ರಾಜ್ಯದ ಹಿತ ಕಾಯಲು ಸರ್ಕಾರ ಸಂಪೂರ್ಣ ವಿಫಲ: ಹಲಗಿ ಸುರೇಶ್
ಹೂವಿನಹಡಗಲಿ 20: ಬರಿ ಸುಳ್ಳು ಆಶ್ವಾಸನೆ ಭರವಸೆಗಳನ್ನು ಕೊಡುತ್ತಾ ಬಡ ವರ್ಗದ ಜನರ ಹಿತ ಕಾಯದೆ, ಬೆಲೆ ಏರಿಕೆ ನಿಯಂತ್ರಣ ಮಾಡದೆ, ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿರುವ ರಾಜ್ಯ ಸರ್ಕಾರ, ರಾಜ್ಯದ ಹಿತಕಾಯಲು ಸಂಪೂರ್ಣ ವಿಫಲವಾಗಿದೆ ಎಂದು ಂಋಖಿಅ ತಾಲೂಕು ಸಂಚಾಲಕ ಹಲಗಿ ಸುರೇಶ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅವರು ತಾಲೂಕು ಪತ್ರಕರ್ತರ ಬಳಗದ ಮತ್ತು ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡಿದ್ದ ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಸಂಘಟನೆಯ ರಾಜ್ಯ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾಹುಸೇನ್ ಅವರ 44ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿ ಮಾತನಾಡಿದರು. ಸರ್ಕಾರ ಬಡವರ ಮತ್ತು ದುಡಿಯುವ ವರ್ಗದವರ ಹಿತಕಾಯಲು ಸಂಪೂರ್ಣವಾಗಿ ವಿಫಲವಾಗಿದೆ, ದೈನಂದಿನದ ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೊರೊನಾ ಸಮಯದಲ್ಲಿ ದುಡಿಮೆ ಇಲ್ಲದೆ ದುಡಿದು ತಿನ್ನುತ್ತಿದ್ದ ಸಾಕಷ್ಟು ಕುಟುಂಬಗಳು ಇಂದಿಗೂ ಬದುಕನ್ನು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿವೆ. ಇಂತಹ ಸಮಯದಲ್ಲೂ ಸರ್ಕಾರ ಈಗ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿಯೂ ಮನೆಗಳಲ್ಲಿನ ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್ ಅಳವಡಿಸಲು ಹೊರಟಿದೆ. ತಾಲೂಕಿನಲ್ಲಿ ಈಗ ಅನೇಕ ಹಳ್ಳಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ದನಕರುಗಳನ್ನು ಕಟ್ಟಿಕೊಂಡ ರೈತರ ಬಡವರ ಗತಿಯೇನು? ದುಡಿದ ಹಣವನ್ನು ನೀರಿನ ತೆರಿಗೆ ಕೊಡಬೇಕಾಗುತ್ತದೆ. ಈ ಕೂಡಲೇ ಸರ್ಕಾರ ರೈತರ ಜಾನುವಾರಗಳ ಹಿತಕಾಯಲು ಮೀಟರ್ ಅಳವಡಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತರಾದ ದಯಾನಂದ ಅವರು ಉಪಸ್ಥಿತರಿದ್ದು ಸರ್ವರನ್ನು ನಮ್ಮವರೆಂದು ತಿಳಿದು ಸದಾ ಎಲ್ಲರ ಹಿತ ಬಯಸುವ ಬಿಚ್ಚುಗತ್ತಿ ಖಾಜಾಹುಸೇನ್ ಅವರ ಗುಣ ದೊಡ್ಡದು, ಪ್ರತಿಯೊಬ್ಬ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಇವರು ಮುಂದಿನ ದಿನಮಾನಗಳಲ್ಲಿ ಉತ್ತಮ ನಾಯಕನಾಗಿ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಮರ ಸೇನೆ ಸಂಘಟನೆಯ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷ ಬಿಎಂ ವೀರಯ್ಯಸ್ವಾಮಿ, ಪತ್ರಕರ್ತರಾದ ವೀರೇಶ್ ಕಲ್ಮಠ. ಶರಣ್ ರಾಯಪ್ಪ ನವರು, ವೀರೇಶ್ ಕಾಲಿಬಾವಿ, ದಡಾರ್ಪ, ಜೈನುದ್ದಿನ್, ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.