ಮಧ್ಯವರ್ತಿಗಳ ಅವಳಿಗೆ ಕಂಗಲಾದ ಅನ್ನದಾತ ರೈತ
ಬಳ್ಳಾರಿ: ಈ ಜಿಲ್ಲೆಯು ಭತ್ತದ ಕಣಜವೆಂದೇ ಪ್ರಸಿದ್ಧಿ ಪಡೆದಿರುವ ಬಳ್ಳಾರಿಯ ರೈತರು ಭತ್ತ ಮಾರಾಟ ಮಾಡಲು ಇನ್ನಿಲ್ಲದ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ, ಸಿರಗುಪ್ಪ, ಕಂಪ್ಲಿ, ಕುರಗೋಡ್ ತಾಲೂಕಿನ ಸಾವಿರಾರು ರೈತರು ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುತ್ತಾರೆ. ತುಂಗಭದ್ರಾ ಜಲಾಶಯದ ನೀರನ್ನು ಬಳಸಿಕೊಂಡು ಭತ್ತ ಬೆಳೆಯುವ ರೈತರು ಈ ಭಾರಿ ಮೊದಲ ಫಸಲನ್ನು ಈಗಾಗಲೇ ಕಟಾವ್ ಮಾಡಿದ್ದಾರೆ. ಆದರೆ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಭತ್ತವನ್ನು ಖರೀದಿ ಮಾಡಬೇಕಾದ ಖರೀದಿ ಕೇಂದ್ರವೇ ಇನ್ನು ಆರಂಭವಾಗಿಲ್ಲ. ಹೀಗಾಗಿ ರೈತರು ಬೆಳೆದ ಭತ್ತವನ್ನು ಹೇಗೆ ಮಾರಾಟ ಮಾಡುವುದು ಎಂದು ಕಂಗಾಲಾಗಿದ್ದಾರೆ.
ಭತ್ತ ಖರೀದಿ ಕೇಂದ್ರ ಇನ್ನು ಆರಂಭವಾಗದ ಪರಿಣಾಮ ಮಧ್ಯವರ್ತಿಗಳು ಬಾಯಿಗೆ ಬಂದ ಬೆಲೆಗೆ ಭತ್ತ ಖರೀದಿ ಮಾಡಲು ಮುಂದಾಗಿದ್ದಾರೆ, ಇದರಿಂದ ರೈತರಿಗೆ ನಷ್ಟವುಂಟಾಗುವಂತಾಗಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಪರಿಣಾಮ ಈ ಭಾರಿ ರೈತರು ಎರಡು ಬೆಳೆ ಬೆಳೆಯುವ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಮೊದಲ ಬೆಳೆ ಕಟಾವ್ ಮಾಡಿರುವ ಅನ್ನದಾತರು ಎರಡನೇ ಬೆಳೆಗೆ ಭತ್ತ ನಾಟಿ ಮಾಡಲು ಸಜ್ಜಾಗಿದ್ದಾರೆ. ಆದರೆ ಬಂಪರ್ ಆಗಿ ಬಂದಿರುವ ಮೊದಲ ಬೆಳೆಯ ಫಸಲನ್ನು ಖರೀದಿ ಮಾಡಬೇಕಾದ ಭತ್ತ ಖರೀದಿ ಕೇಂದ್ರವೇ ಇನ್ನು ಆರಂಭವಾಗಿಲ್ಲ. ಅಲ್ಲದೇ ಮೊದಲ ಬೆಳೆ ಕಟಾವ್ ಮಾಡಿ ಕಣ ರಾಶಿ ಮಾಡಿರುವ ರೈತರಿಗೆ ಮಳೆಯ ಕಾಟ ಶುರುವಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಭತ್ತ ಬೆಳೆದಿರುವ ರೈತರು ಭತ್ತ ಮಾರಾಟ ಮಾಡಲು ಇನ್ನಿಲ್ಲದಂತೆ ಪರದಾಡಬೇಕಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಭತ್ತ ಬೆಳೆಗಾರರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.