ಎಲ್ಲಾ ಯೋಜನೆಗಳಿಗೆ ಸರ್ಕಾರದಿಂದಲೇ ಅನುದಾನ ತರಲು ಸಾಧ್ಯವಿಲ್ಲ : ಹೆಬ್ಬಾರ
ಲೋಕದರ್ಶನ ವರದಿ
ಮುಂಡಗೋಡ: ಎಲ್ಲಾ ಯೋಜನೆಗಳಿಗೆ ಸರ್ಕಾರದಿಂದಲೇ ಅನುದಾನ ತರಲು ಸಾಧ್ಯವಿಲ್ಲ ಬಾಷ್ ಕಂಪನಿಯವರಿಂದ ಶಾಲೆಗೆ ಹೈಟೆಕ್ ಶೌಚಾಲಯದ ಸಹಾಯ ಪಡೆಯಲಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಮತ್ತು ಹೈಟೆಕ್ ಶೌಚಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಬಡತನ, ನಿರುದ್ಯೋಗ ಮತ್ತು ಅನಕ್ಷರತೆ ಈ ಮೂರು ಪೀಡೆಗಳನ್ನು ತೊಲಗಿಸಲು ಶಿಕ್ಷಣ ಒಂದೇ ಮಾರ್ಗ. ಒಂದು ಕಾಲದಲ್ಲಿ ವಿದ್ಯೆ ಶ್ರೀಮಂತರ ಸ್ವತ್ತಾಗಿತ್ತು. ಆದರೆ ಈಗ ಹಾಗಿಲ್ಲ. ಬಡವರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಶಿಕ್ಷಣಕ್ಕಾಗಿ ಜಾರಿಗೆ ತಂದಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಸುದೈವದಿಂದ ದೇಶದಿಂದ ಕೋವಿಡ್ ಅನ್ನು ಸಂಪೂರ್ಣವಾಗಿ ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಮಧ್ಯೆ ಕೋವಿಡ್ ವೇಳೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿತ್ತು. ಇನ್ನು ಮುಂದೆ ಅಭ್ಯಾಸದ ಬಗ್ಗೆ ಕಾಳಜಿ ವಹಿಸಿ ಉತ್ತಮ ಸಾಧನೆ ಮಾಡಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬಾಷ್ ಕಂಪನಿಯ ಗಣೇಶ ಮಾತನಾಡಿ ಶೌಚಾಲಯ ಸಮಸ್ಯೆಯಿಂದ ಶಾಲೆಯಲ್ಲಿ ಹೆಣ್ಣುಮಕ್ಕಳು ಮಧ್ಯಾಹ್ನದ ನಂತರ ಊಟ ಮಾಡಿ ಮನೆಗೆ ಹೋಗುತ್ತಿದ್ದರು. ವಿಶೇಷವಾಗಿ ಅವರಿಗೆ ಅನುಕೂಲವಾಗಲೆಂದು ಹೈಟೆಕ್ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಎಲ್.ಟಿ.ಪಾಟೀಲ ಮಾತನಾಡಿ ಹೈಟೆಕ್ ಶೌಚಾಲಯದ ಬೇಡಿಕೆ ಬಹಳ ದಿನಗಳಿಂದ ಇತ್ತು. 7ಲಕ್ಷ ರೂ. ವೆಚ್ಚದಲ್ಲಿ ಬಾಷ್ ಕಂಪನಿಯವರು ನಿರ್ಮಿಸಿ ಕೊಟ್ಟ ಶೌಚಾಲಯವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಅವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಸಚಿವರನ್ನು ಮತ್ತು ಬಾಷ್ ಕಂಪನಿಯ ಸಹೋದ್ಯೋಗಿಗಳನ್ನು ಸನ್ಮಾನಿಸಲಾಯಿತು.
ನಂತರ ಸಚಿವರು ಸರಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಡಿಜಿಟಲ್ ಕ್ಲಾಸ್ ರೂಮ್ಗೆ ಚಾಲನೆ ನೀಡಿದರು.
ಈ ವೇಳೆ ಪ.ಪಂ.ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ವಿವೇಕ ಹೆಬ್ಬಾರ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ರವಿಗೌಡ ಪಾಟೀಲ, ತುಕಾರಾಮ ಇಂಗಳೆ, ಶ್ರೀಕಾಂತ ಸಾನು, ಪ.ಪಂ.ಸದಸ್ಯರು, ಹರೀಶ ನಾಯ್ಕ, ಪ್ರಾಚಾರ್ಯ ಜಿ.ಟಿ.ಕಡೇಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ವಿನೋದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.