ಭಾಷೆಯ ಅಂಧಾಭಿಮಾನದ ನಡತೆಗಳು ರಾಷ್ಟ್ರಾಭಿಮಾನಕ್ಕೆ ಧಕ್ಕೆಯಾಗಬಾರದು
ಭಾಷಾಭಿಮಾನವು ಇತ್ತೀಚೆಗೆ ದುರಾಭಿಮಾನವಾಗಿ ಬದಲಾಗತೊಡಗಿದೆ ಇಂಥ ದುರಭಿಮಾನದಿಂದ ರಾಷ್ಟ್ರಾಭಿಮಾನವನ್ನು ಗಾಳಿಗೆ ತೂರುವ ಪುಂಡರಿಂದ ಬೀದಿ ಪ್ರತಿಭಟನೆಗಳು ಇಂದು ಹೆಚ್ಚಾಗಿವೆ.ಯಾವುದೋ ಕ್ಷುಲ್ಲಕ ಕಾರಣಕ್ಕೆ ವಯುಕ್ತಿಕವಾಗಿ ಆರಂಭವಾಗುವ ವೈಮನಸ್ಸು ಸಿಟ್ಟಿನ ಕಟ್ಟನ್ನು ಹರಿದು ತನ್ನ ದೇಹದ ಬಟ್ಟೆ ಬಿಚ್ಚಿಕೊಂಡು ಹಾದೀಬೀದಿಯಲ್ಲಿ ಆರಂಭವಾಗುವ ಕೂಗುಮಾರಿಗಳ ಪ್ರಭಾವಕ್ಕೊಳಗಾಗಿಜನಸಾಮಾನ್ಯರಲ್ಲಿ ಧರಣಿ ಪ್ರತಿಭಟನೆಯ ಕಾವು ಉಕ್ಕಿ ದ್ವೇಷದ ಬೆಂಕಿ ಹರಡುವುದು ಇತ್ತೀಚಿನ ಸಾಮಾಜಿಕ ಕ್ಷೋಭೆಗಳ ಲಕ್ಷಣ. ಇತ್ತೀಚಿನ ಬೆಳಗಾವಿ ಗಲಬೆಗಳು ಕನ್ನಡ-ಮರಾಠಿ ಭಾಷಾ ವೈಷಮ್ಯ ಪುಂಡರ ನೆತ್ತಿಗೇರತೊಡಗಿದೆ.ಪುಂಡಾಟಿಕೆ ನಡೆಸುವ ಪೋಕರಿಗಳ ಹುಡುಗಾಟಿಕೆಗೆ ಸಾಮಾನ್ಯ ಜನರೂ ಕೂಡಾ ಅವರೊಂದಿಗೆ ಕೈ ಜೋಡಿಸಿ ರಸ್ತೆಗಿಳಿದು ಕನ್ನಡ ಮತ್ತು ಮರಾಠಿ ಭಾಷೆಯ ಮತ್ತು ಆಯಾ ಭಾಷಿಕರ ವಿರುದ್ಧ ಹರಿಹಾಯುತ್ತಿದ್ದಾರೆ. ತಮ್ಮ ಭಾಷೆಯ ಅಭಿಮಾನದ ಹುಚ್ಚು ಅವರ ಮೈ ಮನಗಳಿಗಾವರಿಸಿ ಸುತ್ತಮುತ್ತಣದಲ್ಲೇನು ನಡೆಯುತ್ತಿದೆ ಮತ್ತು ಏನು ಮಾಡಬೇಕೆಂಬ ಅರಿವೂ ಇಲ್ಲದೇ ಆದರ್ಶವನ್ನೇ ಮೈವೆತ್ತಿ ಬದುಕಿದ ವ್ಯಕ್ತಿಗಳ ಮೂರ್ತಿಗಳನ್ನು ಭಗ್ನಮಾಡುತ್ತಿರುವುದನ್ನು ನೋಡಿದರೆ ಅವರು ಮಾನಸಿಕ ರೋಗಪೀಡೆಗೆ ಒಳಗಾಗಿದ್ದಾರೆಂದೇ ಹೇಳಬೇಕು.
ಕನ್ನಡಿಗರು ಅಭಿಮಾನದಿಂದ ಪೂಜಿಸುವ ಸಂಗೊಳ್ಳಿ ರಾಯಣ್ಣನ ಮತ್ತು ರಾಣಿ ಚೆನ್ನಮ್ಮ ಇವರ ಪ್ರತಿಮೆಗಳನ್ನು ಭಗ್ನಗೊಳಿಸಿರುವುದು ಅಂತೆಯೇ ಮರಾಠಿಗರು ಶಿವಾಜಿ ಮಹಾರಾಜರನ್ನು "ಮರಾಠಿ ಅಸ್ಮಿತೆ"ಎಂದು ತಿಳಿದಿರುವ ಶಿವಾಜಿ ಮಹಾರಾಜರ ಮೂರ್ತಿಯನ್ನು ಭಗ್ನಗೊಳಿಸಿರುವುದು ಎರಡೂ ಘಟನೆಗಳು ಖಂಡನೀಯ ಮತ್ತು ಖಂಡನೆ ಮಾಡುವುದು ಪ್ರತೀ ನಾಗರೀಕನ ಕರ್ತವ್ಯವಾಗಿದೆ ಕೂಡಾ.
ಮರಾಠಿಗರು ಅಂದುಕೊಂಡಿರುವಂತೆ ಶಿವಾಜಿ ಮಹಾರಾಜ ಕೇವಲ ಮರಾಠಿ ಅಸ್ಮಿತೆಯಲ್ಲ ಆತ ಹಿಂದೂ ಅಸ್ಮಿತೆ. ಇಡೀ ಹಿಂದೂಸ್ಥಾನವು ಮೊಗಲರ ಆಡಳಿತದಲ್ಲಿ ಹಿಂದೂ ಸಂಸ್ಕೃತಿಯು ನಲುಗಿಹೋಗುತ್ತಿರುವಾಗ ಅಂಥ ಹೈಂದವೀ ಸಂಸ್ಕೃತಿಯನ್ನು ಪುನರ್ ಪ್ರತಿಷ್ಠಾಪಿಸಿ ಮೊಗಲ ದುರಾಡಳಿತವನ್ನು ಮೊಟಕುಗೊಳಿಸಿದ ರಾಷ್ಟ್ರಪುರುಷ ಶಿವಾಜಿ. ಶಿವಾಜಿ ಮಹಾರಾಜರ ಆಡಳಿತದಲ್ಲಿ ಭಾಷಾ ಸಾಮರಸ್ಯತೆ ಮತ್ತು ಧರ್ಮ ಸಾಮರಸ್ಯತೆಯನ್ನು ಕಾಣಬಹುದು.ಇಂಥ ರಾಷ್ಟ್ರಪುರುಷನನ್ನು "ಮರಾಠಿಗ" ಮಾತ್ರ ಎಂದು ತಿಳಿಯುವುದು ಭೌದ್ಧಿಕತೆಯ ಹೀನತನವೆಂದು ಭಾವಿಸಬೇಕು. ಶಿವಾಜಿಯ ವ್ಯಕ್ತಿತ್ವ ಮರಾಠಿಗರಿಗೆ ಮಾತ್ರ ಮೀಸಲಲ್ಲ ಎಲ್ಲ ಭಾರತೀಯರಿಗೆ ಅದರಲ್ಲೂ ಎಲ್ಲ ಹಿಂದುಗಳಿಗೆ ಆದರ್ಶ ಮತ್ತು ಭಾಷೆಯ ಆಧಾರ ತೆಗೆದುಕೊಂಡರೆ ಮರಾಠಿ ಮತ್ತು ಕನ್ನಡಿಗ ಇವರಿಗೂ ಆದರ್ಶ. ಗೌಳೀ ಜನಾಂಗದ ಆ ವ್ಯಕ್ತಿ ತನ್ನ ಶೌರ್ಯದಿಂದ ರಾಷ್ಟ್ರವನ್ನು ರಕ್ಷಿಸಿದ ಮತ್ತು ಹಿಂದು ಸಂಸ್ಕೃತಿಯನ್ನು ಕಾಪಾಡಿದ್ದಲ್ಲದೇ ಭಾಷಾ ಸಾಮರಸ್ಯ ಮೆರೆದಿದ್ದ. ಆತನ ಸೈನ್ಯದಲ್ಲಿ ಕೇವಲ ಮರಾಠಿಗರಿರಲಿಲ್ಲ ಕನ್ನಡಿಗರೂ ಇದ್ದರು ಅದರಲ್ಲೂ ಗೌಳೀ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದರು ಎಂಬುದನ್ನು ಮನಗಾಣಬೇಕು. ಆದಕಾರಣ ಕನ್ನಡಿಗರಿಗೆ ಗೌರವವನ್ನು ಕೊಡದಿರುವುದು ಮತ್ತು ಕನ್ನಡ ಅಸ್ಮಿತೆಯನ್ನು ಹಾಳುಮಾಡುವುದು ಶಿವಾಜಿ ಮಹಾರಾಜರಿಗೆ ಅಗೌರವ ತೋರಿದಂತೆಯೇ ಸರಿ.ಯಾರು ಶಿವಾಜಿಯನ್ನು ಅಭಿಮಾನದಿಂದ ಕಾಣುತ್ತಾರೋ ಅವರು ಈ ದೇಶದ ಪ್ರತೀ ಜನರ ಮತ್ತು ಇಲ್ಲಿನ ಸಂಸ್ಕೃತಿಯನ್ನು ಅಭಿಮಾನದಿಂದ ಕಾಣಬೇಕು ಮತ್ತು ಗೌರವಿಸಲೇಬೇಕು ಇಲ್ಲದಿದ್ದರೆ ಶಿವಾಜಿಗೆ ದ್ರೋಹ ಬಗೆದಂತೆಯೇ ಸರಿ ಎಂಬುದನ್ನು ಮರಾಠಿಗರು ತಿಳಿದು ಕನ್ನಡ ಮರಾಠಿಗರ ನಡುವೆ ಸಾಮರಸ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವೆಂದು ಅದರಂತೆ ನಡೆದುಕೊಳ್ಳಬೇಕು.ಶಿವಾಜಿಯ ಶ್ರೇಷ್ಠತೆಯು ಪ್ರತೀ ಕನ್ನಡಿಗ ಮತ್ತು ಮರಾಠಿಗರ ಮನದಲ್ಲಿ ಅಚ್ಚಳಿಯದೇ ಉಳಿಯಬೇಕು. ಶಿವಾಜಿ ಎಂದರೆ ಮರಾಠಿ ಎಂಬುದನ್ನು ಮನದಿಂದ ತೆಗೆದು ರಾಷ್ಟ್ರ ಪುರುಷ ಎಂದರಿಯಬೇಕು.
ಯಾರ ಕುರಿತಾಗಲೀ ಅವರ ಮೇಲಿನ ಅಭಿಮಾನವು ಹೃದಯದಲ್ಲಿ ಹೂವಿನಂತೆ ಅರಳಬೇಕೇ ಹೊರತು ದುರಭಿಮಾನ ಬೆಳೆದು ದ್ವೇಷದ ಕಿಡಿಯಾಗಿ ಸಮಾಜಕ್ಕೆ ಬೆಂಕಿಯನ್ನು ಹೊತ್ತಿಸಬಾರದು. ಸಂಗೊಳ್ಳಿರಾಯಣ್ಣ ಮತ್ತು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯವನ್ನು ಪಡೆಯಲು ಹವಣಿಸಿದ್ದ ಸ್ವಾತಂತ್ರ್ಯ ಹೋರಾಟಗಾರರು.ಅವರೆಂದೂ ತಮ್ಮ ಶೌರ್ಯವನ್ನು ಸಾಮಾನ್ಯ ಮರಾಠಿಗರ ಮೇಲೆ ತೋರಿಸಿ ಸಂಪತ್ತನ್ನು ಹೊಡೆಯಲಿಲ್ಲ ದೇಶದ ಆಸ್ತಿಪಾಸ್ತಿಗಳನ್ನು ನಾಶ ಮಾಡಲಿಲ್ಲ. ಅವರ ಸಂಸ್ಥಾನದ ಮರಾಠಿಗರನ್ನು ನಮ್ಮವರಲ್ಲ ಎಂದು ಅವರ ಮೇಲೆ ಯುದ್ಧವನ್ನು ಮಾಡಿರಲಿಲ್ಲ ಅಥವಾ ಎಂದೂ ನಿಕೃಷ್ಟರೆಂದು ತಿಳಿದಿರಲಿಲ್ಲ.
ಚೆನ್ನಮ್ಮನ ಕಾಲದಲ್ಲಿ ಕನ್ನಡಿಗರಿಗೆ ಎಷ್ಟು ಗೌರವವಿತ್ತೋ ಅಷ್ಟೇ ಗೌರವ ಮರಾಠಿ ಜನಗಳಿಗೂ ಇತ್ತು. ಇದನ್ನು ಅರಿತರೆ ಮರಾಠಿಗರು ಎಂದೂ ವಿಗ್ರಹ ಭಂಜಕರಾಗುವುದಿಲ್ಲ. ಅಂತೆಯೇ ಶಿವಾಜಿ ಮಹಾರಾಜರು ಎಂದೂ ಕೂಡಾ ನಾನು ಮರಾಠಿ ನೀನು ಕನ್ನಡಿಗ ಎಂದು ಭಾವಿಸಿರಲೇ ಇಲ್ಲ. ಇದನ್ನು ತಿಳಿದ ಮರಾಠಿಗ ಎಂದೂ ಮಾರಾಮಾರಿ ಕೆಲಸಕ್ಕೆ ಕೈ ಹಾಕುವುದಿಲ್ಲ. ಎಲ್ಲಕ್ಕಿಂತ ಮೊದಲು ಶಿವಾಜಿ ಹಾಗೂ ಚೆನ್ನಮ್ಮರ ಕಾಲದಲ್ಲಿ ಭಾಷಾವಾರು ರಾಜ್ಯಗಳೇ ಇರಲಿಲ್ಲ, ಮತ್ತು ಆಗಿನ ರಾಜರುಗಳು ಯಾವ ಪ್ರಜೇಯೇ ಇರಲಿ ಅವರನ್ನು ಮಕ್ಕಳಂತೆ ಪೋಷಿಸಿಸುತಿದ್ದರು. ಪ್ರಜೆಗಳೂ ಕೂಡಾ ಎಲ್ಲರೊಂದಿಗೆ ಸಹಕಾರತೋರುತ್ತಾ ಸಹಜಜೀವನ ಮಾಡುತ್ತಿದ್ದರೆಂದು ಇತಿಹಾಸ ಹೇಳುತ್ತದೆ. ಹೀಗಿರುವಾಗ ಚೆನ್ನಮ್ಮ ಮರಾಠಿಗರನ್ನು ಶಿವಾಜಿ ಕನ್ನಡಿಗರನ್ನು ದ್ವೇಷಿಸಲು ಸಾಧ್ಯವೇ ಇರಲಿಲ್ಲ. ಹಾಗಿದ್ದ ಮೇಲೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ವಿಗ್ರಹವನ್ನು ಮರಾಠಿಗರು,(?)ಯಾಕೆ ಹಾಳುಮಾಡಬೇಕು...!? ಇದು ಖಂಡಿತಾ ಈ ಮಣ್ಣಿನ ಸಂಸ್ಕೃತಿಗೆ ದ್ರೋಹ ಬಗೆದಂತೆಯೇ ಸರಿ.
ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜ ಇವರು ಈ ಭಾಗದ ರಾಷ್ಟ್ರವಾದಿಗಳು. ಸ್ವಾತಂತ್ರ್ಯ ಹೋರಾಟಗಾರರು. ಅವರು ಈ ಬೆಳಗಾವಿಯ ಸುತ್ತ ಮುತ್ತಲಿನ ಭಾಗದ ಮರಾಠಿಗರಿಗೆ ಮತ್ತು ಕನ್ನಡಿಗರಿಗೆ ಮಾತ್ರ ಆದರ್ಶರಲ್ಲ ಇಡೀ ದೇಶಕ್ಕೇ ಆದರ್ಶ.ಅವರೆಲ್ಲಾ ಮಹಾನ್ ದೇಶಭಕ್ತರು. ಅವರನ್ನು ಯಾರು ದ್ವೇಷಿಸುತ್ತಾರೋ ಅವರು ಈ ದೇಶವನ್ನೂ ದ್ವೇಷಿಸುತ್ತಾರೆ, ಯಾರು ಈ ರಾಷ್ಟ್ರವನ್ನು ಪ್ರೀತಿಸುತ್ತಾರೋ ಅಂಥವರು ಎಂದೆಂದೂ ರಾಷ್ಟ್ರಪುರುಷರನ್ನು ಅವಮಾನಿಸುವುದಾಗಲೀ ಅಥವಾ ಅವರ ಮೂರ್ತಿಗಳನ್ನು ಭಗ್ನಗೊಳಿಸುವುದಾಗಲಿ, ಈ ದೇಶದ ಸಾರ್ವಜನಿಕ ಸ್ಥಳಗಳನ್ನು ಆಸ್ತಿಪಾಸ್ತಿಗಳನ್ನು, ಸಾರಿಗೆ ಬಸ್ಸುಗಳನ್ನು ನಾಶ ಮಾಡುವುದಿಲ್ಲ. ಹಾಗೇನಾದರೂ ಅಂಥ ಕೆಲಸವನ್ನು ಮಾಡಿದ್ದೇ ಆದಲ್ಲಿ ಅಂಥವರಿಗೆ ಕ್ಷಮೆಯೇ ಇಲ್ಲ ಖಂಡಿತವಾಗಿಯೂ ಶಿಕ್ಷೆಗೆ ಅರ್ಹರಾಗಿರುತ್ತಾರೆ ಮತ್ತು ಅವರನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು ಈ ಸಂದರ್ಭದಲ್ಲಿ ಬಂಧಿಸುವುದಾದರೆ ಎರಡೂ ಕಡೆಯವರನ್ನು ಬಂಧಿಸಬೇಕು ಎಂಬುದೂ ಕೂಡಾ ಒಕ್ಕೊರಲಿನ ದನಿಯಾಗಿದೆ.ರಾಜಕೀಯ ಲಾಭಕ್ಕಾಗಿ ನಡೆಯುವ ಈ ದೊಂಬರಾಟಕ್ಕೆ ಸಾಮಾನ್ಯ ಜನರು ಬಲಿಯಾಗುತ್ತಿರುವುದು ಖೇದಕರ ವಿಷವಾಗಿದ್ದರೂ ಹುಚ್ಚು ಅಭಿಮಾನದಿಂದ ಮನದೊಳಗೆ ಹುದುಗಿರುವ "ಉಚ್ಛತಮ ಅಭಿಮಾನ"ವು ಮರೆಯಾಗುತ್ತಿದೆ. ಪರಿಣಾಮ ರಾಷ್ಟ್ರಾಭಿಮಾನ ಕೇವಲ ಉತ್ಸವಗಳಲ್ಲಿ ತೋರಿ್ಡಕೆಯ ವೇಷ ಎನ್ನಿಸುತ್ತದೆ.
ಭಾಷೆಯು ಸಂವಹನ ಸಾಧನ.ಅದರೊಟ್ಟಿಗೆ ಈ ಸಂಸ್ಕೃತಿಯು ಮೇಳೈಸಿಕೊಂಡಿದೆ. ಭಾಷೆಯ ಅಧಾರದಲ್ಲಿ ದ್ವೇಷ ಸಾಧಿಸುವುದು ಆ ಮನುಜನ ಬುದ್ಧಿಮತ್ತೆಯ ಗುಣಮಟ್ಟ ಅತ್ಯಂತ ಕೆಳಮಟ್ಟದಲ್ಲಿ ಇರುತ್ತದೆ ಅಂಥವರು ಮಾತ್ರ ಇಂಥ ನೀಚ ಕೆಲಸಕ್ಕೆ ಕೈ ಹಾಕುತ್ತಾರೆಯೇ ಹೊರತು ಪ್ರಜ್ಞಾವಂತರಾರೂ ಇಂತಲ್ಲಿ ಕಾಲಿಡುವುದಿಲ್ಲ. ಹಾಗಾಗಿ ಪ್ರಜ್ಞಾವಂತ ಜನಗಳು ಇಂದು ಈ ಕುರಿತು ಜಾಗೃತರಾಗಬೇಕಿದೆ ಮತ್ತು ಜನಗಳಿಗೂ ಕೂಡಾ ಇತಿಹಾಸದ ಕುರಿತು ಜಾಗೃತರನ್ನಾಗಿಸಬೇಕಿದೆ. ಹೆಚ್ಚಿನದಾಗಿ ಸಂಗೊಳ್ಳಿರಾಯಣ್ಣನ ಮತ್ತು ರಾಣಿ ಚೆನ್ನಮ್ಮರನ್ನು ಕುರಿತ ಇತಿಹಾಸವನ್ನು ಮರಾಠಿ ಭಾಷೆಯಲ್ಲಿ ಮತ್ತು ಅಲ್ಲಿನ ಶಿಕ್ಷಣ ಇಲಾಖೆಯು ಪಠ್ಯದಲ್ಲಿ ಸೇರಿಸಬೇಕಾಗಿದೆ. ಆ ಮೂಲಕ ಇವರನ್ನು ಓದಿಕೊಂಡಾಗ ಇಂಥ ಪ್ರಭೃತಿಗಳು ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ಆಗ ಭಾಷೆಯ ಅಂಧಾಭಿಮಾನದಿಂದ ರಾಷ್ಟ್ರಾಭಿಮಾನಕ್ಕೆ ಧಕ್ಕೆಯಾಗುವುದು ನಿಲ್ಲುತ್ತದೆ. ಸರ್ಕಾರ ಆದಷ್ಟೂ ಬೇಗ ಈ ನಿಟ್ಟಿನಲ್ಲಿ ಶಾಂತಿ ಸೌಹಾರ್ಧತೆಯನ್ನು ನೆಲೆಗೊಳಿಸಲು ಸೂಕ್ತ ಕ್ರಮವನ್ನು ಜರುಗಿಸಲಿ ಎಂಬುದು ಎಲ್ಲರ ಆಶಯ.
---- ಎಸ್.ಆರ್.ಎನ್.ಮೂರ್ತಿ, ಕೈಗಾ.