ಬಳ್ಳಾರಿ

ರಂಗಕಲೆ ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ: ಬಸವರಾಜ

ರಂಗಕಲೆ ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ: ಬಸವರಾಜ


ಲೋಕದರ್ಶನ ವರದಿ 

ಬಳ್ಳಾರಿ 23: ನೃತ್ಯ, ಸಂಗೀತ, ಚಿತ್ರಕಲೆ, ಆಟೋಟದಂತಹ ಹಲವಾರು ಕಲಾ ಪ್ರಕಾರಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗಿದ್ದರೂ 'ರಂಗಕಲೆ' ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯವಶ್ಯವಾಗಿದೆ ಎಂದು ನಗರದ ಪಂಡಿತ ತಾರಾನಾಥ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿರುವ ಎನ್‌. ಬಸವರಾಜ ಅವರು ತಿಳಿಸಿದರು. 

 

ಅವರು ರಂಗತೋರಣ ಸಂಸ್ಥೆಯ 'ಚಂದಮಾಮ' ಮಕ್ಕಳಶಿಬಿರದ ಮಕ್ಕಳ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳು ಇತ್ತೀಚೆಗೆ ಅತಿಯಾದ ಮೊಬೈಲ್ ಬಳಕೆಯಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮೊಬೈಲ್ ನೋಡಬೇಡ, ಟಿ.ವಿ ನೋಡಬೇಡ ಎಂದು ಸುಮ್ಮನೆ ಗದರಿಸಿದರೂ ಸಾಕು ಅಪಮಾನವಾಯಿತೆಂಬಂತೆ ಅವರ ನಡವಳಿಕೆ ಬದಲಾಗುತ್ತಿದ್ದು ಕೆಲವು ಸಲ ವಿಪರೀತಕ್ಕೆಡೆ ಮಾಡುತ್ತಿದೆ ಅಂತಹ ಮಕ್ಕಳ ಅತಿಯಾದ ಮೊಬೈಲ್ ಗೀಳು ಬಿಡಿಸಲು ಅವರನ್ನು ನಾಟಕ ಇತ್ಯಾದಿ ಕಲೆಗಳಲ್ಲಿ ತೊಡಗುವಂತೆ ತಂದೆ ತಾಯಿ ಪ್ರಯತ್ನಿಸಬೇಕೆಂದರು. 

 

ಅಧ್ಯಕ್ಷತೆ ವಹಿಸಿದ್ದ ಪಂಡಿತ ತಾರಾನಾಥ ವೈದ್ಯಕೀಯ ನಿವೃತ್ತ ಪ್ರಾಚಾರ್ಯರಾಗಿದ್ದು ಈಗ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿರುವ ಡಾ. ಜಿ. ಆರ್‌. ವಸ್ತ್ರದ ಅವರು ಕಿಕ್ಕಿರಿದು ತುಂಬಿದ ಬಯಲು ರಂಗಮಂದಿರ ಮಕ್ಕಳು ಮತ್ತವರ ಪೋಷಕರನ್ನು ಅಭಿನಂದಿಸಿ, ಮಕ್ಕಳನ್ನು ಒತ್ತಾಯ ಪೂರ್ವಕ ಹಾಗೂ ಉದ್ದೇಶ ಪೂರ್ವಕವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು ಮುಂಬರುವ ಶಿಕ್ಷಣ ನೀತಿಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಲಾಗಿದೆ ಎಂದರು. 

 

ವೇದಿಕೆಯಲ್ಲಿದ್ದ 'ಚಂದಮಾಮ' ಶಿಬಿರದ ನಿರ್ದೇಶಕ, ರಂಗ ಸಮಾಜದ ಸದಸ್ಯರೂ ಆಗಿರುವ ಜಿ. ಶಿವೇಶ್ವರಗೌಡ ವಿಭಿನ್ನ ಹಿನ್ನೆಲೆಯ, ಅತಿ ಚಟುವಟಿಕೆಯ ಮಕ್ಕಳನ್ನು ಸಂಭಾಳಿಸಿ ಅವರ ಪ್ರತಿಭೆಗೆ ಒಂದು ಜನಮನ್ನಣೆಯ ಆಕರ್ಷಣೆ ನೀಡುವುದು ಸವಾಲಿನ ಕೆಲಸ. ಇಲ್ಲಿ ಮಕ್ಕಳಿಗೆ ರಂಗಗೀತೆ, ಶಿಶುಗೀತೆ, ಕೋಲಾಟಗೀತೆ, ಜಾನಪದ ನೃತ್ಯ, ಮೂಕಾಭಿನಯ, ಮುಖವಾಡ ತಯಾರಿಕೆ, ಚಿತ್ರಕಲೆ ಜೊತೆಗೆ ಮಕ್ಕಳ ಮನರಂಜನೆಯ ಕಿರುನಾಟಕ 'ನರಿಯ ಜಾಣ್ಮೆ' ತರಬೇತಿ ನೀಡಲಾಗಿದೆ. ನಾಟಕದ ಎಲ್ಲ ರಂಗ ಪರಿಕರಗಳನ್ನು ಮಕ್ಕಳೇ ತಯಾರಿಸಿದ್ದಾರೆ ಮಕ್ಕಳ ಈ ಪ್ರತಿಭಾ ಪ್ರದರ್ಶನಕ್ಕೆ ಅನುಕೂಲ ಮಾಡಿದ ರಂಗತೋರಣ ಸಂಸ್ಥೆ ಹಾಗೂ ಇತರ ಸಂಪನ್ಮೂಲ ವ್ಯಕ್ತಿಗಳಿಗೂ ವಂದನೆ ತಿಳಿಸಿದರು. ಅಡವಿಸ್ವಾಮಿ ನಿರೂಪಿಸಿ ವಂದಿಸಿದರು. 

 ಮೇ 21, 2022 ರಂದು ಬಳ್ಳಾರಿ ರಾಜಕುಮಾರ ರಸ್ತೆಯ ಗಾನಕೋಕಿಲೆ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ರಂಗತೋರಣ ಆಯೋಜಿಸಿದ 'ಚಂದಮಾಮ' ಶಿಬಿರದ ಮಕ್ಕಳು ಕಿರುನಾಟಕ, ಮೂಕಾಭಿನಯ ಹಾಗೂ ಗೀತೆ-ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ತಮ್ಮ ಮಕ್ಕಳ ಕಲೆಯನ್ನು ಕಂಡು ತುಂಬಿದ ರಂಗಮಂದಿರದಲ್ಲಿ ಪೋಷಕರು ಹರ್ಷ ವ್ಯಕ್ತ ಮಡಿಸಿದರು. 


ಸುದ್ದಿ ಓದಿ