ಸಡಗರ ಸಂಭ್ರಮದ ರಂಗಶೋಭಾಯಾತ್ರೆಯ ಬೆಳದಿಂಗಳು
ಬಳ್ಳಾರಿ 27: ನಾಟ್ಯದೇವ ನಟರಾಜನ ಆಲಂಕೃತ ಪಲ್ಲಕ್ಕಿ, ಆತನನ್ನು ಪೂಜಿಸಿ ಭಜಿಸಲೆಂದೇ ವ್ಯವಸ್ಥೆ ಮಾಡಲಾಗಿದ್ದ ಕಹಳೆ, ಕರಡಿಮಜಲು, ವೀರಗಾಸೆ ಕುಣಿತ, ನಂದಿಧ್ವಜದ ನರ್ತನ, ಜಗ್ಗಲಿಗೆಮೇಳ, ಸಮಾಳ, ತಾಷಾರಾಂ ಡೊಳ್ಳು, ಕೋಲಾಟ; ಇವುಗಳ ಜೊತೆ ಜೊತೆಗೆ ಪಂ.ಪುಟ್ಟರಾಜ ಗವಾಯಿ, ಬಳ್ಳಾರಿ ರಾಘವರು, ಜೋಳದರಾಶಿ ದೊಡ್ಡನಗೌಡರು, ಕೋ.ಚನ್ನಬಸಪ್ಪ, ಮನ್ಸೂರು ಸುಭದ್ರಮ್ಮ, ಕರ್ನಾಟಕ ಏಕೀಕರಣ ಹೋರಾಟದ ಏಕೈಕ ಬಲಿದಾನ ಬಳ್ಳಾರಿಯ ಪೈಲ್ವಾನ್ ರಂಜಾನ್ಸಾಬ್, ಹಾಸ್ಯ ಸಾಹಿತಿ ಬೀಚಿ, ಸಿಡಿಗಿನಮೊಳೆ ನಾಗೇಶಶಾಸ್ತ್ರಿಗಳು, ಬುರ್ರಕಥಾ ದರೋಜಿ ಈರಮ್ಮ, ಮುದೇನೂರು ಸಂಗಣ್ಣ, ಇವರೆಲ್ಲರ ಸ್ಮರಣೆಯಂಬಂತೆ ಅವರ ಭಾವಚಿತ್ರಗಳ ಪ್ರದರ್ಶನ. ಈ ಎಲ್ಲರ ನಡುವೆ ಚಂದನಕ್ಕೆ ಕುಂದಣವಿಟ್ಟಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವೃತ್ತಿ ರಂಗಭೂಮಿ ಕಲಾವಿದರ ಸಂತಸದಲ್ಲೆ ಮೀರಿದ ಕುಣಿತ.
ಶನಿವಾರ ನಗರದ ಗಾಂಧಿಭವನದಿಂದ ಬಸವೇಶ್ವರ ಪುತ್ಥಳಿವರೆಗೆ ಸುಮಾರು ಮೂರು ಗಂಟೆಕಾಲ ಜರುಗಿದ ರಂಗಶೋಭಾಯಾತ್ರೆಯ ಚಿತ್ರಣವಿದು. ಬಳ್ಳಾರಿಯ ಅಂಥ ಸುಡುಸುಡು ಬಿಸಿಲಿನಲ್ಲೂ ಬೆಳದಿಂಗಳು ಚೆಲ್ಲಿದಂತೆ ಭಾಸವಾದ ಈ ಮೆರವಣಿಗೆಯನ್ನು ನಗರದ ಸಹೃದಯಿ ಜನತೆ ರಸ್ತೆಯ ಇಕ್ಕಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿಂತು ವೀಕ್ಷಿಸಿ ಆನಂದಿಸಿದರಲ್ಲದೆ ತಮ್ಮ ತುಂಬ ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದರೊಂದಿಗೆ ತಮ್ಮ ಪದವಿ ಪ್ರತಿಷ್ಟೆಗಳನ್ನು ಮರೆತು ರಂಗತೋರಣದ ಅಧ್ಯಕ್ಷರು, ಕಾರ್ಯದರ್ಶಿಗಳು, ನಾಟಕ ಅಕಾಡೆಮಿಯ ಹಾಲಿ ಮಾಜಿ ಸದಸ್ಯರು, ಅಧ್ಯಕ್ಷರು, ಕಂಪನಿಯ ಮಾಲೀಕರು, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘದ ಸದಸ್ಯರು, ಪದಾಧಿಕಾರಿಗಳು ಎಲ್ಲರೂ ಶೋಭಾಯಾತ್ರೆಯುದ್ದಕ್ಕೂ ಉತ್ಸಾಹದಿಂದ ಕುಣಿದದ್ದನ್ನು ನೋಡಿದರೆ ಇದೆ ರಂಗಭೂಮಿಯ ಶಕ್ತಿ, ಸಾಮರ್ಥ, ಮಹತ್ವಗಳನ್ನು ಪ್ರತಿಬಿಂಬಿಸುವಂತಿತ್ತು.
ಇದಕ್ಕೂ ಮುನ್ನ ಕ.ರಾ.ವೃತ್ತಿ ರಂಗಭೂಮಿ ಮಾಲಿಕರ ಸಂಘದ ಕಾರ್ಯದರ್ಶಿ ಶ್ರೀಧರ ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಕಲಾವಿದರ ಗೋಷ್ಠಿಯಲ್ಲಿ ವಿದ್ವತೂರ್ಣ ಚರ್ಚೆ ನಡೆಯಿತು. ಯುವ ಕಲಾವಿದ ಫಯಾಜ್ ಕರ್ಜಗಿ., ಜ್ಯೋತಿ ಮಂಗಳೂರು, ಮಂಜುನಾಥ ಗೂಳೇದಗುಡ್ಡ, ಪತ್ರಕರ್ತ ಅಜಿತ ಘೋರೆ್ಡ ಮಾತನಾಡಿದರು, ಭರತ ತಾಳಿಕೋಟೆ, ಶರತ್ ಕುಂಬ್ಳೆ ಅವರ ಪ್ರಶ್ನೆಗಳಿಗೆ ಅಧ್ಯಕ್ಷ ಶ್ರೀಧರ ಹೆಗಡೆ ಉತ್ತರಿಸಿದರು. ಈ ಗೋಷ್ಠಿ ರಂಗಭೂಮಿಯ ಹಲವಾರು ಸಮಸ್ಯೆ, ಸಾಧಕ-ಬಾಧಕಗಳ ಮೇಲೆ ಬೆಳಕು ಚೆಲ್ಲಿತು.
ಸಂಜೆ ವಿವಿಧ ಕಂಪನಿಗಳ ಕಲಾವಿದರು ಪ್ರದರ್ಶಿಸಿದ ವಿವಿಧ ನಾಟಕಗಳ ಕಿರು ದೃಶ್ಯಾವಳಿ ಇಂದಿಗೂ ರಂಗಭೂಮಿ ತನ್ನ ಜೀವಂತಿಕೆಯನ್ನು ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸಿತು. ರಂಗತೋರಣದ ಅಧ್ಯಕ್ಷ ಪ್ರೊ. ಆರ್.ಭೀಮಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಅಡವಿಸ್ವಾಮಿ, ಸ್ಥಳೀಯ ಗಣ್ಯರಾದ ಶ್ರೀಧರಗಡ್ಡೆ ಬಸವಲಿಂಗಪ್ಪ, ಹಾವಿನಾಳು ಶರಣಬಸಪ್ಪ, ಮೋತ್ಕರ್ ಶ್ರೀನಿವಾಸ್, ಎನ್.ಯಶವಂತರಾಜ, ಕೆ.ರಾಜಶೇಖರ, ಎನ್.ಪ್ರಕಾಶ್, ವಿ.ರಾಮಚಂದ್ರ, ವೀರಶೇಖರರೆಡ್ಡಿ ಮುಂತಾದವರು ಈ ಕಾರ್ಯಕ್ರಮಗಳಿಗೆಲ್ಲ ಸಾಕ್ಷಿಯಾಗಿದ್ದರು.