ಗೋಕಾಕ್

ಕಲ್ಯಾಣರಾಜ್ಯದ ಪುನರುದಯ ಅನಿವಾರ್ಯ: ಮಡಿವಾಳ ಸ್ವಾಮಿಗಳು

ಕಲ್ಯಾಣರಾಜ್ಯದ ಪುನರುದಯ ಅನಿವಾರ್ಯ: ಮಡಿವಾಳ ಸ್ವಾಮಿಗಳು

ಗೋಕಾಕ 20: ಜಾತೀಯತೆ, ಅಸಮಾನತೆ, ಮೇಲು-ಕೀಳು ಭಾವನೆ ತಾಂಡವವಾಡುತ್ತಿರುವ ಸಮಕಾಲೀನ ಸಂದರ್ಭದಲ್ಲಿ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರಿಂದ ಸೃಷ್ಟಿ ಗೊಂಡಿದ್ದ 'ಕಲ್ಯಾಣರಾಜ್ಯ' ಪುನರುದಯದ ಅನಿವಾರ್ಯತೆಯಿದೆ ಎಂದು ರಾಜಗುರು ಸಂಸ್ಥಾನ ಕಿತ್ತೂರು ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿದರು. 

ಅವರು ರವಿವಾರ ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಇವುಗಳ ಆಶ್ರಯದಲ್ಲಿ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ ಶಿವಾನುಭವ ಗೋಷ್ಠಿಯಲ್ಲಿ ಜನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ ಅವರ "ಅಂಬಿಗರ ಚೌಡಯ್ಯನವರ ವಚನಗಳು" ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  

ತಳಸಮುದಾಯದ ಪ್ರತಿನಿಧಿಯಾಗಿದ್ದು ನಿಜವಾದ ಲಿಂಗಾಯಿತ ಧರ್ಮ ಅಥವಾ ಬಸವಧರ್ಮದ ತತ್ವವನ್ನು ಎತ್ತಿಹಿಡಿದ ನಿಜಶರಣ ಅಂಬಿಗರ ಚೌಡಯ್ಯನನ್ನು, ಆತನ ವಚನಗಳನ್ನು ಎಲ್ಲರಿಗೂ ಮನಮುಟ್ಟುವಂತೆ ಸರಳವಾಗಿ, ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಪುಸ್ತಕದಲ್ಲಿ ತಿಳಿಯಪಡಿಸಿದ ನಾವಲಗಿ ಪ್ರಯತ್ನ ಶ್ಲಾಘನೀಯವೆಂದರು. 

ಡಾ. ಸಿ. ಕೆ. ನಾವಲಗಿ ಅವರು ಅಂಬಿಗರ ಚೌಡಯ್ಯ ವಚನವನ್ನು ಆರಂಭದಲ್ಲಿ ಕೊಟ್ಟು ಅದಕ್ಕೆ ವ್ಯಾಖ್ಯಾನವನ್ನು ನೀಡಿದ್ದಾರೆ. ಕಠಿಣ ಶಬ್ದಾರ್ಥ ಕೂಡ ಕೊಟ್ಟಿದ್ದಾರೆ. ಅವರ ಬರಹದ ಶೈಲಿ ಹೃದಯಕ್ಕೆ ತಟ್ಟುವಂತಿದೆ ಎಂದುಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. 

ಕೃತಿ ಕುರಿತು ಮಾತನಾಡಿದ ಪ್ರೊಫೆಸರ್ ಡಿ.ಡಿ. ಹಾದಿಮನಿ ಕ್ರಾಂತಿಕಾರಿ ಅಂಬಿಗರ ಚೌಡಯ್ಯನವರ 151 ವಚನಗಳನ್ನು ಸರಳವಾಗಿ, ನೇರವಾಗಿ ಮತ್ತು ಸ್ಪಷ್ಟವಾಗಿ ಸಾಮಾನ್ಯರ ಅರಿವಿಗೂ ನಿಲುಕುವಂತೆ ಸಾರಾಂಶ ಸಹಿತ ವ್ಯಾಖ್ಯಾನಿಸಿದ ಸಂಶೋಧಕ ನಾವಲಗಿಯವರ ಹೊಸ ಸಂಶೋಧನೆಗೆ ಹೊಳವು ನೀಡಿದ್ದಾರೆಂದರು. ಅರ್ಥವಾಗದ ಹಲವಾರು ವಚನಗಳಿಗೆ ಸಮಾಜಮುಖಿ ಅರ್ಥ ನೀಡಿ, ವಚನ ಓದುವ ಅಭಿರುಚಿ ಹೆಚ್ಚಿಸಿದ್ದೂ ಈ ಕೃತಿಯ ಹೆಚ್ಚುಗಾರಿಕೆ ಎಂದು ವಚನ ವಿಶ್ಲೇಷಣೆ ಮಾಡಿದರು. 

ಮಡಿವಾಳ ಸ್ವಾಮಿಗಳು, ಡಾ.ಸಿ.ಕೆ. ನಾವಲಗಿ, ಪ್ರೊ.ಡಿ.ಡಿ. ಹಾದಿಮನಿಯವರನ್ನೂ ಮುರುಘರಾಜೇಂದ್ರ ಶ್ರೀಗಳು ಸತ್ಕರಿಸಿದರು. ಬಸವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಕಟ್ಟಿ, ವೀಣಾ ಹಿರೇಮಠ, ಮಹಾದೇವಿ ಕಿರಗಿ, ವಿನುತಾ ನಾವಲಗಿ, ರಾಮಣ್ಣ ಕಾಪಸಿ, ಮಹಾಲಿಂಗಪ್ಪ ನೇಗಿನಹಾಳ, ಬಸವರಾಜ ಖಾನಪ್ಪನವರ ದಾಸೋಹಿಗಳು ಉಪಸ್ಥಿತರಿದ್ದರು. 

ಲೇಖಕ ಡಾ.ಸಿ.ಕೆ.ನಾವಲಗಿ ಪ್ರಾಸ್ತಾವಿಕ ಮಾತನಾಡಿದರು. ಜಾಗೃತ ಮಹಿಳಾ ವೇದಿಕೆಯವರು ಪ್ರಾರ್ಥಿಸಿದರು. ಎಸ್‌.ಕೆ.ಮಠದ ಪರಿಚಯಿಸಿದರು. ಆರ್‌.ಎಲ್‌.ಮಿರ್ಜಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ