ಲೇಖನಗಳು

ಕಳವೆ ಕಣಜದ ಅಕ್ಷಯ ಪಾತ್ರೆ ಶ್ರೀ ಚನ್ನಬಸವ ತಾತನವರು....

ಕಳವೆ ಕಣಜದ ಅಕ್ಷಯ ಪಾತ್ರೆ ಶ್ರೀ ಚನ್ನಬಸವ ತಾತನವರು....

ಹಲವು ಮಾತೇನು ನೀನೊಲಿದು ಪಾದವನಿಟ್ಟ  

ನೆಲವೇ ಸುಕ್ಷೇತ್ರ ಜಲವೇ ಪಾವನ ತೀರ್ಥ  

ಸುಲಭ ಶ್ರೀ ಗುರುವೇ ಕೃಪೆಯಾಗು 

ಗುರುವಿನ ಆಶೀರ್ವಾದ ಪಡೆದ ಜೀವಿ ಪಾವನವಾಗುತ್ತಾನೆ. ಗುರುಪಾದ ಸ್ಪರ್ಶ ಪಡೆದ ನೆಲ ಜಲಗಳು ತೀರ್ಥ ಕ್ಷೇತ್ರಗಳಾಗುತ್ತವೆ ಎಂಬ ಶರಣರ ಮಾತು ಸತ್ಯ. ಕರ್ನಾಟಕದ ಉತ್ತರ ಭಾಗದಿಂದ ಮಧ್ಯಭಾಗ ಕಳವೆ ಕಣಜದ ನಾಡು ಗಂಗಾವತಿಗೆ ಬಂದು ಅಕ್ಷಯ ಸಿರಿ ಸಂಪತ್ತನ್ನು ನೀಡಿದ ವಿಭೂತಿ ಪುರುಷ ತಾತ. 

ಬಾಗಲಕೋಟೆ ಜಿಲ್ಲೆಯ ಜಾಲಿಹಾಳದ ಪರಮಪೂಜ್ಯ ಗುರುವರ್ಯ ಶ್ರೀ ಹುಚ್ಚಿರೇಶ್ವರ ಮಹಾಮಹಿಮರ ಕೃಪಾಶೀರ್ವಾದದಿಂದ ಶಿರೂರಿನ ಚೌಕಿಮಠದ ಜಂಗಮ ದಂಪತಿಗಳಾದ ಶ್ರೀ ಮರುಳ ಸಿದ್ದಯ್ಯ ಹಾಗೂ ಗೌರಮ್ಮರ ಉದರದಲ್ಲಿ ಜನಿಸಿದ ಶಿವಕಳೆಯ ಶಿಶುವೇ ಚೆನ್ನಬಸವ ಮಹಾಶಿವಯೋಗಿಗಳು. 

ಮರುಳಸಿದ್ದಯ್ಯನವರು ಸಂಸಾರದಲ್ಲಿದ್ದರೂ ಕೆಸರಿನ ತಾವರೆಯಂತೆ ವೈರಾಗ್ಯ ತಳೆದಿದ್ದರು. ಪೂಜ್ಯರು ಶಿರೂರಿನ ಚೌಕಿಮಠದಲ್ಲಿ ತಮ್ಮ ಮಕ್ಕಳ ಜೊತೆಗೆ ಊರಿನ ಎಲ್ಲ ಬಾಲಕರಿಗೆ ಆಧ್ಯಾಪನ ಮಾಡುತ್ತಿದ್ದರು. ಚನ್ನಬಸವ ತಾತನವರು ತನ್ನ ಅಣ್ಣ ದಿಗಂಬರಯ್ಯ ಮತ್ತು ತಮ್ಮ ಗುರುಪಾದಯ್ಯನನ್ನು ಅತೀವವಾಗಿ ಹಚ್ಚಿಕೊಂಡಿದ್ದರು. ಇವರು ಬಾಲ್ಯದಲ್ಲಿಯೇ ಸಮಯದ ಬಂಧನವಿಲ್ಲದೆ ಸಾಕಷ್ಟು ಬಾರಿ ಧ್ಯಾನದಲ್ಲಿ ಮೈಮರೆಯುತ್ತಿದ್ದರು. ಹೀಗೆ ಬಾಲ್ಯದಿಂದಲೇ ದಿವ್ಯ ಚೈತನ್ಯದಿಂದ ಕೂಡಿದ ಚನ್ನಬಸವ ತಾತನವರ ಬದುಕಿನಲ್ಲಿ ಬಿರುಗಾಳಿ ಬೀಸತೊಡಗಿತು. ಮೊದಲಿಗೆ ತಂದೆ ಮರುಳ ಸಿದ್ದಯ್ಯನವರನ್ನು ಕಳೆದುಕೊಂಡರು.  

 ಮರುಳ ಸಿದ್ದಯ್ಯನವರನ್ನು ಸ್ವಂತ ಮಗನೆಂದು ಭಾವಿಸಿದ್ದ  ಜಾಲಿಹಾಳದ ಪೂಜ್ಯ ಹುಚ್ಚಿರೇಶ್ವರ ಶಿವಯೋಗಿಗಳು ಚನ್ನಬಸವ ತಾತನವರ ಇಡೀ ಕುಟುಂಬವನ್ನು ಜಾಲಿಹಾಳಕ್ಕೆ ಕರೆತಂದರು. ಗೌರಮ್ಮನವರು ಜಾಲಿಹಾಳದ ಮಠಕ್ಕೆ ಬಹುಬೇಗನೆ ಹೊಂದಿಕೊಂಡರು. ಇಲ್ಲಿ ಗುರುಗಳು ಚನ್ನಬಸವಯ್ಯ ಹಾಗೂ ಅವನ ಸಹೋದರರಿಗೆ ವೇದ- ಆಗಮ ಪುರಾಣಗಳ ಕುರಿತು ಬೋಧನೆ ಮಾಡುತ್ತಿದ್ದರು. ಹೀಗೆ ನಡೆಯುತ್ತಿರಲು ದಿಗಂಬರಯ್ಯ ಮತ್ತು ಗುರುಪಾದಯ್ಯ ಈರ್ವರು ಅನಾರೋಗ್ಯದಿಂದ  ಇಹಲೋಕವನ್ನು ತ್ಯಜಿಸಿದರು. ಮಕ್ಕಳ ಅಗಲಿಕೆಯ ನೋವಿನಲ್ಲಿ ಕೆಲ ದಿನಗಳ ನಂತರ ಗೌರಮ್ಮನವರು ಶಿವಬೆಳಗಿನಲ್ಲಿ ಲೀನವಾದರು. 

ಚನ್ನಬಸವ ತಾತನವರು ತಮ್ಮವರನ್ನೆಲ್ಲ ಕಳೆದುಕೊಂಡು ಧ್ಯಾನದಲ್ಲಿ ಮುಳುಗಿ ತನ್ನ ತಾಯಿಯನ್ನು ಕುರಿತು ಚಿಂತಿಸುತ್ತಿರುವಾಗ ಹುಚ್ಚಿರೇಶ್ವರ ಗುರುಗಳು ಚೆನ್ನ ಬಸವ ತಾತನವರಿಗೆ ಸಾಂತ್ವನ ಹೇಳುತ್ತಿದ್ದರು. ಈ ಮಧ್ಯೆ ಜಾಲಿಹಾಳದ ಮಠದಲ್ಲಿ ಚೆನ್ನಬಸವ ಸ್ವಾಮಿಗಳಿಗೆ ದೀಕ್ಷಾ ಸಂಸ್ಕಾರವನ್ನು ನೀಡಿ ಹರಸಿದರು. ಗುರುಗಳ ಸಮ್ಮತಿ ಇಲ್ಲದಿದ್ದರೂ ತೀರ್ಥಕ್ಷೇತ್ರಗಳ ದರ್ಶನಕ್ಕೆ ತೆರಳಿದ  ತಾತನವರು ಭಕ್ತರ ಅಭಿಲಾಷೆಯ ಮೇರೆಗೆ ತಮಿಳುನಾಡಿನ ವಾಲಾಜಿ ಹಾಗೂ ಮದ್ರಾಸುಗಳಲ್ಲಿ ನಾಲ್ಕಾರು ವರ್ಷಗಳ ಕಾಲ ನೆಲೆಸಲು; ಕನಸಿನಲ್ಲಿ ಹುಚ್ಚಿರೇಶ್ವರ ಗುರುಗಳು ಕರೆದಂತೆ ಭಾಸವಾಗಿ, ಈ ಮೊದಲು ದರ್ಶಿಸ ಬಯಸಿದ್ದ ತೀರ್ಥಕ್ಷೇತ್ರಗಳ ದರ್ಶನ ಪಡೆದು ಹಿಂತಿರುಗಿ ಬರುವ ವೇಳೆವಾಗಲೇ ಜಾಲಿಹಾಳದ ಪೂಜ್ಯರು ಶಿವೈಕ್ಯರಾಗಿದ್ದರು. ನಂತರ ಪೂಜ್ಯರ ಕರ್ತೃಗದ್ದುಗೆಯನ್ನು ದರ್ಶಿಸಿದರು. ಬಹುತೇಕ ಚೆನ್ನಬಸವ ಸ್ವಾಮಿಗಳು ಬದುಕಲ್ಲಿ ತಮ್ಮ ತಾಯ್ತಂದೆ, ಅಣ್ಣ ತಮ್ಮಂದಿರನ್ನು ಹಾಗೂ ದೀಕ್ಷಾ ಗುರುಗಳನ್ನು ಅತ್ಯಲ್ಪ ಅವಧಿಯಲ್ಲೇ ಕಳಕೊಂಡಿದ್ದನ್ನು ಗಮನಿಸಿದರೆ 

ಬುದ್ಧಿಮಾತಿದು ನಿನಗೆ; ಸಿದ್ಧನಿರು ಸಕಲಕ್ಕಂ ಽ 

ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ ಽಽ 

ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ ಽ 

ಸಿದ್ಧನಾಗೆಲ್ಲಕಂ - ಮಂಕುತಿಮ್ಮ ಽಽ 

ಎಂಬ ಡಿ.ವಿ.ಜಿ ಅವರ ಮಾತು ಸತ್ಯ ಎನಿಸುತ್ತದೆ. ಸದಾ ಕನಸು- ಕನವರಿಕೆಯಾಗಿದ್ದ ಚಿಕ್ಕ ಕೊಡಗಲಿಯ ಶಿಕ್ಷಾ ಗುರುಗಳಾದ ಮಹಾಲಿಂಗ ಸ್ವಾಮಿಗಳೆಡೆಗೆ ಸಾಗಲು ಭಕ್ತರ ಅಪ್ಪಣೆ ಪಡೆದು, ಹರಸಿ ತೆರಳಿದರು.  

ವಿದ್ಯೆ ಕಲಿಯಬೇಕಾದವನಿಗೆ ಸಮರ್ಥ ಗುರುವಿನ ಆಯ್ಕೆ ಎಂತೋ, ಅಂತೆಯೇ ಗುರು ಸದಾ ಕಾಲ ಯೋಗ್ಯ ಶಿಷ್ಯನ ಶೋಧನೆಯಲ್ಲಿ ತೊಡಗಿರುತ್ತಾನೆ. ಗುರು ಶಿಷ್ಯರು ಸಂಧಿಸಿದ ಈ ಅವಿಸ್ಮರಣೀಯ ಸಂದರ್ಭಕ್ಕೆ ಘನಮಠದ ನಾಗಭೂಷಣ ಶಿವಯೋಗಿಗಳು ಸಾಕ್ಷಿಯಾದರು. ಚನ್ನಬಸವ ತಾತನವರು ಗುರುಗಳ ಕೃಪೆಯಿಂದ ಯೋಗ ವಿದ್ಯೆಯನ್ನು ಕಲಿತು, ಅವರ ಆಣತಿಯಂತೆ ಗಂಗಾವತಿಯ ಕಲ್ಮಠಕ್ಕೆ ಆಗಮಿಸಿ, ಕೊಟ್ಟೂರು ಸ್ವಾಮಿಗಳ ಸೇವೆಯೊಂದಿಗೆ ಮಠದ ಭಕ್ತರಿಗೆ ಅನ್ನ, ಆಧ್ಯಾತ್ಮ ದಾಸೋಹ ನಡೆಸುತ್ತಾ ಕೆಲವೇ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದರು. ಗುರುಗಳ ಆಸೆಯಂತೆ ಕಲ್ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಭಕ್ತರ ಉದ್ಧಾರಕ್ಕಾಗಿ ಅಹಿರ್ನಿಶೆ ಶ್ರಮಿಸಿದರು. ಸಾಕ್ಷಾತ್ ಶಿವಮುಖವಾಣಿಯೇ ಆಗಿದ್ದ ತಾತನವರು ತೋರಿದ ಲೀಲೆಗಳಿಗೆ ಸಾಟಿಯೇ ಇಲ್ಲ ಎನ್ನಬಹುದು. ಅನೇಕ ರೋಗರುಜನೆಗಳಿಂದ ಬಳಲುತ್ತಿದ್ದ ಹಲವು ಭಕ್ತರನ್ನು ಗುಣಮುಖ ಮಾಡಿದ್ದಲ್ಲದೆ; ಮರಣೋನ್ಮುಖರಾದವರನ್ನು ಕಾಪಾಡಿದ್ದು ಪೂಜ್ಯರ ಮಹಿಮೆ. 

ತಾತನವರ ಪವಾಡಗಳಿಗೆ ಮನಸೋತ ಗಂಗಾವತಿಯ ಸುತ್ತಮುತ್ತಲಿನ ಅಯೋಧ್ಯೆ, ಮೈಲಾಪುರ, ಕಾರಟಗಿ, ಹಣವಾಳ, ಹೇರೂರು, ಕನಕಗಿರಿ ಮುಂತಾದ ದೂರ ದೂರದ ಊರುಗಳಿಂದ ಭಕ್ತರು ಮಠಕ್ಕೆ ಹರಿದು ಬಂದರು. ತನು, ಮನ, ಧನಗಳನ್ನು ಗುರು, ಲಿಂಗ, ಜಂಗಮರಿಗೆ ಅರ​‍್ಿಸಿದವರ ಬಾಳು ಹಸನು ಎಂಬುದು ಸದ್ಭಕ್ತರ ನಂಬಿಕೆಯಾಯಿತು. 

ಚೆನ್ನಮಲ್ಲಿಕಾರ್ಜುನ ಸ್ವಾಮಿ ಮಠ ಸ್ಥಾಪನೆ:- ದುರ್ಗಮ್ಮನ ಗುಡಿಯ ಹಳ್ಳದ ದಂಡಿಯ ಹತ್ತಿರ ಭಕ್ತರೊಡನೆ ಸಾಗಿ ಪಾಪಸು ಕಳ್ಳಿ, ಜಾಲಿಯಿಂದ ಕೂಡಿದ ಜಾಗವನ್ನು ಸ್ವಚ್ಛಗೊಳಿಸಿ, ಅಲ್ಲಿದ್ದ ಬಸವಣ್ಣನ ಮೂರ್ತಿ, ಬನ್ನಿ ಮರವನ್ನು ತೋರಿಸಿ; ಇದು ಪವಿತ್ರ ಸ್ಥಾನ "ಗಂಗಾವತಿ ಮುಂದೊಂದು ದಿನ ಛೋಟಾ ಮುಂಬೈ ಆಗುತ್ತೆ ಇದು ಗಂಗಾವತಿಯ ಹೃದಯ ಭಾಗ" ಎಂದು ಭವಿಷ್ಯ ನುಡಿದರು. ಇನ್ನು ಮುಂದೆ ಇದೇ ನನ್ನ ಕಾರ್ಯಕ್ಷೇತ್ರ ಗುರು ಅಪ್ಪಣೆ ಆಗಿದೆ, ಇಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ನೆಲೆ ನಿಂತು ಭಕ್ತರನ್ನು ಉದ್ಧಾರ ಮಾಡುತ್ತಾನೆ ಎಂದರು. ಹೊಸಮಠ ಸ್ಥಾಪನೆಯಾಯಿತು. ಗಣೇಶ ಚತುರ್ಥಿಯ ದಿನ ಬೆಳಗಿನ ಕನಸಿನಲ್ಲಿ ಶಿವ ದರ್ಶನ ನೀಡಿ; ಹೊಸ ಕಾರ್ಯಕ್ಷೇತ್ರಕ್ಕೆ ಹೊರಡಲು ಅಪ್ಪಣೆಯಾಯಿತು. ಅಂದೆ ಗಣೇಶ ವಿಸರ್ಜನೆಯ ನಂತರ ಹೊಸಮಠದಲ್ಲಿಯೇ ಉಳಿಯುವುದಾಗಿ ಗುರುಗಳು ಭಕ್ತರಿಗೆ ತಿಳಿಸಲು, ಜೊತೆಗೆ ತಾವು ಇರುವುದಾಗಿ ಕೇಳಿಕೊಂಡ ಭಕ್ತರಿಗೆ ತಮ್ಮೊಡನೆ ಶಿವನಿರುವುದಾಗಿ ಹೇಳಿ ಭಕ್ತರನ್ನು ಬಿಳ್ಕೊಟ್ಟರು. 

ಸದಯಂ ಹೃದಯಂ ಯಸ್ಯ ಭಾಷಿತಂ ಸತ್ಯ ಭೂಷಿತಂ ಽ  

ಕಾಯಃ ಪರಹಿತೇ ಯಸ್ಯ ಕಲಿಸ್ತಸ್ಯ ಕರೋತಿ ಕಿಮ್? 

ಎಂಬ ಮಾತಿನ ಅರ್ಥದಂತೆ ತಾತನವರು ಒಬ್ಬರೇ ಉಳಿದರು. ಭಕ್ತರ ಸಹಕಾರದಿಂದ ತಾತನವರು ಹೇರೂರಿನಿಂದ ತಂದ ಶಿವಲಿಂಗವನ್ನು ಹೊಸಮಠದಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಚೆನ್ನಮಲ್ಲಿಕಾರ್ಜುನ ಸ್ವಾಮಿ ಮಠವು ಅಭಿನವ ಶ್ರೀಶೈಲದಂತೆ ಭಕ್ತರ ಬಾಳನ್ನು ಬೆಳಗುತ್ತ ನಾಡಿನಾದ್ಯಂತ ಪ್ರಸಿದ್ಧಿ ಹೊಂದಿತು. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಯ್ತು. ನಿರಂತರ ದಾಸೋಹ ನಡೆಯುತ್ತಿತ್ತು. ದಾಸೋಹದ ಬಳಕೆಗೆ ನೀರಿಗಾಗಿ ಪೂಜ್ಯತಾತನವರು ಶ್ರೀಮಠದ ಆವರಣದಲ್ಲಿ ತೋರಿಸಿದ ಜಾಗದಲ್ಲಿ ಬಾವಿ ತೋಡಲು ಪವಿತ್ರ ಗಂಗೆ ಒಸರಿದಳು. "ಋಷಿಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ" ಎಂಬ ಮಾತು ದಿಟ. ಮಠದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು  ತಾವೇ ಮಾಡುತ್ತಿದ್ದ ಪೂಜ್ಯರ ನಡೆ. 

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ 

ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ 

ಎಂಬ ಶರಣರ ನುಡಿಗೆ ಸಾಕ್ಷಿಯಾಗಿತ್ತು. ಮಾನವತವಾದ, ಸಮತಾವಾದದ ಬೆಳಕಿನಂತಿದ್ದ ಅವರು ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಿದ್ದರು. ಎಲ್ಲ ಮತಗಳು ಮಾನವ ಮತವೇ ಶ್ರೇಷ್ಠ ಎಂದು ಹೇಳಿರುವ ಹಿನ್ನೆಲೆಯಲ್ಲಿ ಭುವಿಯ ಸಕಲರ ಲೇಸನ್ನು ಬಯಸಿದರು. ಪೂಜ್ಯರ ಬಳಿಯಲ್ಲಿ ಎಂದಿಗೂ ಜಾತಿ-ಮತಗಳ ಭೇದವಿರಲಿಲ್ಲ. ಕೃಷ್ಣ -ಕರಿಮ, ರಾಮ-ರಹಿಮ ಒಂದೇ ಎಂದು ಭಾವಿಸಿ; ಹಿರೇಜಂತಕಲ್ಲಿನ ಅಲ್ಲೀಸಾಬನಿಗೆ ಆತನ ಇಚ್ಛೆಯಂತೆ ಸಂಸ್ಕಾರ ನೀಡಿ; ‘ಸಿದ್ಧರಾಮ'ನೆಂದು ನಾಮಕರಣ ಮಾಡಿದರು. 

ಬದುಕಿನದ್ದಕ್ಕೂ ಭಕ್ತರ ಬವಣೆಗಳನ್ನು ಬಯಲು ಮಾಡಿದ ತಾತನವರ ಪರುಷ ಹಸ್ತದಿಂದ ವಿಭೂತಿ ಭಸ್ಮ, ತೀರ್ಥ, ಪ್ರಸಾದ, ಅಕ್ಷತೆ, ಲೋಬಾನ ಮುಂತಾದ ದ್ರವ್ಯಗಳು ದಿವ್ಯ ಓಷಧಿಗಳಾಗಿ, ಭಕ್ತರ ಕಾಯಿಲೆಗಳನ್ನು ವಾಸಿ ಮಾಡುವ ಅಮೃತವಾಗಿ, ಸಾವಿನ ದವಡೆಯಿಂದ ಕಾಪಾಡುತ್ತಿದ್ದವು. ಶಿವಶಕ್ತಿಯೇ ಆಗಿದ್ದ ತಾತನವರು ಕಣ್ಣ ಮುಂದಿನ ಬೆಳಕು ಗುರುದೇವ, ಬೆನ್ನ ಹಿಂದಿನ ಅಭಯ ಹಸ್ತ ಗುರುದೇವ ಎಂಬ ಭಾವನೆಯನ್ನು ಹೊಂದಿದ್ದರು. ಅವರ ಸರಳ, ನಿಸ್ಪೃಹ, ವಿನಮ್ರ ವ್ಯಕ್ತಿತ್ವದ ಓಜೆಗೆ ಭಕ್ತ ಸಮೂಹ ಶರಣಾಗಿತ್ತು. ಇಳೆಯ ಜೀವಿಗಳು ನಿತ್ಯರಲ್ಲ, ಮರ್ತ್ಯರು. ಬಂಡಿ ಕೊರಳ ಹರಿದಾಂಗ ನಮ್ಮಪ್ಪ ಶಿವ ಕಾಲ ಮುಗಿದಾಗ ಜೀವನ ಬಂಡಿಯ ಕೊರಳ ಹರಿದು ಮುಕ್ತಿ ಕೊಡತಾನ. ತಾತನವರ ಕಾಲ ಸಮೀಪಿಸಲು ತನ್ನ ಪ್ರಮಥ ಬಳಗದ ವೈರಾಗ್ಯ ನಿಧಿಯನ್ನು ಸಾಕ್ಷಾತ್ ಪರಶಿವನೆ ಬಂದು, ತನ್ನ ದಿವ್ಯ ಸಾನಿಧ್ಯಕ್ಕೆ ಕರೆದನು. ಮಲ್ಲಿಕಾರ್ಜುನ ಮಠದ ಭಕ್ತರಿಗೆ ವಿಷಯ ತಿಳಿದು; ತಾಯ್ತನದ ಕಾಳಜಿಯ ಗುರು, ಬಂಧು, ದೈವ ಎಲ್ಲವೂ ಆಗಿದ್ದ ತಾತನವರಲ್ಲಿ ಯಪ್ಪಾ.... ನೀವು ಹೋದರೆ ನಮ್ಮ ಬದುಕು ಹೇಗೆ..? ಎಂದು ಬೇಡಲು...... ನಾನು ದೈಹಿಕವಾಗಿ ದೂರಾದರೂ ಮಾನಸಿಕವಾಗಿ ಇಲ್ಲೇ ಇರುತ್ತೇನೆ. ನಿಮ್ಮ ಕರೆಗೆ ಓಗೊಡುತ್ತೇನೆ. “ನೀವು ನಡೆದುಕೊಂಡ ಹಾಗೆ ಪಡೆದುಕೊಳ್ಳುತ್ತೀರಿ” ಎಂದು ಹೇಳಿ; ಹಿರಿಯ ಭಕ್ತರನ್ನು ಕರೆದು ಮಠದ ಜವಾಬ್ದಾರಿಯನ್ನು ವಹಿಸಿ, ಇಲ್ಲಿ ನಿತ್ಯ ಜ್ಞಾನ, ಅನ್ನದಾಸೋಹ ನಡೆಯಬೇಕೆಂದು ತಿಳಿಸಿ; ಶಿವನಾಮ ಸ್ಮರಣೆ ಮಾಡುತ್ತಾ ಮಂದಸ್ಮಿತ ವದನರಾಗಿ ಬಯಲಲ್ಲಿ ಬಯಲಾಗಿ ,ಶಿವ ಬೆಳಗಿನಲ್ಲಿ ಲೀನವಾದರು. ಇಂದಿಗೂ ಕೂಡ ಮಲ್ಲಿಕಾರ್ಜುನ ಮಠದಲ್ಲಿ ತಾತನವರ ಗದ್ದುಗೆ ಜಾಗೃತ ಸ್ಥಳವಾಗಿದ್ದು, ಭಕ್ತಿಯಿಂದ ಬೇಡಿದವರ ಕಷ್ಟಕಾರ​‍್ಪಣಯಗಳು ಕರ​‍್ೂರದಂತೆ ಕರಗಿ ಹೋಗುತ್ತವೆ. ಇಂದಿಗೂ ಪ್ರತಿದಿನ ಬೆಳಿಗ್ಗೆ ತಾತನವರ ದರ್ಶನ ಪಡೆದೇ ಕೆಲಸ ಕಾರ್ಯಗಳಿಗೆ ತೆರಳುವ ಪರಿಪಾಠ ಬಹುತೇಕ ಭಕ್ತರಲ್ಲಿರುವುದನ್ನು ನಾವು ಕಾಣುತ್ತೇವೆ. ಪೂಜ್ಯರ ಆಶಯದಂತೆ ಶ್ರೀಮಠದಲ್ಲಿ ಇಂದಿಗೂ ನಿತ್ಯ ದಾಸೋಹ ನಡೆಯುತ್ತಿದೆ. ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ ಸರ್ವಜಾತಿಯ ನೂರಾರು ವಿದ್ಯಾರ್ಥಿಗಳು ಭವಿಷ್ಯತ್ತನ್ನು ಕಟ್ಟಿಕೊಳ್ಳುತ್ತಿದ್ದಾರೆ.  ಸಮಾಜೋದ್ಧಾರ್ಮಿಕ ಕಾರ್ಯಗಳಿಗೆ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಉಚಿತ ಅವಕಾಶ ಕಲ್ಪಿಸಲಾಗಿದೆ. ಧರ್ಮದರ್ಶಿ ಮಂಡಳಿಯ ಸದಸ್ಯರು ಸದಾ ಕಾಲ ಆತ್ಮಪ್ರತ್ಯಯ, ಸೇವಾ ಬುದ್ಧಿಯಿಂದ ಶ್ರೀಮಠದ ಸೇವೆಯಲ್ಲಿ ತೊಡಗಿದ್ದು 2007 ರಲ್ಲಿ ತಾತನವರ ಮಠದ ಜೀರ್ಣೋದ್ಧಾರದ ಜೊತೆಗೆ ಬೆಳ್ಳಿತೇರನ್ನು ನಿರ್ಮಿಸಲಾಯಿತು. 2015ರಲ್ಲಿ ಮಲ್ಲಿಕಾರ್ಜುನ ಗುಡಿಯ ಜೀರ್ಣೋದ್ಧಾರ ಮತ್ತು 2021 ರಲ್ಲಿ ಶ್ರೀ ಚನ್ನಬಸವ ಕಲಾಮಂದಿರ ನಿರ್ಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 

ತಾತನವರು ಶಿವೈಕ್ಯರಾದ ಪುಷ್ಯ ಶುದ್ಧ ತ್ರಯೋದಶಿ ಮೃಗಶಿರ ನಕ್ಷತ್ರದಂದು ಪ್ರತಿ ವರ್ಷ ತಾತನವರ ಜಾತ್ರೆ-ಮಹಾ ರಥೋತ್ಸವವನ್ನು ಜರುಗಿಸಲಾಗುತ್ತದೆ. ಜಾತ್ರೆಗೂ ಒಂದು ತಿಂಗಳ ಪೂರ್ವದಲ್ಲಿ ಪುರಾಣವನ್ನು ಹೇಳಿಸಲಾಗುತ್ತದೆ.ಐದು ದಿನಗಳ ಮೊದಲು ಕಳಸಾರೋಹಣ ಹಾಗೂ ಬೆಳ್ಳಿ ತೇರನ್ನು ಎಳೆಯುವ ಮುಖೇನ ಪ್ರಾರಂಭವಾಗುವ ಜಾತ್ರಾ ಕಾರ್ಯವು ದಶಮಿ ದಿಂಡು, ಮುತ್ತಿನ ಪಲ್ಲಕ್ಕಿ, ಹೂವಿನ ಪಲ್ಲಕ್ಕಿ ಉತ್ಸವಗಳ ಮೆರವಣಿಗೆಯನ್ನು ಭಕ್ತರು ಅತ್ಯಂತ ಉತ್ಸಾಹದಿಂದ ಗಂಗಾವತಿ ನಗರದ ಪ್ರಮುಖ ಬೀದಿಗಳ ಮೂಲಕ ತಾತನ ಮಠಕ್ಕೆ ತರುತ್ತಾರೆ. ಜಾತ್ರೆಯ ದಿನ ಬೆಳಿಗ್ಗೆ ಸಹಸ್ರ ಸಹಸ್ರ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕುವರು. ಗಂಗಾವತಿಯ ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ವಿಶೇಷವಾಗಿ ರಾಯಚೂರು ಜಿಲ್ಲೆಯಿಂದ  ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಪಾದಯಾತ್ರೆ ಬಂದು, ತಾತನ ದರ್ಶನ ಪಡೆದು, ಪುಳಕಿತರಾಗುತ್ತಾರೆ. ಸಮಸ್ತ ಭಕ್ತರಿಗೆ ಊಟೋಪಹಾರದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಜಾತ್ರೆಗೆ ಆಗಮಿಸಿರುವ ಲಕ್ಷಾಂತರ ಜನ ಸಂಜೆ ಹರ್ಷೋದ್ಘಾರದೊಂದಿಗೆ ಮಹಾ ರಥೋತ್ಸವವನ್ನು ಜರುಗಿಸುತ್ತಾರೆ. 

ಶ್ರೀ ಚನ್ನಬಸವ ತಾತನವರು ಮರಣ ಮಹಾನವಮಿ ಎಂದು ತೆರಳಿದರೂ ಕೂಡ ಭಕ್ತಕೋಟಿಯನ್ನು "ಪಡೆದ ತಾಯಂತೆ ಗಟ್ಯಾಗಿ ಸಲಹುತಿಹರು"...... 

ಗುರುಭ್ಯೋ ನಮಃ 

- ಶ್ರೀ ಮಂಜುನಾಥ ಪ. ಚಿತ್ರಗಾರ 

ಗಂಗಾವತಿ-ಕೊಪ್ಪಳ 


ಸುದ್ದಿ ಓದಿ