ದಿಢೀರನೆ ನೆಲಕ್ಕುರುಳಿದ ಮಿನುಗುತ್ತಿದ್ದ ನಕ್ಷತ್ರ... .
ಅರವತ್ತಾರನೇ ಕನ್ನಡ ರಾಜ್ಯೋತ್ಸವದ ಹೊಸ್ತಿಲಲ್ಲಿದ್ದಾಗಲೇ ನಲವತ್ತಾರು ವರ್ಷದ ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವಿನ ಸುದ್ದಿ ಅರುಹಿದ ಕನ್ನಡ ಚಾನೆಲ್ ಒಂದರ ಅನುಭವಿ ಸುದ್ದಿವಾಚಕರೇ ಗದ್ಗದಿತರಾಗಿಬಿಟ್ಟರು....ಅಲ್ಲಿಯವರೆಗೂ ಸುದ್ದಿ ವೀಕ್ಷಿಸುತ್ತಿದ್ದಾಗ ನನ್ನ ಕಣ್ಣಂಚಿನಲ್ಲೂ....
ಇದು ಸಾಯುವ ವಯಸ್ಸಲ್ಲ. ಕನ್ನಡದ ಮೇರುನಟ ರಾಜಕುಮಾರರ ಮಗನಿಗೆ ಯಶಸ್ಸಿನ ಮೆಟ್ಟಿಲೇರುತ್ತೇರುತ್ತಿರುವಾಗಲೇ ಇಂಥದೊಂದು ಆಳ-ಬೀಳು....!
ನಾನು ಸಿನೆಮಾಗಳನ್ನು ಅಷ್ಟಾಗಿ ನೋಡದವನು. ವರ್ಷಕ್ಕೊಂದು ಸಿನಿಮಾ ನೋಡಿದರೆ ಹೆಚ್ಚು.... ಆದರೆ, ಯಾವ ಭಾಷೆಯ ಚಲನಚಿತ್ರವಾದರೂ ಅದರ ಬಗ್ಗೆ ಬರುವ ವಿಮರ್ಶೆ, ಸುದ್ದಿ, ಕಲಾವಿದರ ಬಗೆಗಿನ ವರದಿ ಯಾವುದನ್ನೂ ಓದದೆ ಬಿಡದವನು....ಅವರ ಪ್ರತಿಭೆ, ಸಾರ್ವಜನಿಕ ನಡೆ-ನುಡಿಗಳನ್ನು ಒರೆಗೆ ಹಚ್ಚುವವನು...
ನನ್ನ ಅತೀ ತೀವ್ರವಾದ ಗೌರವಕ್ಕೆ ಪಾತ್ರವಾದದ್ದು ಡಾ. ರಾಜ್ಕುಮಾರ್ ರವರ ವಿನಯ-ಸಂಸ್ಕಾರಗಳು... ಅವರ ಕನ್ನಡಾಭಿಮಾನ, ಕನ್ನಡ ಜ್ಞಾನ...ಹಣ-ಕೀರ್ತಿ-ಜನರ ಅಭಿಮಾನಗಳನ್ನು ರಾಜಕುಮಾರರಷ್ಟು ಸಮತೋಲನದಿಂದ, ಸಮಯೋಚಿತತೆಯಿಂದ, ಸಮದರ್ಶಿತ್ವದಿಂದ, ವಿನಯವಂತಿಕೆಯಿಂದ ಸಂಭಾಳಿಸಿದಂತ, ಸಂ *ಬಾಳಿಸಿ* ದಂಥ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ... ಬಹುಶಃ ನೀವೂ ಕೂಡಾ....ದಾರ್ಶನಿಕನಂತೇ ಬದುಕಿದರು ರಾಜಣ್ಣ....
ಇಂಥ ವ್ಯಕ್ತಿತ್ವ-ಶ್ರೀಮಂತಿಕೆಯ ಆಸ್ತಿಯನ್ನು ಬಳುವಳಿಯನ್ನಾಗಿ ಪಡೆದವರ ಮಕ್ಕಳು ಆ ಗೌರವಾಭಿಮಾನಗಳನ್ನು ಪೋಲು ಮಾಡುವುದೇ ಹೆಚ್ಚು... ಆದರೆ, ಕನ್ನಡದ ರಾಜಣ್ಣನ ಮಕ್ಕಳು ತಂದೆಗೆ ತಕ್ಕ ಮಕ್ಕಳಾಗಿ ಕರ್ನಾಟಕವನ್ನು ಬೆಳಗಿದವರು... ಒಂದಾದರೂ ದುರ್ವರ್ತನೆ, ಅಗೌರವಯುತ ನಡೆ, ಒಂದಾದರೂ ಅವಿನಯ ಪ್ರದರ್ಶನ ತೋರಿಸದೆ ಕನ್ನಡಿಗರ ಮನೆಮಕ್ಕಳಂತೇ ನಡೆದುಕೊಂಡಿದ್ದಾರೆ....ಅವರೆಲ್ಲರ ಈ ಸದ್ಗುಣವೇ ಅವರ ನಿಜವಾದ ಆಸ್ತಿ...
Punith Rajkumar was really a chip of the old block....ಅಪ್ಪನ ಎಲ್ಲಾ ಸದ್ಗುಣ, ವೃತ್ತಿಪರತೆ, ಕಲೆ ಎಲ್ಲವನ್ನೂ ಮೈಗೂಡಿಸಿಕೊಂಡು, ತನ್ನ ಸ್ವಂತಿಕೆಯನ್ನೂ ಸೇರಿಸಿ ಕೊಂಡು ತನ್ನ ವೃತ್ತಿ ಮತ್ತು ಸಾರ್ವಜನಿಕ ಜೀವನಗಳಿಗೆ ಮೆರುಗು ಕೊಟ್ಟಿದ್ದರು... ಯುವಕರಿಗೇನು, ನನ್ನಂಥ ಹಿರಿಯ ನಾಗರೀಕರಿಂದಲೂ ಭೇಷ್ ಎನಿಸಿಕೊಂಡಿದ್ದರು... ಅವರ ಸಹೋದರರೂ ಅವರಷ್ಟೇ ಗುಣವಂತರು...
ಪುನೀತ್ ಎಂಬ ದೇದಿಪ್ಯಮಾನವಾಗಿ ಮಿನುಗುತ್ತಿದ್ದ ನಕ್ಷತ್ರವೊಂದು ದಿಢೀರನೆ ನೆಲಕ್ಕುರುಳಿದೆ...ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ನೋವು ತಂದಿದೆ.... ಅವರ ನೆನಪುಗಳು ಮಾತ್ರ ಅಭಿಮಾನಿಗಳೆದೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲಲಿವೆ... ಅಭಿಮಾನಿಗಳು ಮತ್ತು ತೀವ್ರ ದುಃಖಿತರಾಗಿರುವ, ಆಘಾತಕ್ಕೊಳಗಾಗಿರುವ ಅವರ ಕುಟುಂಬವರ್ಗ ಈ ಭಾವನಾತ್ಮಕ ಸಂಕಷ್ಟವನ್ನು ಧೈರ್ಯದಿಂದ, ಸಮಚಿತ್ತದಿಂದ ಎದುರಿಸಲಿ...ಅವರೊಂದಿಗೆ ನಾವೂ ಭಾಗಿಗಳಾಗೋಣ, ಶಾಂತಿ ಕಾಪಾಡೋಣ.... ರಾಜ್ ಕುಟುಂಬದ ವಿನಯವಂತಿಕೆ ಕನ್ನಡದ, ಕನ್ನಡಿಗರ ಧ್ಯೇಯವಾಗಲಿ....
ಎಸ್. ಎನ್. ಲಕ್ಷ್ಮೀನಾರಾಯಣ