ಸೆ. 25ರಂದು ರಾಜ್ಯಾದ್ಯಂತ ‘ಕಾಮನ್ ಮ್ಯಾನ್ ನಾನೇ ಸಿಎಂ’ ಚಿತ್ರ ಬಿಡುಗಡೆ
ಲೋಕದರ್ಶನ ವರದಿ
ಗದಗ 21: ಸಾಮಾನ್ಯ ಪ್ರಜೆಯೊಬ್ಬನ ಕೈಗೆ ಅಧಿಕಾರ ಸಿಕ್ಕರೆ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ತರಬಹುದು ಎಂಬ ಕಥಾವಸ್ತುವಿನ ‘ಕಾಮನ್ ಮ್ಯಾನ್ ನಾನೇ ಸಿಎಂ’ ಕನ್ನಡ ಚಲನಚಿತ್ರ ಸೆ. 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ, ಅನ್ಯಾಯ, ಜನಸಾಮಾನ್ಯರ ಸಮಸ್ಯೆಗಳು ಹಾಗೂ ರಾಜಕೀಯ ವ್ಯವಸ್ಥೆಯಲ್ಲಿನ ಬದಲಾವಣೆಯ ಅಗತ್ಯವನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ ಎಂದರು.
ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರವನ್ನು ನಿರ್ದೇಶಿಸಿದ್ದು, ಸುರಭಿ ಫಿಲಂಸ್ ಸಂಸ್ಥಾಪಕ-ಅಧ್ಯಕ್ಷ ಹಾಗೂ ರಂಗಭೂಮಿ ಕಲಾವಿದ ಡಾ. ಎನ್. ನರಸಿಂಹಮೂರ್ತಿ ಕಥೆ, ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು ಮುಖ್ಯಮಂತ್ರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪರ ಆಡಳಿತ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ವ್ಯವಸ್ಥೆಯ ಸುಧಾರಣೆಯ ಆಶಯವನ್ನು ಚಿತ್ರ ಹೊಂದಿದೆ ಎಂದು ಅವರು ಹೇಳಿದರು.
ರಾಜಕೀಯ ನಾಯಕರ ಅಧಿಕಾರ ವ್ಯಾಮೋಹ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಜನನಾಯಕ ಕಂಸಾಳೆ ಕುಮಾರ್ ವಕೀಲ ಹಾಗೂ ಕಳೆದುಕೊಂಡ ಮುಖ್ಯಮಂತ್ರಿ ಸ್ಥಾನವನ್ನು ಮರಳಿ ಪಡೆಯಲು ರಾಜಕೀಯ ತಂತ್ರ ರೂಪಿಸುವ ಮಾಜಿ ಮುಖ್ಯಮಂತ್ರಿಯ ನಡುವಿನ ಸಂಘರ್ಷ ಚಿತ್ರದ ಪ್ರಮುಖ ಅಂಶವಾಗಿದೆ. ಸೋನಲ್ ಲಾಡ್ವಾ ಹಾಗೂ ಸಬ್ಬಿ ಸೂರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಡಾ. ಎನ್. ನರಸಿಂಹಮೂರ್ತಿ ಅವರು ಕದಂಬ ಸೈನ್ಯದ ಗೌರವಾಧ್ಯಕ್ಷರಾಗಿರುವುದು ಸಂಘಟನೆಗೆ ಹೆಮ್ಮೆಯ ಸಂಗತಿ ಎಂದು ಬೇಕ್ರಿ ರಮೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ರಾಜಕುಮಾರ ಕನ್ನಡ ಸೇನೆ ಮೈಸೂರು ಜಿಲ್ಲಾಧ್ಯಕ್ಷ ನಾ. ಮಹದೇವಸ್ವಾಮಿ, ಕರ್ನಾಟಕ ರಾಜ್ಯ ಶ್ರೀ ಪಂಡಿತ ಪುಟ್ಟರಾಜ ರೈತ ಸಂಘದ ರಾಜ್ಯಾಧ್ಯಕ್ಷ ಎಂ.ಪಿ. ಮುಳಗುಂದ, ಗೌರವ ರಾಜ್ಯಾಧ್ಯಕ್ಷರು, ಗದಗ ಮಹಿಳಾ ಜಿಲ್ಲಾ ಸಂಚಾಲಕಿ ಕವಿತಾ ಗಡಗೂರು ಸೇರಿದಂತೆ ಅಪ್ಪಣ್ಣ ಬಶೆಟ್ಟೆಪ್ಪ, ನೂರಂದಪ್ಪ ಹುಂಡೇಕಾರ, ಬನಶಂಕರಿ ಮತ್ತಿತರರು ಉಪಸ್ಥಿತರಿದ್ದರು.