ಲೇಖನಗಳು

ಗಡಾಫಿಯ ಇಂಗ್ಲಿಷ್‌ ಭಾಷಾ ದ್ವೇಷಕ್ಕೆ ಕಾರಣವೂ ಇತ್ತು !

ಗಡಾಫಿಯ ಇಂಗ್ಲಿಷ್‌ ಭಾಷಾ ದ್ವೇಷಕ್ಕೆ ಕಾರಣವೂ ಇತ್ತು !

ಐರ್ಲಂಡ್‍ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ‘ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತು. ಆದರೆ 1986ರಲ್ಲಿ ಬರ್ಲಿನ್‍ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಾಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕಾ ಕೂಡಾ ಲಿಬಿಯಾವನ್ನು ’ಭಯೋತ್ಪದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತಲ್ಲದೇ ಪ್ರತಿಕಾರವಾಗಿ ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮೇಲೆ ಬಾಂಬ್ ದಾಳಿ ನಡೆಸಿತು. ಈ ಕಾರಣಕ್ಕಾಗಿ ಲಿಬಿಯಾದ ಮೇಲೆ ತಾತ್ಕಾಲಿಕ ದಿಗ್ಬಂಧವನ್ನು ಹೇರಿತು. ಮುಂದೆ ಅಂದರೆ 1988ರಲ್ಲಿ ಸ್ಕಾಟ್ಲೆಂಡ್‍ನ ಲಾಕರ್-ಬಿ ಎನ್ನುವ ಪಟ್ಟಣದ ಮೇಲೆ ಹಾರಾಡುತ್ತಿದ್ದ ಅಮೆರಿಕಾದ ಪಾನ್ ಅಮ್ 103 ಎನ್ನುವ ವಿಮಾನವೊಂದನ್ನು ಸ್ಫೋಟಿಸಿದ ಆರೋಪವೂ ಲಿಬಿಯಾದ ಮೇಲೆ ಬಂತು. ಬಹುಕಾಲ ಗಡಾಫಿ ಇದನ್ನು ನಿರಾಕರಸುತ್ತಲೇ ಬಂದ. ಈ ಕಾರಣಕ್ಕಾಗಿ ವಿಶ್ವಸಂಸ್ಥೆ ಲಿಬಿಯಾವನ್ನು ಮತ್ತೆ ನಿಷೇಧಕ್ಕೆ ಗುರಿಪಡಿಸಿತು. ಇದು ಗಡಾಫಿಯನ್ನು ರೊಚ್ಚಿಗೆಬ್ಬಿಸಿತಲ್ಲದೆ ಅಮೆರಿಕನ್ನರ ಮೇಲಿನ ಕೋಪಕ್ಕಾಗಿ ಅವರ ಮಾತೃಭಾಷೆಯಾದ ಇಂಗ್ಲೀಷ್ ಭಾಷೆಯನ್ನು ನಾವೇಕೆ ಓದಬೇಕು? ಬರೆಯಬೇಕು? ಮಾತನಾಡಬೇಕು? ಎಂದು ದುಡುಕಿ ಅದನ್ನು ತನ್ನ ದೇಶದಿಂದ ನಿಷೇಧಗೊಳಿಸಿಬಿಟ್ಟ.

ಆದರೆ Amazigh International Council ನ (Amazigh ಎನ್ನುವದು ಲಿಬಿಯಾದಲ್ಲಿ ಮುಂಚಿನಿಂದಲೂ ಕಡೆಗಣಿಸಲ್ಪಟ್ಟ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗ) ನಿರ್ದೇಶಕರಾದ ಹಫೀದ್ ಫಿಸ್ ಹೀಗೆ ಹೇಳುತ್ತಾರೆ, “ಗಡಾಫಿ ಸುಮಾರು ಹತ್ತು ವರ್ಷಗಳ ಕಾಲ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕನ್ನರ ಮೇಲಿನ ಕೋಪ ಎನ್ನುವದು ಒಂದು ನೆಪವಷ್ಟೆ. ಆದರೆ ನಿಜದ ಸಂಗತಿ ಬೇರೆಯೇ ಇದೆ. ಗಡಾಫಿಗೆ ಲಿಬಿಯನ್ನರ ಬಗ್ಗೆ ಭಯವಿತ್ತು. ತಾನು ಅಧಿಕಾರಕ್ಕೆ ಬಂದಂದಿನಿಂದ ಗಡಾಫಿ ನಿಧಾನವಾಗಿ ಲಿಬಿಯನ್ನರ ಮೆಲೆ ತನ್ನ ಹತೋಟಿಯನ್ನು ಸಾಧಿಸಿ ಮೆಲ್ಲನೆ ಅವರ ಮೆಲೆ ದಬ್ಬಾಳಿಕೆ ನಡೆಸತೊಡಗಿದ. ಅವರು ಇಂಗ್ಲೀಷ್ ಭಾಷೆಯನ್ನು ಕಲಿತರೆ ಎಲ್ಲಿ ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳಿಬಿಡುತ್ತಾರೋ ಎನ್ನುವ ಭಯವಿತ್ತು ಅವನಿಗೆ. ಹೀಗಾಗಿ ಅವನು ಉದ್ದೇಶಪೂರ್ವಕವಾಗಿ ಇಂಗ್ಲೀಷ್ ಭಾಷೆಯನ್ನು ತನ್ನ ದೇಶದಿಂದ ನಿಷೇಧಿಸಿನಲ್ಲದೆ ಆ ಮೂಲಕ ತನ್ನ ದೇಶದ ಜನರು ಆ ಭಾಷೆಯನ್ನು ಕಲಿಯದಂತೆ ಮಾಡಿಬಿಟ್ಟ.

ಹಾಗೆ ನೋಡಿದರೆ ಗಡಾಫಿ ತನ್ನ ಬದ್ಧ ವೈರಿ ದೇಶವಾದ ಅಮೆರಿಕವೂ ಸೆರಿದಂತೆ ಬಹಳಷ್ಟು ಇಂಗ್ಲೀಷ್ ಮಾತನಾಡುವ ದೇಶಗಳ ಜೊತೆ ತನ್ನ ಸಂಬಂಧವನ್ನು ಚನ್ನಾಗಿಯೇ ಇಟ್ಟುಕೊಂಡಿದ್ದ. ತನ್ನ ಈ ನೀತಿಯನ್ನು ಲಿಬಿಯಾದ ಜನತೆ ಹೊರಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ಒಂದು ಅಸ್ತ್ರದಂತೆ ಬಳಸಿದ.” ಇವರ ಹೇಳಿಕೆಯನ್ನು ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಗೊಳಿಸುವ ಮುಂಚಿನ ದಿನಗಳಿಗೂ ಹಾಗೂ ನಂತರದ ದಿನಗಳಿಗೂ ಹೋಲಿಸಿ ಕೂಲಂಕುಷವಾಗಿ ಪರಿಶೀಲಿಸಿದರೆ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಅನಿಸುತ್ತದೆ. ಯಾಕೆಂದರೆ ಗಡಾಫಿ ತಾನು ಅಧಿಕಾರಕ್ಕೆ ಬಂದ ವರ್ಷದಿಂದಲೇ ಇಂಗ್ಲೀಷ್ ಭಾಷೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಲು ತನ್ನ ಪ್ರಜೆಗಳನ್ನು ಸ್ಕಾಲರ್ಶಿಪ್ ಕೊಟ್ಟು ಅಮೆರಿಕಾ, ಬ್ರಿಟನ್ ಮುಂತಾದ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಕಳಿಸುತ್ತಿದ್ದ.

ಒಂದು ವೇಳೆ ಅವನಿಗೆ ಲಿಬಿಯನ್ನರ ಬಗ್ಗೆ ಭಯವಿದ್ದಿದ್ದರೆ ಅವನ್ಯಾಕೆ ಹಾಗೆ ಇಂಗ್ಲೀಷ್ ಮಾತನಾಡುವ ದೇಶಗಳಿಗೆ ಅವರನ್ನು ಕಳಿಸುತ್ತಿದ್ದ? ಅಥವಾ ಗಡಾಫಿಯ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ಹೇಳುವವರಿದ್ದರೆ 1986ರಗಿಂತ ಮೊದಲೇ ಇಂಗ್ಲೀಷ್ ಕಲಿತ ಲಿಬಿಯನ್ನರು ಇದ್ದಿರಲಿಲ್ಲವೆ? ಅವರೆಲ್ಲಾ ಆತನ ಬಗ್ಗೆ ಹೇಳಬಹುದಿತ್ತಲ್ಲ? ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡ ನಂತರ ಜನ ಇಂಗ್ಲೀಷ್ ಕಲಿತು ತನ್ನ ದಬ್ಬಾಳಿಕೆಯ ಬಗ್ಗೆ ಹೊರಜಗತ್ತಿಗೆ ತಿಳಿಸಬಹುದು ಎಂಬ ಭಯ ಅವನಿಗಿದ್ದರಲಿಲ್ಲವೆ? ಹಾಗಿದ್ದೂ ಅವನು ಯಾಕೆ ಮತ್ತೆ ಇಂಗ್ಲೀಷ್ ಕಲಿಕೆಗೆ ಉತ್ತೇಜನ ಕೊಟ್ಟ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ. ಗಡಾಫಿ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿದ್ದು ಅಮೆರಿಕಾದ ಮೇಲಿನ ಕೋಪಕ್ಕಾಗಿಯೇ ಹೊರತು ಖಂಡಿತ ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಇದನ್ನು ಆಲ್ ಮೊಘಾನಿ ಹಸನ್ ಮೊಹಮ್‍ದ ಎನ್ನುವ ಪಿ.ಎಚ್‍ಡಿ. ವಿದ್ಯಾರ್ಥಿಯೊಬ್ಬ ಹೀಗೆ ಪುಷ್ಟಿಕರಿಸುತ್ತಾನೆ. ಆತ “Students’ Perceptions of Motivation in English Language Learning in Libya” ಎನ್ನುವ ತನ್ನ ಇಂಗ್ಲೀಷ್ ಪ್ರೌಡಪ್ರಬಂಧದಲ್ಲಿ ಗಡಾಫಿಗೆ ಇಂಗ್ಲೀಷ್ ಭಾಷೆ ಮತ್ತು ಅಮೆರಿಕನ್ನರ ಮೇಲಿದ್ದ ಹಗೆತನ ಹೇಗೆ ಲಿಬಿಯನ್ನರ ಇಂಗ್ಲೀಷ್ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿತು ಮತ್ತು ಈ ವಿಷಯದಲ್ಲಿ ಪ್ರಜೆಗಳು ಕೂಡಾ ಹೇಗೆ ತಮ್ಮ ರಾಜನನ್ನೇ ಅನುಸರಿಸಿದರು ಎನ್ನುವದನ್ನು ಹೇಳುತ್ತಾನೆ. ಮುಂದುವರಿದು ಮತ್ತೆ ಹೀಗೆ ಹೇಳುತ್ತಾನೆ. ಒಂದು ಸಾರಿ ಗಡಾಫಿ ತನ್ನ ಭಾಷಣದಲ್ಲಿ ಅಮೆರಿಕನ್ನರನ್ನು ಕುರಿತಂತೆ ಹೀಗೆ ಆಪಾದಿಸಿದ್ದ; “ಜಮ್ಹಾರಿಯಾ(ಲಿಬಿಯಾದ ಸಮಾಜವಾದ)ದ ಸ್ವಾಂತ್ರ್ಯಕ್ಕೆ ಧಕ್ಕೆ ತರುವ ಸಾಮ್ರಾಜ್ಯಶಾಹಿ ರಾಷ್ಟ್ರವಾದ ಅಮೆರಿಕಾವನ್ನು ಮತ್ತದರ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಆ ನಿಟ್ಟಿನಲ್ಲಿ ನಾವೆಲ್ಲಾ ಅಮೆರಿಕನ್ನರ ಹುಟ್ಟು ದ್ವೇಷಿಗಳು. ಅಮೆರಿಕನ್ನರೆಡಗಿನ ನಮ್ಮ ಈ ದ್ವೇಷ ಇತಿಹಾಸದಲ್ಲಿ ದಾಖಲಾಗಲಿ.” ಅಮೆರಿಕನ್ನರೆಡಗಿನ ಈತನ ಈ ಭಯಂಕರ ದ್ವೇಷ ಲಿಬಿಯಾದ ಜನರ ಮೇಲೆಯೂ ಗಾಢವಾದ ಪರಿಣಾಮ ಬೀರಿತು. ಅವನಂತೆ ಅವರು ಕೂಡಾ ಅಮೆರಿಕನ್ನರ ಹುಟ್ಟು ದ್ವೇಷಿಗಳಾದರು ಮತ್ತು ಇಂಗ್ಲೀಷ್ ಭಾಷೆಯನ್ನು ದ್ವೇಷಿಸತೊಡಗಿದರು. ಪರಿಣಾಮವಾಗಿ ಇಲ್ಲಿ ಹುಟ್ಟುವ ಪ್ರತಿಯೊಂದು ಮಗವು ಅಮೆರಿಕನ್‍ರ ದ್ವೇಷಿಯಾಗಿ ಹುಟ್ಟಿತು.

ಕ್ರಮೇಣ ಅಮೆರಿಕಾದ ಜೊತೆ ಲಿಬಿಯಾದ ಸಂಬಂಧ ಸರಿಹೋಗುತ್ತಿದ್ದಂತೆ ಗಡಾಫಿಗೆ ಇಂಗ್ಲೀಷ್ ಭಾಷೆಯ ಮಹತ್ವದ ಅರಿವಾಗತೊಡಗಿತು. ಮಾತ್ರವಲ್ಲ ಇಂಗ್ಲೀಷ್‍ನ್ನು ಕಲಿಯದೇ ಹೋದರೆ ಅಮೆರಿಕನ್ನರು ನಡೆಸುವ ಕಾರುಬಾರುಗಳು ನಮಗೆ ಗೊತ್ತೇ ಆಗುವದಿಲ್ಲ ಹಾಗೂ ಲಿಬಿಯಾಕ್ಕೆ ಒಳ್ಳೆಯ ಭವಿಷ್ಯವಿರುವದಿಲ್ಲ ಎಂಬ ಸತ್ಯವನ್ನು ಮನಗಂಡ. ಹೀಗಾಗಿ ಆತ ಮತ್ತೆ ಇಂಗ್ಲೀಷ್ ಭಾಷೆಯ ಕಲಿಕೆಯನ್ನು ಆರಂಭಿಸಿದ. ಕೆಲವರು ಆತ ಇಂಗ್ಲೀಷ್ ಭಾಷೆಯನ್ನು ನಿಷೇಧಿಸಿ ಆರು ವರ್ಷಗಳ ನಂತರ ಅಂದರೆ 1992ರಲ್ಲಿ ಅದರ ಕಲಿಕೆಯನ್ನು ಮತ್ತೆ ಆರಂಭಿಸಿದನೆಂದೂ ಆದರೆ ಅದು ಇಡಿ ದೇಶದ ತುಂಬಾ ವಿಸ್ತರಣೆಯಾದದ್ದು 1996ರಲ್ಲಿ ಮಾತ್ರ ಎಂದು ಹೇಳುತ್ತಾರೆ.

ಇನ್ನು ಕೆಲವರು ಸರಿ ಸುಮಾರು ಹತ್ತು ವರ್ಷಗಳ ಕಾಲ ಅಂದರೆ 1986ರಿಂದ 1996ರವರೆಗೆ ಲಿಬಿಯಾ ಇಂಗ್ಲೀಷ್ ಭಾಷೆಯ ಮುಖವನ್ನೇ ಕಾಣಲಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಏನೇ ಆಗಲಿ 1996 ರಿಂದಾಚೆ ಇಂಗ್ಲೀಷ್ ಭಾಷೆಯನ್ನು ಕಲಿಯಲಿಕ್ಕೆ ಏನೆಲ್ಲ ಸೌಕರ್ಯಗಳು ಬೇಕೋ ಅವನ್ನೆಲ್ಲಾ ಗಡಾಫಿ ಕಲ್ಪಿಸಿಕೊಟ್ಟ. ಪಕ್ಕದ ದೇಶಗಳಾದ ಗನಾ, ನೈಜೇರಿಯಾ, ಕೀನ್ಯಾ, ಈಜಿಪ್ಟ್ ಗಳಿಂದ ಇಂಗ್ಲೀಷ್ ಶಿಕ್ಷಕರನ್ನು ನೇಮಿಸಿಕೊಂಡು ಮತ್ತೆ ಇಂಗ್ಲೀಷ್ ಕಲಿಸತೊಡಗಿದ. ಇಲ್ಲಿಯ ಪ್ರೈಮರಿ, ಪ್ರಿಪರೇಟರಿ, ಹಾಗೂ ಸೆಕೆಂಡರಿ ಶಾಲೆಯ ಇಂಗ್ಲೀಷ್ ಪಠ್ಯಪುಸ್ತಕಗಳನ್ನು ರಚಿಸಲು ಇಂಗ್ಲೀಷ್‍ರ ಸಹಾಯ ಕೋರಿದ. ಆ ಕಾರಣಕ್ಕಾಗಿಯೇ ಇಲ್ಲಿಯ ಇಂಗ್ಲೀಷ್ ಪಠ್ಯಪುಸ್ತಕಗಳು ತುಂಬಾ ಉತ್ಕೃಷ್ಟ ಮಟ್ಟದಲ್ಲಿವೆ.

ದುರಂತವೆಂದರೆ ಅವನ್ನು ಸರಿಯಾಗಿ ಕಲಿಸಲು ಒಳ್ಳೆಯ ಶಿಕ್ಷಕರೇ ಇಲ್ಲ. ಈ ಮಧ್ಯ ಸಮೀಕ್ಷೆಯೊಂದನ್ನು ನಡೆಸಿ ಭಾರತೀಯರು ಕೂಡಾ ಇಂಗ್ಲೀಷಿನಲ್ಲಿ ಬ್ರಿಟಿಷ್‍ರಿಗಿಂತ ಏನೂ ಕಮ್ಮಿಯಿಲ್ಲ ಎಂಬ ಸತ್ಯವನ್ನು ಕಂಡುಕೊಂಡನು. ಆ ಪ್ರಕಾರ 2000 ದಿಂದಾಚೆ ಲಿಬಿಯಾದ ಕಾಲೇಜುಗಳಲ್ಲಿ ಭಾರತೀಯ ಇಂಗ್ಲೀಷ್ ಉಪನ್ಯಾಸಕರನ್ನು ನೇಮಿಸಿಕೊಂಡು ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತನ್ನು ಕೊಟ್ಟನು.

ಅದೆಲ್ಲಾ ಇರಲಿ. ಇಷ್ಟೆಲ್ಲಾ ಹೇಳುತ್ತಿದ್ದ ಗಡಾಫಿ ಇಂಗ್ಲೀಷ್ ಭಾಷೆಯನ್ನು ಕಲಿತಿದ್ದನೆ? ಅವನಿಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುತ್ತಿತ್ತೆ? ಎಂದು ಕೇಳಿದರೆ ಉತ್ತರ ಹೌದು ಎಂದು ಬರುತ್ತದೆ. ಗಡಾಫಿ ಇಂಗ್ಲೀಷ್ ಕಲಿತಿದ್ದು ತನ್ನ ಸೆಕೆಂಡರಿ ಶಾಲೆಯಲ್ಲಿ ಮತ್ತು ಬಿ.ಎ. ಓದುತ್ತಿರಬೇಕಾದರೆ ಮಾತ್ರ. ಮುಂದೆ ಆತ ತನ್ನ ಓದನ್ನು ಅರ್ಧದಲ್ಲಿ ಮೊಟಕುಗೊಳಿಸಿ ಲಿಬಿಯಾದ ಗದ್ದುಗೆಯನ್ನೆರಿದ್ದರಿಂದ ತನ್ನ ಶಿಕ್ಷಣಕ್ಕೆ ತಿಲಾಂಜಲಿಯನ್ನು ಇಡಬೇಕಾಯಿತು. ಹೀಗಾಗಿ ಆತ ಇಂಗ್ಲೀಷ್ ಕಲಿತಿದ್ದೇನಿದ್ದರೂ ಅಲ್ಪ ಸ್ವಲ್ಪ ಮಾತ್ರ. ಹಾಗಾದರೆ ಅವನಿಗೆ ಇಂಗ್ಲೀಷ್‍ನಲ್ಲಿ ಮಾತನಾಡಲು ಬರುತ್ತಿತ್ತೆ? ಖಂಡಿತ ಬರುತ್ತಿತ್ತು. ಗಡಾಫಿ ಇಂಗ್ಲೀಷನ್ನು ನಿಧಾನವಾಗಿ ಎಲ್ಲರಿಗೂ ಅರ್ಥವಾಗುವಂತೆ ಚನ್ನಾಗಿಯೇ ಮಾತನಾಡುತ್ತಿದ್ದ. ತೀರಾ ಅನಿವಾರ್ಯವಿದ್ದರೆ ಮಾತ್ರ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದ. ಇಲ್ಲವಾದರೆ ತನ್ನ ಮಾತೃಭಾಷೆಯಾದ ಅರೇಬಿಯಲ್ಲಿಯೇ ಮಾತನಾಡುತ್ತಿದ್ದ.

ಒಂದು ವೇಳೆ ಇಂಗ್ಲೀಷಿನಲ್ಲಿ ಮಾತನಾಡಲೇಬೇಕಾದ ಪ್ರಸಂಗ ಬಂದರೆ ತುಂಬಾ ತಯಾರಿಯನ್ನು ಮಾಡಿಕೊಂಡು ಮಾತನಾಡುತ್ತಿದ್ದ. ಗಡಾಫಿ ಇಂಗ್ಲೀಷ್ ಭಾಷೆಯ ಮೇಲೆ ನಿಷೇಧ ಹೇರುವ ಮುಂಚೆ ಆತ ಸಾಕಷ್ಟು ಚಾನೆಲ್‍ಗಳಿಗೆ ಇಂಗ್ಲೀಷಿನಲ್ಲಿಯೇ ಸಂದರ್ಶನ ಕೊಟ್ಟಿದ್ದಾನೆ. ಆದರೆ ನೀಷೇಧ ಹೇರಿದ ಬಳಿಕ ಇಂಗ್ಲೀಷ್ ಶತ್ರುಗಳ ಭಾಷೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಆತ ಇಂಗ್ಲೀಷಿನಲ್ಲಿ ಮಾತನಾಡುವದನ್ನೇ ನಿಲ್ಲಿಸಿದ್ದ.  ಒಂದು ವೇಳೆ ಇಂಗ್ಲೀಷ್ ಚಾನಲ್‍ಗಳಿಗೆ ಸಂದರ್ಶನ ಕೊಡಬೇಕಾದಾಗ ಅಥವಾ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡುವಾಗ ಅವನ ಪಕ್ಕದಲ್ಲಿ ಸದಾ ಅರೇಬಿಕ್ ಮತ್ತು ಇಂಗ್ಲೀಷ್ ಭಾಷೆಗಳೆರೆಡನ್ನೂ ಬಲ್ಲ ಒಬ್ಬ ನುರಿತ ಅನುವಾದಕನಿರುತ್ತಿದ್ದ. ಇಂಗ್ಲೀಷಿನಲ್ಲಿ ಮಾತನಾಡಿದ್ದನ್ನು ಆತ ಅರೇಬಿಕ್ ಭಾಷೆಗೆ ಅನುವಾದಿಸಿ ಗಡಾಫಿಗೆ ಹೇಳುತ್ತಿದ್ದ ಹಾಗೂ ಗಡಾಫಿ ಹೇಳಿದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಇತರರಿಗೆ ರವಾನಿಸುತ್ತಿದ್ದ.

ಒಮ್ಮೆ ಅಂದರೆ 1999 ರಲ್ಲಿ ಸುಪ್ರಸಿದ್ಧ ಸಂದರ್ಶಕಿ ಡ್ಯಾಫ್ನಿ ಗಡಾಫಿಯನ್ನು B.B.C. ಚಾನಲ್‍ಗೆ ಸಂದರ್ಶಿಸುತ್ತಾ ಹೀಗೆ ಕೇಳಿದ್ದಳು. “So… when are you going to quit and leave the stage for someone else?”  ಈ ಪ್ರಶ್ನೆಗೆ ಗಡಾಫಿಯ ಅನುವಾದಕ ಭಯಕ್ಕೋ, ಮುಜುಗರಕ್ಕೋ, ಅಥವಾ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದ್ದಕ್ಕೋ ಸುಮ್ಮನೆ ಕುಳಿತಿದ್ದ. ಡ್ಯಾಫ್ನಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಳು. ಅನುವಾದಕ ಆಗಲೂ ಸುಮ್ಮನಿದ್ದ. ಆಗ ಡ್ಯಾಫ್ನಿ ಈ ಪ್ರಶ್ನೆಯನ್ನು ಅರೇಬಿಕ್‍ನಲ್ಲಿ ಕೇಳೋಣ ಎಂದುಕೊಳ್ಳುತ್ತಿರುವಾಗಲೇ ತಕ್ಷಣ ಗಡಾಫಿ ಯಾವುದೇ ಅನುವಾದದ ಸಹಾಯವಿಲ್ಲದೆ ಹೀಗೆ ಹೇಳಿದ್ದ; “It is not about me quitting, after all – I am the head of a revolution…”

ಹೀಗಿದ್ದೂ ಗಡಾಫಿ ಸಪ್ಟಂಬರ್ 23, 2009 ರಂದು ವಿಶ್ವಸಂಸ್ಥೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಆತ ಹೆಚ್ಚಾಗಿ ಬಳಸಿದ್ದು ಅರೇಬಿ ಭಾಷೆಯನ್ನೇ! ಆದರೆ ಆತ ಸಾಕಷ್ಟು ತಯಾರಿ ಮಾಡಿಕೊಂಡು ತಾನು ಹೇಳಬೇಕಾದ್ದೆಲ್ಲವನ್ನೂ ಸುಮಾರು 90 ನಿಮಿಷಗಳ (ಅಂದರೆ ಕೊಟ್ಟ ಅವಧಿಗಿಂತ 15 ನಿಮಿಷ ಹೆಚ್ಚಿಗೆ ತೆಗೆದುಕೊಂಡು) ಕಾಲ ಹೇಳಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದ. ಇದು ಆತ ವಿಶ್ವಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಮಾಡಿದ ಭಾಷಣವಾಗಿತ್ತು ಮತ್ತು ಅವನ ಭಾಷಣ ಭಾರಿ ಸಂಚಲನವನ್ನುಂಟುಮಾಡಿತ್ತು. ಆದರೆ ಅಲ್ಲಿ ಅಮೆರಿಕಾವೂ ಸೇರಿದಂತೆ ಇತರೆ ಇಂಗ್ಲೀಷ್ ದೇಶಗಳ ನಾಯಕರುಗಳು ಆತನನ್ನು ಕೀಳಾಗಿ  ಕಂಡರು. ಆತನ ಭಾಷಣಕ್ಕೆ ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ಗೋರ್ಡನ್ ಬ್ರೌನ್ ಸೇರಿದಂತೆ ಬೇರೆ ದೇಶದ ಗಣ್ಯವ್ಯಕ್ತಿಗಳ್ಯಾರೂ ಹಾಜರಾಗಲೇ ಇಲ್ಲ. ಅಷ್ಟೇ ಏಕೆ US ಸೆಕ್ರೇಟರಿಯಾಗಿದ್ದ ಹಿಲೇರಿ ಕ್ಲಿಂಟನ್ ಮತ್ತು ಅಮೇರಿಕಾದ ರಾಯಭಾರಿಗಳು ಸಹ ಅವನು ಭಾಷಣ ಆರಂಭಿಸುವ ಮೊದಲೇ ಅಲ್ಲಿಂದ ಎದ್ದು ಹೋದರು.

ಆದರೂ ಗಡಾಫಿ ಪಟ್ಟು ಬಿಡದೆ ತಾನು ಹೇಳಬೇಕಾದ್ದನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತಾ ಹೋದ. ಮೊದಲಿಗೆ ಮನೆಗೆ ಬಂದ ಅತಿಥಿಗಳನ್ನು ಹೇಗೆ ಸತ್ಕರಿಸಬೇಕು ಎನ್ನುವದನ್ನು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ನೋಡಿ ಕಲಿಯಿರಿ ಎಂದು ಸೂಚ್ಯವಾಗಿ ಅಮೆರಿಕಾಕ್ಕೆ ಹೇಳುತ್ತಾ ವಿಶ್ವಸಂಸ್ಥೆ ತನ್ನ ಕಲಮು 2 ರ ಪ್ರಕಾರ ತನ್ನ ಎಲ್ಲ ಸದಸ್ಯರನ್ನು ಸಮನಾಗಿ ಕಾಣಬೇಕು. ಆದರೆ ವಾಸ್ತವದಲ್ಲಿ ಇದು ರೂಢಿಯಾಗೇ ಇಲ್ಲ ಎಂದು ಹೇಳುವದರ ಮೂಲಕ ತನಗಾದ ತಾರತಮ್ಯವನ್ನು ಎತ್ತಿ ತೋರಿಸಿದ್ದನಲ್ಲದೇ ಆ ಕಲುಮುಗಳ ಪುಸ್ತಕವನ್ನು ಅವರೆಲ್ಲರ ಸಮ್ಮುಖದಲ್ಲಿಯೇ ಬೀಸಾಡಿದ್ದ. ಮುಂದುವರಿಯುತ್ತಾ ವಿಶ್ವಸಂಸ್ಥೆ ಹುಟ್ಟಿರುವದೇ ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧಗಳಾಗದಂತೆ ನೋಡಿಕೊಳ್ಳುವದಕ್ಕೆ, ಅಂದರೆ ವಿಶ್ವಶಾಂತಿ ಕಾಪಾಡುವದಕ್ಕೆ. ಆದರೆ ಅದು ಹುಟ್ಟಿದಾಗಿನಿಂದ ಅಂದರೆ 1945ರಿಂದ ಜಗತ್ತಿನ ನಾನಾ ಕಡೆ 65 ಯುದ್ಧಗಳು ನಡೆದಿವೆ. ಅವನ್ನು ತಡೆಗಟ್ಟುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ಹೀಗಿದ್ದ ಮೇಲೆ ವಿಶ್ವಸಂಸ್ಥೆ ಯಾಕಿರಬೇಕು ಎಂದು ಕಿಡಿಕಾರಿದ್ದ.

ಮತ್ತೆ ಮುಂದುವರಿದು ಬೇರೆ ರಾಷ್ಟ್ರಗಳ ವಿಷಯದಲ್ಲಿ ಅಮೆರಿಕಾ ಮೂಗು ತೂರಿಸುವದನ್ನು ಮೊದಲು ನಿಲ್ಲಿಸಲಿ ಎಂದು ಹೇಳುತ್ತಾ  ಇರಾಕ್ ಯುದ್ಧವನ್ನು ಅಮೆರಿಕಾದ “ಕೇಡಿನ ಪರಮಾವಧಿ” ಎಂದು ಕಟುಕಿದ್ದ. ಪ್ಯಾಲೈಸ್ತೀನಾದ ಬಿಕ್ಕಟ್ಟಿನ ಕುರಿತಂತೆ ಪ್ಯಾಲೈಸ್ತೀನಿಯನ್ನರು ಮತ್ತು ಇಸ್ರೇಲಿಯರು ಒಟ್ಟಿಗೆ ಒಂದೇ ದೇಶದಲ್ಲಿ ಸಹಬಾಳ್ವೆಯನ್ನು ನಡೆಸುವಂತಾಗಬೇಕು ಎಂದು ಕರೆಕೊಟ್ಟಿದ್ದ. ಆದರೆ ಅವನ ಭಾಷಣವನ್ನು ಕೇಳಿದವರೆಲ್ಲಾ ಅವನೇನು ಮಾತನಾಡಿದನೆಂದು ನಮಗೆ ಸರಿಯಾಗಿ ಅರ್ಥವಾಗಲೇ ಇಲ್ಲ. ಅಲ್ಲದೇ ಅವನ ಭಾಷಣ ಒಂದಕ್ಕೊಂದು ಸರಿಯಾದ ಜೋಡಣೆಯಿಲ್ಲದೆ ಅಸಂಬದ್ಧವಾಗಿತ್ತು ಎಂದು ಟೀಕಿಸುವದರ ಮೂಲಕ ಮತ್ತೆ ಅವನನ್ನು ಕಡೆಗಣಿಸಿದ್ದರು. ದುರಂತವೆಂದರೆ ಇದೇ ಭಾಷಣ ವಿಶ್ವಸಂಸ್ಥೆಯಲ್ಲಿ ಮಾಡಿದ ಅವನ ಕಟ್ಟಕಡೆಯ ಭಾಷಣವಾಯಿತು.

ಸುದ್ದಿ ಓದಿ