ಮುಂದಗೋಡ

ಭಾರಿ ಮಳೆ-ಗಾಳಿಗೆ ಅಡಕೆ ಗಿಡಗಳು ನೆಲಕಚ್ಚಿ ಹಾನಿ

ಭಾರಿ ಮಳೆ-ಗಾಳಿಗೆ ಅಡಕೆ ಗಿಡಗಳು ನೆಲಕಚ್ಚಿ ಹಾನಿ

ಲೋಕದರ್ಶನ ವರದಿ 

ಮುಂಡಗೋಡ:ಇತ್ತೀಚೆಗೆ ಬಿದ್ದ ಭಾರಿ ಮಳೆ-ಗಾಳಿಗೆ ತಾಲೂಕಿನ ಕೊಪ್ಪ ಗ್ರಾಮದ ನಾಗರಾಜ ಬೆಣ್ಣಿ ಎಂಬುವರ ತೋಟದ ಅಡಕೆ ಗಿಡಗಳು ಬಿದ್ದು ಹಾನಿ ಉಂಟಾಗಿದೆ.  

ಸುಮಾರು 3 ಎಕರೆ ತೋಟದಲ್ಲಿ ಬೆಳೆದ ಅಂದಾಜು 70-80 ಸಾವಿರ ರೂ. ಮೌಲ್ಯದ ಕೊನೆ ಬಿಟ್ಟ ಅಡಕೆ ಗಿಡಗಳು ಮಳೆ-ಗಾಳಿಗೆ ನೆಲಕಚ್ಚಿ ಹಾನಿಯಾಗಿದೆ. ಮತ್ತೆ ಸಸಿ ನೆಟ್ಟು ಫಲ ಬಿಡುವವರೆಗೆ ಕಾಯಬೇಕು. ಕೆಲವು ದಿನಗಳ ಹಿಂದೆ ಹೂವು ಬಿಡುವ ವೇಳೆಯಲ್ಲಿ ಆಲಿಕಲ್ಲು ಬಿದ್ದು ಅಡಕೆ ಹೂವು ಉದುರಿತ್ತು. ಕಳೆದ ಮೂರು ವರ್ಷದ ಹಿಂದೆ ಸಿಡಿಲು ಬಡಿದು ಸುಮಾರು 20 ಅಡಕೆ ಗಿಡಗಳು ಸುಟ್ಟು ಹೋದವು. ತೋಟಗಾರಿಕೆ ಇಲಾಖೆಯವರು ಶೇ.50-60ರಷ್ಟು ಹಾನಿಯಾದರೆ ಮಾತ್ರ ಪರಿಹಾರ ನೀಡುವುದಾಗಿ ಹೇಳಿದರು.  

ಮಳೆಗಾಲದ ಆರಂಭದಲ್ಲಿಯೇ ಇಷ್ಟೊಂದು ಹಾನಿ ಸಂಭವಿಸಿದೆ. ಮುಂದೆ ಇನ್ನೂ ದೊಡ್ಡ ಮಳೆಯಾಗಬಹುದು. ರೈತರು ಸಾಲ ಮಾಡಿರುತ್ತಾರೆ. ಹೀಗೆ ಮೇಲಿಂದ ಮೇಲೆ ಪೆಟ್ಟು ಬಿದ್ದರೆ ರೈತರು ಜೀವನ ನಡೆಸುವುದು ಕಷ್ಟ. ಆದ್ದರಿಂದ ಎಷ್ಟೇ ಪ್ರಮಾಣದ ಹಾನಿಯಾದರೂ ಇಲಾಖೆ ಸಹಾಯ ರೈತರಿಗೆ ಇರಬೇಕು. ತೋಟಗಾರಿಕೆಯೇ ನಮ್ಮ ಜೀವನಾಧಾರವಾಗಿದ್ದು ಪ್ರಕೃತಿ ವಿಕೋಪಗಳಿಗೆ ಇಲಾಖೆಯಿಂದ ಪರಿಹಾರ ಸಿಗುವಂತಾಗಬೇಕು ಎಂದು ಅಡಕೆ ಬೆಳೆಗಾರ ನಾಗರಾಜ ಬೆಣ್ಣಿ ತಮ್ಮ ಅಳಲು ತೋಡಿಕೊಂಡರು. 


ಸುದ್ದಿ ಓದಿ