ಬಳ್ಳಾರಿ

ಮಹಿಳೆಯರ ಮತ್ತು ಮಕ್ಕಳ ಸ್ಥಿತಿ ಬದಲಾಗಬೇಕಿದೆ: ಶರ್ಮ

ಮಹಿಳೆಯರ ಮತ್ತು ಮಕ್ಕಳ ಸ್ಥಿತಿ ಬದಲಾಗಬೇಕಿದೆ: ಶರ್ಮ

ಲೋಕದರ್ಶನ ವರದಿ 

ಕಂಪ್ಲಿ 19: ಮಹಿಳೆಯರ ಮತ್ತು ಮಕ್ಕಳ ಸ್ಥಿತಿ ಬದಲಾಗಬೇಕಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಪೌಷ್ಠಿಕ ಆಹಾರ, ಆರೋಗ್ಯದೊಡನೆ ಬೆಳವಣಿಗೆಗೆ ಪೂರಕ ಸೇವೆಗಳನ್ನು ಒದಗಿಸುವಲ್ಲಿ ಗ್ರಾಮಾಡಳಿತ ಮುಂದಾಗಬೇಕು  ಮಕ್ಕಳ ಸ್ನೇಹಿ ಗ್ರಾಪಂ.ಗಳನ್ನಾಗಿ ರೂಪಿಸಲು ಅಧಿಕಾರಿಗಳು ಸಮನ್ವಯ ಸಾಧಿಸಬೇಕೆಂದು ಬೆಂಗಳೂರಿನ ಚೈಲ್ಡ್‌ ರೈಟ್ ಟ್ರಸ್ಟ್‌ ನಿರ್ದೇಶಕ ವಾಸುದೇವ ಶರ್ಮ ಹೇಳಿದರು.  


ತಾಲೂಕಿನ ದೇವಲಾಪುರ ಗ್ರಾಮದ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಜರುಗಿದ ಗ್ರಾಪಂ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ಮತ್ತು ಭಾಗಿದಾರರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳ ಸ್ನೇಹಿ ಆಡಳಿತ ರೂಪಿಸಲು ಸರ್ಕಾರ ಪರಿಕಲ್ಪನೆ ಹೊಂದಿದ್ದು, ಮಹಿಳೆಯರ ಮತ್ತು ಮಕ್ಕಳ ಸ್ಥಿತಿ ಬದಲಾಗಬೇಕಿದೆ.. ಗ್ರಾಪಂ ಆಡಳಿತ ಮಕ್ಕಳ ಪರ ನಿರ್ಧಾರ ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಲಹೆ ನೀಡಿದರು.  


ತಹಸೀಲ್ದಾರ್ ಗೌಸಿಯಾಬೇಗಂ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್‌.ಸಿರಾಘವೇಂದ್ರ, ತಾಪಂ ಇಒ ಮೊಹಮ್ಮದ್ ಖಿಜಸಿರ್ ಮಾತನಾಡಿ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕತೆಯನ್ನು ಸಂಪೂರ್ಣ ತೊಲಗಿಸುವಲ್ಲಿ ಭಾಗಿದಾರ ಅಧಿಕಾರಿಗಳು ಪಣ ತೊಡಬೇಕಿದೆ. ಮಕ್ಕಳ ಹಕ್ಕುಗಳ ರಕ್ಷಿಸಲು ಭಾಗಿದಾರ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮಕ್ಕೆ ಮುಂದಾಗಬೇಕು. ಗ್ರಾಪಂ.ಗಳಲ್ಲಿ ಪ್ರತ್ಯೇಕವಾಗಿ ಮಕ್ಕಳ ಬಜೆಟ್ ರೂಪಿಸಬೇಕೆಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ಚನ್ನದಾಸರ ಚನ್ನಮ್ಮ ಕಾರ್ಯಾಗಾರದ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷೆ ಪೂಜಾರಿ ಈರಮ್ಮ ಮತ್ತು ಸರ್ವ ಸದಸ್ಯರು, ಪಿಡಿಒ ಕೆ.ಎಚ್‌.ಶಶಿಕಾಂತ್, ರೀಡ್ಸ್‌ ಸಂಸ್ಥೆಯ ತಾಲೂಕು ನಿರ್ದೇಶಕ ಕೆ.ಎಂ.ತಿಪ್ಪೇಸ್ವಾಮಿ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ನಿರ್ದೇಶಕ ಮೌನೇಶ್, ವಿಎ ಆತೀಫ್, ಮಹಿಳಾ ಮೇಲ್ವಿಚಾರಕಿ ರೇಣುಕಾ, ಆರೋಗ್ಯ ಸಹಾಯಕಿ ಮಂಜುಳಾ, ಮಕ್ಕಳ ಪ್ರತಿನಿಧಿಗಳಾದ ನಂದಿನಿ, ಭರತ್, ಕುಡುತಿನಿಯ ಪೊಲೀಸ್ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಸೇರಿ ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿದ್ದರು. 


ಸುದ್ದಿ ಓದಿ