ನಟಿ ಪ್ರಿಯಾಮಣಿ, ಮುಸ್ತಫಾ ರಾಜ್ ವಿವಾಹ ಅಸಿಂಧು! ಮೊದಲ ಪತ್ನಿ ತಕರಾರು
ಮುಂಬೈ/ಬೆಂಗಳೂರು, ಜುಲೈ 22: ಬಹುಭಾಷಾ ನಟಿ ಪ್ರಿಯಾಮಣಿ ಹಾಗೂ ಮುಸ್ತಫಾ ವಿವಾಹದ ಬಗ್ಗೆ ತಕರಾರು ಕೇಳಿಬಂದಿದೆ.
ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಇಬ್ಬರು 2018ರಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು. ಮದುವೆ ಬಳಿಕ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ಚಿತ್ರರಂಗದ ಹಲವರು ಗಣ್ಯರು ಹಾಜರಾಗಿದ್ದರು.
ಇದೀಗ ಮುಸ್ತಫಾ ಅವರ ಮೊದಲ ಪತ್ನಿ ಆಯೆಷಾ ಈ ತಕರಾರೆತ್ತಿದ್ದು, ಕಾನೂನಿನ ಪ್ರಕಾರ ಮುಸ್ತಫಾ ಜೊತೆಗಿನ ಮದುವೆ ಕೊನೆಗೊಂಡಿಲ್ಲ, ತಾನಿನ್ನು ಮುಸ್ತಫಾ ಅವರ ಪತ್ನಿ ಎಂದು ಅಯೆಷಾ ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಮೊದಲ ಪತ್ನಿಯ ಆರೋಪವನ್ನು ಮುಸ್ತಫಾ ತಳ್ಳಿ ಹಾಕಿದ್ದಾರೆ. ಮಕ್ಕಳಿಗೆ ನಾನು ಬೆಂಬಲ ನೀಡುತ್ತಿರುವುದರಿಂದ, ಇದು ತನ್ನಿಂದ ಹಣ ವಸೂಲಿಮಾಡುವ ಪ್ರಯತ್ನ ಎಂದು ಹೇಳಿದ್ದಾರೆ.
ಮುಸ್ತಫಾ ಮತ್ತು ಆಯೆಷಾ ಇಬ್ಬರು 2013ರಲ್ಲಿ ಬೇರೆ ಬೇರೆಯಾಗಿದ್ದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಮುಸ್ತಫಾ ನಟಿ ಪ್ರಿಯಾಮಣಿ ಅವರನ್ನು 2017ರಲ್ಲಿ ಮದುವೆಯಾದರು.
“ನಾನಿನ್ನು ಅವರ ಪತ್ನಿಯಾಗಿ ಇದ್ದೀನಿ. ಮುಸ್ತಫಾ ಮತ್ತು ಪ್ರಿಯಾಮಣಿ ಮದುವೆ ಅಸಿಂಧು. ನಾವು ವಿಚ್ಛೇದನಕ್ಕೆ ಸಹ ಅರ್ಜಿ ಸಲ್ಲಿಸಿಲ್ಲ. ಪ್ರಿಯಾಮಣಿಯನ್ನು ಮದುವೆಯಾಗುವಾಗ ಅವರು ಬ್ಯಾಚುಲರ್ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ" ಎಂದು ಆಯೇಷಾ ಆರೋಪ ಮಾಡಿದ್ದಾರೆ.
ಇಬ್ಬರು ಮಕ್ಕಳ ತಾಯಿಯಾಗಿ ನಾನೇನು ಮಾಡಲು ಸಾಧ್ಯ ಹೇಳಿ? ಸರಿಯಾದ ದಾರಿಯಲ್ಲಿ ಇದನ್ನು ಸರಿದೂಗಿಸಲು ಪ್ರಯತ್ನ ಪಟ್ಟೆ. ಆದರೆ ಅದು ಕಾರ್ಯರೂಪಕ್ಕೆ ಬರದಿದ್ದಾಗ, ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಈಗ ಅವರು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ" ಎಂದು ಹೇಳಿದ್ದಾರೆ.
ನಟಿ ಪ್ರಿಯಾಮಣಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಮೂಲಕ ಪ್ರಿಯಾಮಣಿ ದೇಶದಾದ್ಯಂತ ಸದ್ದು ಮಾಡಿದ್ದರು. ವೆಬ್ಸಿರೀಸ್ನಲ್ಲಿ ಪ್ರಿಯಾಮಣಿ ನಟ ಮನೋಜ್ ಬಾಜಪೇಯಿ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ.
ಮುಸ್ತಫಾ ತನ್ನ ಲಕ್ಕಿ ಚಾರ್ಮ್ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು.