ಇಂಡಿ

ಮಾಳಿಂಗರಾಯರ ದೇವಸ್ಥಾನದ ಕಳಸಾರೋಹಣ

ಮಾಳಿಂಗರಾಯರ ದೇವಸ್ಥಾನದ ಕಳಸಾರೋಹಣ
ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಮಾಳಿಂಗರಾಯರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನೆರವೇರಿತು.

ಇಂಡಿ11: ಇಡೀ ವಿಶ್ವದಲ್ಲಿಯೇ ಸಾಕ್ಷಾತ್ ಶಿವ ಪಾರ್ವತಿಯರನ್ನು ಭೂಮಂಡಲಕ್ಕೆ ಕರೆಸಿಕೊಂಡ ಮಹಾನ್ ದೇವರು ಅದು ಹುಲಜಂತಿಯ ಮಾಳಿಂಗರಾಯರು ಎಂದು ವಾಗ್ಮಿಗಳಾದ ಮೋಹನ್ ಮೇಟಿ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಅರ್ಜುಣಗಿ ಗ್ರಾಮದ ಹೊಸೂರ ವಸತಿಯಲ್ಲಿ ನೂತನವಾಗಿ ನಿರ್ಮಿಸಿದ ಮಾಳಿಂಗರಾಯರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷ ದೀಪಾವಳಿ ಪಾಡ್ಯ ಸಂದರ್ಭದಲ್ಲಿ ಸಾಕ್ಷಾತ್ ದೇವತೆಗಳಿಂದ ಮಾಳಿಂಗರಾಯರು ಮುಂಡಾಸ್ ಸುತ್ತಿಸಿಕೊಳ್ಳುತ್ತಾರೆ. ಮಾಳಿಂಗರಾಯರು ದೈವ ಭಕ್ತರಾಗಿದ್ದು ದೇವತೆಗಳೇ ಖುದ್ದು ಪ್ರತ್ಯಕ್ಷರಾಗಿ ಅವರನ್ನು ಪರೀಕ್ಷಿಸಿ ಅವರ ಭಕ್ತಿಗೆ ಮೆಚ್ಚಿ ಪ್ರತೀ ವರ್ಷ ನೀನಿರುವ ಸ್ಥಳಕ್ಕೇ ಬಂದು ನಿನ್ನ ಶಿಖರಕ್ಕೆ ಮುಂಡಾಸ್ ಸುತ್ತುತ್ತೇನೆ ಎಂದು ಆಶೀರ್ವದಿಸಿ ಪ್ರತೀ ವರ್ಷವೂ ಮುಂಡಾಸ್ ಸುತ್ತುತ್ತಾರೆ ಎಂದರು.

ಕುರುಬ ಸಮಾಜ ಶೈಕ್ಷಣಿಕ ಹಾಗೂ ರಾಜಕೀಯ ರಂಗದಲ್ಲಿ ಸಾಕಷ್ಟು ಹಿಂದೆ ಉಳಿದುಕೊಂಡಿದೆ. ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಗೌರವಯುತವಾಗಿ ಬದುಕುವುದನ್ನು ಹೇಳಿಕೊಡಬೇಕು ಎಂದರು.

ಸಾನಿಧ್ಯವಹಿಸಿದ್ದ ಹುಲಜಂತಿಯ ಪಟ್ಟದ ಪೂಜ್ಯರಾದ ಮಾಳಿಂಗರಾಯ ಮಹಾರಾಜರು ಆಶೀರ್ವಚನ ನೀಡಿ ಹಾಲುಮತ ಸಮಾಜದ ಕಾಶಿ ಎಂದೇ ಖ್ಯಾತಿಯಾಗಿರುವ ಹುಲಜಂತಿ ಮಾಳಿಂಗರಾಯರ ದೇವಸ್ಥಾನವನ್ನು ಇಂಡಿ ತಾಲ್ಲೂಕಿನಲ್ಲಿ ನಿರ್ಮಿಸಿದ್ದು ಸಂತಸ ತಂದಿದೆ. ಸಾಕ್ಷಾತ್ ಪರಶಿವನೇ ಪ್ರತಿ ವರ್ಷ ದೀಪಾವಳಿ ಅಮವಾಸ್ಯೆಯ ರಾತ್ರಿ ಮುಂಡಾಸ್ ಸುತ್ತುತ್ತಿರುವುದು ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ಇಂತಹ ಮುಂದುವರೆದ ಕಾಲದಲ್ಲಿಯೂ ಇಂತಹ ಘಟನೆಗಳು ಬಲು ಅಪರೂಪವಾಗಿವೆ. ಹಾಲುಮತ ಸಮಾಜವಷ್ಟೇ ಅಲ್ಲ ಮಾಳಿಂಗರಾಯರು ಸರ್ವ ಸಮುದಾಯದ ಹಿತ ಕಾಪಾಡುವ ದೈವವಾಗಿದ್ದಾರೆ ಎಂದರು.

ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ, ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ, ರಾಘವೇಂದ್ರ ಕುಲಕರ್ಣಿ ಮಾತನಾಡಿ ಮಾಳಿಂಗರಾಯರ ಚರಿತ್ರೆಯ ಬಗ್ಗೆ ವಿವರಣೆ ನೀಡಿದರು.

ವೇದಿಕೆಯಲ್ಲಿ ಉಡಚಾಣದ ಅರ್ಚಕ ಬೀರಪ್ಪ ಮುತ್ಯಾ, ಪತ್ರಕರ್ತ ಉಮೇಶ ಬಳಬಟ್ಟಿ, ಮಿರಗಿ ಗ್ರಾ ಪಂ ಅಧ್ಯಕ್ಷ ಚನ್ನು ಶ್ರೀಗಿರಿ, ರಮೇಶ ಮಸಳಿ, ಶ್ರೀಶೈಲ ಪೂಜಾರಿ, ಪಂಚಪ್ಪ ಹಂಜಗಿ, ಎಸ್.ಎಂ. ಹೊಸೂರ ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿ ಓದಿ