ಸಮಾಜವಾದಿ ಕ್ರಾಂತಿಗೆ ಕಾರ್ಮಿಕವರ್ಗ ಮುಂದೆ ಬರಬೇಕಿದೆ: ದಿವಾಕರ್
ಬಳ್ಳಾರಿ 26: ಬಂಡವಾಳಿಗರ ಶೋಷಣೆಯನ್ನು ಕೊನೆಗಾಣಿಸಲು ಸಮಾಜವಾದಿ ಕ್ರಾಂತಿ ನೆರವೇರಿಸಲು ಕಾರ್ಮಿಕವರ್ಗ ಮುಂದೆ ಬರಬೇಕಾಗಿದೆ ಎಂದು ಎಸ್ಯುಸಿಐ(ಸಿ) ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಕಾ. ಹೆಚ್.ವಿ. ದಿವಾಕರ್ರವರು ಕರೆ ನೀಡಿದರು.
ಅವರು ನಿನ್ನೆ ಸಂಜೆ ಎಸ್ ಯುಸಿಐ (ಸಿ) ಪಕ್ಷದ 73ನೇ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಸದಸ್ಯರು, ಬೆಂಬಲಿಗರು ಹಾಗೂ ಹಿತೈಷಿಗಳ ಆನ್ಲೈನ್ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ, ಮಾತನಾಡಿದ ಅವರು ಇಂದು ದೇಶವನ್ನು ಹಿಂದೆಂದೂ ಕಾಣದಷ್ಟು ಕರಾಳ ಛಾಯೆಯು ಆವರಿಸಿದೆ. ಈಗ ಕೋವಿಡ್ ಬಂದು ಅವರನ್ನು ಇನ್ನಷ್ಟು ನರಕಕ್ಕೆ ತಳ್ಳಿದಂತಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ಮೊದಲನೇ ಅಲೆಯ ನಂತರ ತಜ್ಞರ ಎಚ್ಚರಿಕೆ ನಡುವೆಯೂ ಎರಡನೇ ಅಲೆ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ನಿರ್ಲಕ್ಷ ವಹಿಸಿದೆ. ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಗದೇ ರೋಗಿಗಳು ಬೀದಿಯಲ್ಲಿ ನರಳಾಡಿ ಸಾಯುತ್ತಿರುವುದು ಹೃದಯವಿದ್ರಾವಕವಾಗಿದೆ..ಕನಿಷ್ಠ ವೈದ್ಯಕೀಯ ಸೌಲಭ್ಯ ಒದಗಿಸದ ಇಂತಹ ಸರ್ಕಾರಗಳ ವಿರುದ್ಧ ಜನರು ಧ್ವನಿ ಎತ್ತಬೇಕಾಗಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಕಾಂಗ್ರೆಸ್ ಪಕ್ಷವೆ ಮೊದಲಿಗೆ ಜಾರಿಗೆ ತಂದಿದೆ. ಕಾಂಗ್ರೆಸ್ ಗಿಂತ ತಾವು ತುಂಬಾ ಭಿನ್ನ ಎಂದು ಹೇಳಿ, ದೇಶಭಕ್ತಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ಬಂಡವಾಳಿಗರ ಸೇವೆಯನ್ನು ಇನ್ನೂ ಅತ್ಯಂತ ನಿಷ್ಠೆಯಿಂದ ಮಾಡುತ್ತಿದೆ. ಅವೇ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೆ ತರುತ್ತಿದೆ. ಆದ್ದರಿಂದ ಚುನಾವಣೆ ಪರಿಹಾರ ಅಲ್ಲ, ಒಂದು ಪಕ್ಷ ಹೋಗಿ ಮತ್ತೊಂದು ಬಂಡವಾಳಶಾಹಿ ಪಕ್ಷ ಅಧಿಕಾರಕ್ಕೆ ಬಂದರೆ ಶೋಷಣೆ ನಿಲ್ಲುವುದಿಲ್ಲ ಎನ್ನುವುದನ್ನು ಅರಿತು ಶೋಷಿತ ಕಾರ್ಮಿಕ ವರ್ಗ ಹಾಗೂ ರೈತರು ಒಂದುಗೂಡಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಡಾ. ಚಂದ್ರ ಗೀರೀಶ್ ಅವರು ವಹಿಸಿದ್ದರು. ಅವರು ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ 21ವರ್ಷದ ಯುವಕರಾದ ಶಿವದಾಸ್ ಘೋಷ್ ಅವರು ಕೆಲವರು ಸಂಗಾತಿಗಳೊಂದಿಗೆ ಸೇರಿ ಆ ವೇದನಾದಾಯಕ ಹೋರಾಟ ನಡೆಸಿದರು. ಹಣ ಇಲ್ಲ, ಕಚೇರಿ ಇಲ್ಲ, ಮಲಗಲು ಒಂದು ಚಾಪೆ ಇರದಂತಹ, ಅಕ್ಕಿ ಗಂಜಿ ಕುಡಿದು ದಿನಗಟ್ಟಲೇ ಉಪವಾಸವಿದ್ದು ಪಕ್ಷ ಕಟ್ಟಿದರು. ನಾವು ಇಂದು ಅವರು ಪಟ್ಟ ಕಷ್ಟವನ್ನು ಅರಿತು, ಶೋಷಿತ ಜನರ ವಿಮೋಚನೆಗೆ ಹೋರಾಟ ನಡೆಸಬೇಕು. ಅವರ ಚಿಂತನೆಗಳನ್ನು ಸಾಕ್ಷಾತ್ಕಾರ ಮಾಡಿಕೊಂಡು ಬಂಡವಾಳಶಾಹಿ ಕುಸಂಸ್ಕೃತಿಗಳ ವಿರುದ್ಧ ಹೋರಾಡಬೇಕು ಎಂದರು.
ಸಭೆಯ ಮೊದಲಿಗೆ ಕಾ. ಎಚ್ ವಿ ದಿವಾಕರ್ ಅವರು ಕಾಮ್ರೇಡ್ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿದರು. ಕಾಮ್ರೇಡ್ ಶಿವದಾಸ್ ಘೋಷ್ ಅವರ ಕುರಿತ ಗೀತೆಯಾದ ''ಸರ್ವಹರ' ಹಾಗೂ ಕೊನೆಯಲ್ಲಿ ಕಾರ್ಮಿಕ ವರ್ಗದ ಅಂತರಾಷ್ಟ್ರೀಯ ಗೀತೆಯನ್ನು ಎನ್.ಎಸ್. ವೀರೇಶ್ ಹಾಡಿದರು. ಸಭೆಯಲ್ಲಿ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಶರಣಪ್ಪ ಉದ್ಬಾಳ್, ಮಹೇಶ್ ಚೀಕಲಪರ್ವಿ, ರಾಮಣ್ಣ ಎಂ, ಚನ್ನಬಸವ ಜಾನೇಕಲ್ ಹಾಗೂ ಪಕ್ಷದ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು.