ಬಳ್ಳಾರಿ

ಭವ್ಯ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯ: ನ್ಯಾ. ದೊಡ್ಡಮನಿ

ಭವ್ಯ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯ: ನ್ಯಾ. ದೊಡ್ಡಮನಿ

ಬಳ್ಳಾರಿ 22: ಭವ್ಯ ಭಾರತದ ನಿರ್ಮಾಣಕ್ಕೆ ಇಂದಿನ ಯುವಕರ ಪಾತ್ರ ತುಂಬಾ ಮುಖ್ಯ. ನಿಮ್ಮ ಜೀವನದಲ್ಲಿ ಒಳ್ಳೆಯ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಿ ಎಂದು 1ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ದೊಡ್ಡಮನಿ ಅವರು ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ವಾರ್ಡ್ಲಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಜನರಲ್ಲಿ ಕಾನೂನಿನ ಕುರಿತು ಅರಿವು ಮೂಡಿಸುವುದು, ಬಡವರು ಹಾಗೂ ಹಿಂದುಳಿದವರಿಗೆ ಉಚಿತ ಕಾನೂನು ಸೇವೆ ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವಾಹ, ಕ್ಷಾಮಕ್ಕೆ ಒಳಗಾದ ಮತ್ತು 3 ಲಕ್ಷದೊಳಗೆ ವಾರ್ಷಿಕ ಆದಾಯ ಹೊಂದಿದವರಿಗೆ ಕೆಳಹಂತದ ನ್ಯಾಯಾಲಯದಿಂದ ಸುಪ್ರೀ ಕೋರ್ಟ್‌ ನವರೆಗೆ ಉಚಿತವಾಗಿ ಕಾನೂನು ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು. 

ಕಾನೂನು ಕಬ್ಬಿಣದ ಕಡಲಲ್ಲ; ಕಲ್ಲು ಸಕ್ಕರೆಯಂತೆ. ಅರ್ಥೈಸಿಕೊಂಡಷ್ಟು ಸುಲಭ, ಸವಿದಷ್ಟು ಸಿಹಿಯನ್ನು ನೀಡುತ್ತದೆ. ನಿಮ್ಮ ಹಕ್ಕುಗಳಿಗೆ ಪ್ರಾಮುಖ್ಯತೆ ಕೊಟ್ಟು, ಪ್ರಾಮಾಣಿಕತೆ, ನಿಷ್ಠೆ ಹಾಗೂ ದಕ್ಷತೆಯಿಂದ ಕರ್ತವ್ಯಗಳನ್ನು ಪಾಲಿಸಿದರೆ; ಹಲವು ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕು ಸಾಗಿಸಬಹುದು ಎಂದರು. 

ನ.14ರವರೆಗೆ ಕಾರ್ಯಕ್ರಮ: ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸಾರ್ವಜನಿಕರಿಗೆ ಕಾನೂನುಗಳ ಕುರಿತು ಅರಿವು ಮೂಡಿಸಿಲು ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅ.2ರಿಂದ ಶುರುವಾಗಿದ್ದು, ನ.14ರವರೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಹೇಳಿದರು. 

ಪಾಶ್ಚಿಮಾತ್ಯರ ಸಂಸ್ಕೃತಿಗೆ ಹೆಚ್ಚಿನ ಆಸಕ್ತಿ: ಭಾರತೀಯ ಸಂಸ್ಕೃತಿಯನ್ನು ಇಡೀ ವಿಶ್ವವೇ ತಿರುಗಿ ನೋಡುತ್ತಿತ್ತು. ಆದರೆ ಇಂದಿನ ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೆಚ್ಚಿನ ಆಸಕ್ತಿ ತೋರಿಸಿ, ಭಾರತೀಯ ಸಂಸ್ಕೃತಿಯನ್ನು ಕಡೆಗಣಿಸುತ್ತಿದ್ದಾರೆ. ವೇಷಭೂಷಣ, ಆಚಾರ ವಿಚಾರ ಸೇರಿದಂತೆ ಹಲವಾರು ವಿಷಯಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿರುವುದು ನಮ್ಮ ದೇಶದ ಸಂಸ್ಕೃತಿಗೆ ಮಾರಕವಾಗಿದೆ. ನಮ್ಮ ಸಂಸ್ಕೃತಿಯು ಅವನತಿಯತ್ತ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಮೋಟಾರು ವಾಹನ ಕಾಯ್ದೆ, ಜನನ ಮತ್ತು ಮರಣ ಪ್ರಮಾಣ ನೊಂದಣಿ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ನಿಮ್ಮ ಪೋಷಕರು ನಾನಾ ಕಷ್ಟಗಳನ್ನು ಅನುಭವಿಸುತ್ತಾ ನಿಮಗೆ ಒಳ್ಳೆಯ ಭವಿಷ್ಯ ನೀಡುತ್ತಿದ್ದಾರೆ. ಅವರ ಕನಸುಗಳನ್ನು ಈಡೇರಿಸುವ ಕೆಲಸ ಮಾಡಿ, ಒಳ್ಳೆಯ ಗುರಿ ಸಾಧನೆಗಾಗಿ ಬದುಕು ಮೀಸಲಿಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ವಕೀಲರಾದ ಗಾದಿಲಿಂಗ ಅವರು ಮಾತಾನಾಡಿ, ಪ್ರತಿಯೊಬ್ಬರಿಗೆ ಕಾನೂನು ಕುರಿತು ಅರಿವು ತುಂಬಾ ಮುಖ್ಯ. ಕಾನೂನು ಯಾರಿಗೂ ತೊಡಕಲ್ಲ ಬದಲಾಗಿ ನಿಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಕಾನೂನು ಅವಶ್ಯಕ. ಯುವಕರು ಮೊಬೈಲ್‌ನ ದಾಸರಾಗಬೇಡಿ. ಅತಿಯಾದ ಮೊಬೈಲ್ ಬಳಕೆ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತದೆ; ಹಿತಕ್ಕಾಗಿ ಮೊಬೈಲ್ ಬಳಸಿ ಎಂದರು. 

ಬಳ್ಳಾರಿ ನಗರ ಉಪ ವಿಭಾಗದ ಡಿವೈಎಸ್ಪಿ ರಮೇಶ್ ಕುಮಾರ್ ಅವರು ಮಾತನಾಡಿ ಜ್ಞಾನಾಭಿವೃದ್ಧಿಗೆ ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ, ಕಲಿಕೆ ನಿರಂತರ. ಅಪರಾಧಗಳು ನಡೆದಿದ್ದು ನಿಮ್ಮ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಇದರಿಂದ ಅಪರಾಧ ಕೃತ್ಯಗಳನ್ನು ತಡೆಯುವುದು ಸುಲಭವಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ವಾರ್ಡ್ಲಾ ಕಾಲೇಜಿನ ಪ್ರಾಂಶುಪಾಲರಾದ ವಿಕ್ಟರಿ ಇಮ್ಯಾನುವೆಲ್, ಬ್ರೂಸ್‌ಪೇಟೆ ಸಿಪಿಐ ನಾಗರಾಜ ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ