ರಾಜ್ಯ ಬಜೆಟ್ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ
ಬಳ್ಳಾರಿ 09: ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿದ 2021-22ರ ರಾಜ್ಯ ಬಜೆಟ್ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಎಸ್ಯುಸಿಐ (ಕಮ್ಯುನಿಸ್ಟ್) ಅಭಿಪ್ರಾಯಪಟ್ಟರು.
ಇಂಧನ, ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ತೀವ್ರವಾದ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಇದಕ್ಕೆ ಪರಿಹಾರವೆಂದರೆ ಹೊಸ ತೆರಿಗೆಗಳನ್ನು ಹಾಕದಿರುವುದು ಎಂಬಂತೆ ಚಿತ್ರಿಸಲಾಗಿದೆ. ತೆರಿಗೆ ಕಡಿತ, ಪಡಿತರ ವಿತರಣೆಯಲ್ಲಿ ಹೆಚ್ಚಳದ ಮೂಲಕ ಜನರಿಗೆ ನೀಡಬಹುದಾದ ಅಲ್ಪ ಕ್ರಮಗಳ ಬಗ್ಗೆಯೂ ಕಾಳಜಿ ವಹಿಸಿಲ್ಲ. ಬೆಲೆ ಏರಿಕೆಗೆ ತಕ್ಕಂತೆ ಜನರ ಆದಾಯ ಹೆಚ್ಚಿಸುವ ಕ್ರಮಗಳೂ ಇಲ್ಲ. ಕನಿಷ್ಠ ಕೂಲಿಯಲ್ಲಿ ಯಾವುದೇ ಹೆಚ್ಚಳವಿಲ್ಲ. ಮಹಿಳೆಯರ ಸಬಲೀಕರಣದ ಬಗ್ಗೆ ಉದ್ದುದ್ದ ಮಾತಗಳನ್ನಾಡಿ, ಲಕ್ಷಾಂತರ ಸಂಖ್ಯೆಯಲ್ಲಿರುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆಗಳನ್ನು ಕಡೆಗಣಿಸಿರುವುದು, ಈ ಘೋಷಣೆಯ ಪೊಳ್ಳುತನವನ್ನು ತೋರಿಸುತ್ತದೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಕ್ಷೇತ್ರಗಳಿಗೆ ಅವಶ್ಯಕತೆಗೆ ತಕ್ಕಂತೆ ಅನುದಾನ ನೀಡಿಲ್ಲ.
ಜಾತಿ ಓಲೈಕೆ ಮೂಲಕ ಓಟ್ ಬ್ಯಾಂಕ್ ರಾಜಕಾರಣಕ್ಕೆ ಪೂರಕವಾಗಿ ಮಠಗಳಿಗೆ, ಜಾತಿ ಮಂಡಳಿಗಳಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಇನ್ನೊಂದೆಡೆ ಸಾಲದ ಹೊರೆಯೂ ತೀವ್ರವಾಗಿ ಏರುತ್ತಿದೆ. ರೂ.2.43 ಲಕ್ಷ ಕೋಟಿ ಬಜೆಟ್ನಲ್ಲಿ ದಾಖಲೆಯ ರೂ.71,332 ಕೋಟಿ ಸಾಲವಿದ್ದು, ಇದರ ಬಡ್ಡಿಯೂ ಜನರೇ ಭರಿಸಬೇಕಾಗುತ್ತದೆ. ಇಷ್ಟಾಗಿಯೂ ಉದ್ಯೋಗ ಸೃಷ್ಟಿಗೆ ಸರಿಯಾದ ಯೋಜನೆಗಳಿಲ್ಲ, ನಿರುದ್ಯೋಗಿಗಳಿಗೆ ಭತ್ಯೆಯೂ ಇಲ್ಲ. ಸರ್ಕಾರದ ದುಂದುವೆಚ್ಚ ತಡೆಗೆ ಸೂಕ್ತ ಕ್ರಮಗಳೂ ಇಲ್ಲ.
ನೀಡಲಾದ ಅನುದಾನಗಳ ಸಮರ್ಪಕ ಬಳಕೆಯ ಬಗ್ಗೆ ಉತ್ತರದಾಯಿತ್ವವೂ ಇಲ್ಲದಿರವುದರಿಂದ, ಜನರ ಆಶೋತ್ತರಗಳ ಪ್ರತಿಬಿಂಬವಾಗುವ ಬದಲು ಬಜೆಟ್ ಎಂಬುದೇ ಒಂದು ರಾಜಕೀಯ ಗಿಮಿಕ್ ಆಗುತ್ತಿರುವುದು ದುರಂತ. ಈ ಜನ ವಿರೋಧಿ ರಾಜ್ಯ ಬಜೆಟ್ನ್ನು ನಮ್ಮ ಪಕ್ಷ ಎಸ್.ಯು.ಸಿ.ಐ (ಕಮ್ಯುನಿಸ್ಟ್) ತೀವ್ರವಾಗಿ ಖಂಡಿಸುತ್ತಾ, ಇದರ ವಿರುದ್ಧ ಹೋರಾಡಲು ಮುಂದೆ ಬರಬೇಕೆಂದು, ಜನತೆಗೆ ಕರೆ ನೀಡುತ್ತೇವೆ.