಗೆ ಭಾವನಾತ್ಮಕ ಅಂಶಗಳು ಮನಮುಟ್ಟುತ್ತವೆ.ಹದಿನೆಂಟು ತುಂಬದ ಓಲಾಳಿಗೆ ಮುಖವನ್ನೂ ನೋಡದ ಅಪ್ಪನ ಮೇಲೆ ಅಸಾಧ್ಯ ಸಿಟ್ಟು.ವ್ಯಗ್ರಳಾಗಿಯೇ ಇರುವ ಈ ಪಾತ್ರದಲ್ಲಿ ಝೋಫಿಯಾ ಅದ್ಭುತವಾಗಿ ನಟಿಸಿದ್ದಾಳೆ.ಬದಲಾದ ಸಾಮಾಜಿಕ ಪರಿಸ್ಥಿತಿ ಬದುಕಿನ ಮೇಲೆ ಉಂಟು ಪರಿಣಾಮದ ದೃಷ್ಟಿಯಿಂದಲೂ ಈ ಸಿನಿಮಾ ನೋಡುವಂತಿದೆ.