ಅನೀಮಿಯಾ ಮುಕ್ತ ಭಾರತಕ್ಕೆ ಕೈಜೋಡಿಸಿದ ಐ.ಆರ್.ಡಿ. ಮತ್ತು ಸ್ಪಂದನ ಸಂಸ್ಥೆಗಳ ಕಾರ್ಯ ಶ್ಲಾಘನೀಯ
ಲೋಕದರ್ಶನ ವರದಿ
ವಿಜಯಪುರ 23: ಅನೀಮಿಯಾ ಮುಕ್ತ ಭಾರತ ಹಾಗೂ ಅನೀಮಿಯಾ ಮುಕ್ತ ಕರ್ನಾಟಕ ಅಭಿಯಾನಕ್ಕೆ ಕೈಜೋಡಿಸಿ ರಾಜ್ಯಾದ್ಯಂತ ಜನಜಾಗೃತಿ, ತಪಾಸಣೆ ಹಾಗೂ ಉಚಿತ ಓಷಧಿ ವಿತರಣೆಯ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಐ.ಆರ್.ಡಿ.) ಮತ್ತು ಸ್ಪಂದನ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಆಸ್ಪತ್ರೆ ವಿಜಯಪುರದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು. ಮಂಗಳವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಐ.ಆರ್.ಡಿ ಮತ್ತು ಸ್ಪಂದನ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತೆರೆಯಲಾದ ಉಚಿತ ಅನೀಮಿಯಾ ಅರಿವು, ರಕ್ತಹೀನತೆ ತಪಾಸಣೆ ಹಾಗೂ ಓಷಧಿ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನೀಮಿಯಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಾಬು ಜಿ. ಸಜ್ಜನ ಹಾಗೂ ಸ್ಪಂದನ ಸಂಸ್ಥೆಯ ಅಧ್ಯಕ್ಷ ಮಹಾದೇವ ದೇವರ ಅವರ ನೇತೃತ್ವದಲ್ಲಿ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ 577 ಶಾಲಾ ಮಕ್ಕಳ ರಕ್ತಹೀನತೆ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಶೇ.38 ರಷ್ಟು ಮಕ್ಕಳು ಅನೀಮಿಯಾದಿಂದ ಬಳಲುತ್ತಿರುವುದು ಪತ್ತೆಯಾಗಿತ್ತು.