ತಾಳಿಕೋಟಿ

ಅದ್ಧೂರಿಯಾಗಿ ಜರುಗಿದ ಅಮೋಘಸಿದ್ದೇಶ್ವರ ಜಾತ್ರೆ

ಅದ್ಧೂರಿಯಾಗಿ ಜರುಗಿದ ಅಮೋಘಸಿದ್ದೇಶ್ವರ ಜಾತ್ರೆ

ತಾಳಿಕೋಟೆ02:ಎಲ್ಲೆಲ್ಲೂ ಭಾವುಕ ಭಕ್ತರ ಮಹಾಪೂರ, ನೂರಾರು ಡೊಳ್ಳುಗಳ ಕೈಪಟ್ಟು ಗದ್ದಲಮಯ ಪರಿಸರದಲ್ಲಿ ಮಂಗಳವಾರ ಬೆಳಗಿನ ಜಾವ 4-15ಕ್ಕೆ ಸೂಜಿ ಬಿದ್ದರೂ ಸಪ್ಪಳವಾಗದ ನೀರವ ಮೌನ ಆವರಿಸಿತ್ತು. 

ಅದೇ ಸಮಯಕ್ಕೆ ಆಗಮಿಸಿದ ದೇವರ ಹೇಳಿಕೆದಾರ “ನನ್ನ ಜಾಗದಾಗ ಅಲ್ಲದ ಮಾತಾಡಿದವಗ ಇಂಗಳ ಗೂಟ ಜಡಿನಲೇ, ಮುಂಗಾರಿ ಹಿಂದನಿಂದ ಬೆಳದಿರಲೇ, ಹಿಂಗಾರಿ ಪವಿತ್ರ ಬೆಳದಿರಲೇ” ಎಂಬ ಅಧಿಕಾರಿಯುತ ಪ್ರವಾದನೆಯ ಧ್ವನಿ ಕೇಳುತ್ತಲೇ ಮುಗಿಲು ಮುಟ್ಟಿದ ಸಹಸ್ರಾರು ಭಾವುಕ ಭಕ್ತರ ಜಯಘೋಷ ಮೈನವಿರೇಳಿಸುವಂತಿತ್ತು. ಇದು ತಾಳಿಕೋಟೆ ತಾಲೂಕಿನ ಚಬನೂರಿನಲ್ಲಿ ನಡೆದ ರಾಜ್ಯ ಪ್ರಸಿದ್ಧ ಅಮೋಘ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಒಂದು ಕ್ಷಣ ಮಾತ್ರದ ಚಿತ್ರಣ. 

ಉತ್ತರ ಕರ್ನಾಟಕದ ಬಹುಪುರಾತನ, ಪರಂಪರಾಗತವಾದ ಚಬನೂರಿನ ಅಮೋಘ ಸಿದ್ಧೇಶ್ವರ ಜಾತ್ರಾ ಮಹೋತ್ಸವದಂದು ನಡೆಯಲಿರುವ ಕಾರ್ಣಿಕವು ಬಹು ಪ್ರಮುಖವಾಗಿದೆ. ಅಮೋಘ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಕುರಿತು ಸ್ಥಳಿಯರಲ್ಲಿ ಅಸಂಖ್ಯಾತ ಜನಪದ ನಂಬಿಕೆಗಳು, ಐತಿಹ್ಯಗಳು, ಭವಿಷ್ಯತ್ ವಾಣಿ, ವೃತ್ತಾಂತಗಳ ಬಗ್ಗೆ ಚರ್ಚೆಗಳು ಮನೆ ಮಾತಾಗಿವೆ. ಈ ವರ್ಷದ ಹೇಳಿಕೆಯನ್ನು ಆಧರಿಸಿ ಈ ಭಾಗದ ಬಹುತೇಕ ಎಲ್ಲ ರೈತರೂ ತಮ್ಮ ಜಮೀನುಗಳಲ್ಲಿ ಬಿತ್ತನೆ ಆರಂಭಿಸಲಿದ್ದು, ಈ ವರೆಗೂ ಹೇಳಿಕೆಯಾದ ಎಲ್ಲ ವಾಣಿಗಳು ಸತ್ಯವಾದ ಬಗ್ಗೆ ಸ್ಥಳೀಯ ರೈತ ವರ್ಗ ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ವಿಶ್ಲೇಷಿಸುತ್ತಾರೆ. 

ಕಳೆದ 11 ದಿನಗಳಿಂದ ಜರಗುತ್ತಿರುವ ಈ ಜಾತ್ರೆಯಲ್ಲಿ ಮುಖ್ಯವಾಗಿ ಸಾಂಪ್ರದಾಯದಂತೆ ಹಿರೇಕುರುಬರ ಕುಟುಂಬದ ಸದಸ್ಯರು ಬರಿಗಾಲಿನಿಂದ ಸುಮಾರು ವಿಜಯಪುರದಿಂದ ಪಾದಯಾತ್ರೆ ಕೈಗೊಂಡು ಹೂವು ತರುವದು, ಅಮೋಘಮುತ್ಯಾನ ಬಾವಿಯಲ್ಲಿ ಗಂಗಸ್ಥಳ, ಹೂಗಾರ ಮನೆತನದಿಂದ ಬಾಸಿಂಗ ತರುವದು, ಒಡೆಯರ ಮನೆತನದಲ್ಲಿ ಲಕ್ಷ್ಮೀ ಪೂಜೆ, ಹಿರೇಗಾರರ ಪಂಕ್ತಿ ಚಕ್ಕಳಿ ಅಂಬಲಿ ಎಂಬ ವಿಶೇಷ ಖ್ಯಾದ್ಯದ ವಿತರಣೆ, ವೀರಗಾಸೆ, ನೂರಾರು ಡೊಳ್ಳುಗಳು ವಿವಿಧ ಕೈಪಟ್ಟುಗಳು ಸಾಂಪ್ರದಾಯಿಕ ನೃತ್ಯ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ಜರುಗಿದವು. ಉತ್ತರ ಕರ್ನಾಟಕ ಪ್ರಮುಖ ಜಾತ್ರೆಗಳಲ್ಲಿ ಇದು ಒಂದಾಗಿದ್ದರಿಂದ ಹಲವು ಭಾಗಗಳಿಂದ ಕಾರ್ಣಿಕ ಕೇಳಲು ಆಗಮಿಸುತ್ತಾರೆ. ಬಸವನಬಾಗೇವಾಡಿ ಪೊಲೀಸ್‌ರು ಬೀಗಿ ಬಂದೋಬಸ್ತನ್ನ ಕೈಕೊಂಡಿದ್ದರು. 


ಸುದ್ದಿ ಓದಿ