ರಾಷ್ಟ್ರೀಯ ಪ್ರಜ್ಞೆ ಬೆಳೆಸುವಲ್ಲಿ ಜನಪದ ಸಾಹಿತ್ಯದ ಪಾತ್ರ ಮುಖ್ಯ: ಬಂಡೆ
ಇಂಡಿ20: ಜಾನಪದ ಅಧ್ಯಯನವು ರಾಷ್ಟ್ರೀಯ ಪ್ರಜ್ಞೆ, ದೇಶಾಭಿಮಾನ, ನಾಡು-ನುಡಿ, ನೆಲ, ಜಲ, ಸಂಸ್ಕೃತಿಪ್ರಿಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಭೂತಕಾಲದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ವರ್ತಮಾನದ ತಲ್ಲಣಗಳನ್ನು ಅಭಿವ್ಯಕ್ತಿಸುವುದು ಅದರ ಮೂಲ ಚಿಂತನೆಯ ನೆಲೆಯಾಗಿದೆ ಎಂದು ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ರವಿವಾರ ಸಂಜೆ ತಾಲೂಕಿನ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ವತಿಯಿಂದ "ಜಾನಪದ ಶೈಲಿಯ ತ್ರಿಪದಿ ರಚನೆ ಮತ್ತು ವಾಚನ ಗೋಷ್ಠಿ" ಎಂಬ ಆನ್ ಲೈನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪ್ರೇಮ, ತ್ಯಾಗ, ಮಾತ್ಸರ್ಯ, ಸಾಹಸ, ಛಲ, ದ್ವೇಷ, ಬಂಜೆತನ, ಹೆಣ್ಣಿನ ಪಾತಿವ್ರತ್ಯ, ಮನುಷ್ಯನ ಜಿಪುಣತನ, ಕಷ್ಟ ಕಾರ್ಪಣ್ಯ, ಸೋಲು, ನಿರಾಸೆ ಇತ್ಯಾದಿ ಮನುಷ್ಯನ ನಿತ್ಯ ಜೀವನದ ಸಮಸ್ತವನ್ನು ಜಾನಪದವುಅಭಿವ್ಯಕ್ತಗೊಳಿಸುತ್ತದೆ. ಜೀವನದ ಆದರ್ಶವನ್ನು ಉಳಿಸುವ, ನೈತಿಕ ಮೌಲ್ಯವನ್ನು ಎತ್ತಿ ಹಿಡಿಯುವ ಮೌಲ್ಯಾನುಸರಣೆಯ ಸಂದೇಶವನ್ನು ಸಾರುವ, ಆದರ್ಶ ಸಮಾಜವನ್ನು ಉಳಿಸಿ ಬೆಳೆಸುವ ಸಾಮರ್ಥ್ಯವು ಜಾನಪದ ಸಂಸ್ಕೃತಿಯಲ್ಲಿ ಅಡಕವಾಗಿದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಎ ಎಸ್ ಗಾಣಿಗೇರ ಮಾತನಾಡಿ,ನಿರಂತರವಾಗಿ ಚಲನಶೀಲತೆಯುಳ್ಳ ಸಂವಹನ ಮಾಧ್ಯಮವಾಗಿರುವ ಜನಪದ ಸಾಹಿತ್ಯವು ಭಾಷಾ ಸಾಹಿತ್ಯ ಚರಿತ್ರೆಯಲ್ಲೇ ಪ್ರಾಚೀನವಾದುದು. ವಾಚಿಕ ಜಾನಪದ, ಜಾನಪದದ ವಾಙ್ಮಯ ರೂಪ ಎಂದು ಗುರುತಿಸುವ ಜನಪದ ಸಾಹಿತ್ಯ ಜಾನಪದ ಕ್ಷೇತ್ರದ ಒಂದು ವಿಭಾಗ ಮಾತ್ರವಾಗಿದೆ.ಅದರ ಅಧ್ಯಯನ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕದಳಿ ವೇದಿಕೆಯ ಅಧ್ಯಕ್ಷರಾದ ಗಂಗಾ ಗಲಗಲಿ,ನಾಗರಿಕತೆಯ ಕೆಳಹಂತದ ಜನರ ಪಾಲಿಗೆ ಜಾನಪದವು ವಿಶ್ವಕೋಶವೇ ಆಗಿದೆ. ಎಲ್ಲಾ ವರ್ಗದ ಬಾಹ್ಯ ಮತ್ತು ಆಂತರಿಕ ಜೀವನವ್ಯಾಪಾರಗಳು, ನಂಬಿಕೆ ನಡವಳಿಕೆಗಳು, ಆಚಾರ ವಿಚಾರಗಳು ಜಾನಪದ ಪರಿಧಿಯಲ್ಲಿ ಸಮಾವೇಶಗೊಳ್ಳುತ್ತವೆ ಎಂದು ಹೇಳಿದರು.
ಜಾನಪದ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ರಮೇಶ ತೇಲಿ ಉದ್ಘಾಟಿಸಿ, ಜಾನಪದವು ಪ್ರಾಚೀನ ಮತ್ತು ನಾಗರಿಕ ಸಮಾಜಗಳೆರಡರಲ್ಲೂ ಇರುತ್ತದೆ. ನಾವು ಎಷ್ಟೇ ಮುಂದುವರಿದವರಾದರೂ ನಮ್ಮ ಪೂರ್ವೀಕರ ಪ್ರಾಚೀನ ಜನತೆಯ ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಕಡೆಣಿಸಲಾಗದು. ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋಗಿರುವ ಅಮೂಲ್ಯವಾದ ಜಾನಪದ ಸಂಪತ್ತು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ ಎಂದು ಹೇಳಿದರು.
ತಾಲೂಕಾ ಅಧ್ಯಕ್ಷ ರೇಣುಕಾ ಸಂಖ ಪ್ರಾಸ್ತಾವಿಕವಾಗಿ ಮಾತನಾಡಿ,ನಿತ್ಯ ನಿರಂತರ ಕೆಲಸದ ಶ್ರಮದ ತೀವ್ರತೆಯನ್ನು ಕುಗ್ಗಿಸಿ, ಬದುಕಿನ ಏಕತಾನತೆಯನ್ನು ಹೋಗಲಾಡಿಸಿ ಮನಸ್ಸನ್ನು ಮುದಗೊಳಿಸುತ್ತದೆ. ಮಲ್ಲಿಗೆಯಂತೆ ಮನವನ್ನು ಅರಳಿಸಿ ಶ್ರೀಗಂಧದಂತೆ ಸುವಾಸನೆಯನ್ನು ಪಸರಿಸುವಂತೆ ಮಾಡಿ ಸಾಮರಸ್ಯದಿಂದ ಬದುಕಿ ಬಾಳಲು ನೆರವಾಗುವಂತೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ರಾಜ್ಯದ 48 ಸಾಹಿತಿಗಳು ಜಾನಪದ ತ್ರಿಪದಿಗಳನ್ನು ವಾಚಿಸಿದರು. ಎಂ ಎಸ್ ತಳವಾರ ಪ್ರಾರ್ಥಿಸಿದರು. ಎಂ ಎಂ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಟೀಲ ನಿರೂಪಿಸಿದರು. ಗೀತಾ ಹಿರೇಮಠ ವಂದಿಸಿದರು.