ಲೇಖನಗಳು

ಕೂಡಿ ಬಾಳೋಣ, ಕೂಡಿ ಊಣ್ಣೋಣವೆಂಬ ಭಾವೈಕ್ಯತೆ ಮಂತ್ರ ಸಾರುವ ಶಿರೋಳದ ಜಾತ್ರೆ...

ಕೂಡಿ ಬಾಳೋಣ, ಕೂಡಿ ಊಣ್ಣೋಣವೆಂಬ ಭಾವೈಕ್ಯತೆ ಮಂತ್ರ ಸಾರುವ ಶಿರೋಳದ ಜಾತ್ರೆ...

ರೊಟ್ಟಿ ಊಟದ ಉದ್ದೇಶ: ಗದಗದ ಶ್ರೀ ತೋಂಟದಾರ್ಯ ಮಠ ಹಾಗೂ ಇದರ ಶಾಖಾ ಮಠಗಳೆಲ್ಲವೂ ಜನ ಸಂಸೃತಿಯ  ಕೇಂದ್ರಗಳಾಗುವ ನಿಟ್ಟಿನಲ್ಲಿ ಹತ್ತು ಹಲವು - ಜನಪರ-ವೈಚಾರಿಕ, ವಿದಾಯಕ ಕಾರ್ಯಕ್ರಮಗಳ ಮೂಲಕ ನಿಜ ಜಾತ್ರೆಗೆ ಮುನ್ನುಡಿ ಬರೆದಿವೆ. ಅದರಂತೆ ಶಿರೋಳದ ರೊಟ್ಟಿ ಊಟ ಜಾತ್ರೆ. ಸರ್ವಧರ್ಮಿಯರನ್ನು  ಒಂದೇ ರೀತಿ ಕಾಣುವದು ಬಡವ-ಶ್ರೀಮಂತ ಎಂಬ ಭೇದ ಭಾವ ಏಣಿಸದೆ. ಎಲ್ಲರೂ ಅಣ್ಣ-ತಮ್ಮ ಅಕ್ಕ-ತಂಗಿಯರೆಂಬ ಭಾವನೆ ತಾಳಿ ಶ್ರೀಮಠದಲ್ಲಿ ಸೇರಿ ಸರ್ವಭಕ್ತ ಸಮೂಹ ನೀಡಿದ ಕಾಳು ಕಾಯಿಪಲ್ಲೆ ದಾನವಾಗಿ ಬಂದ ಅನ್ನದ ಉಂಡಿ, ಕರಿಂಡಿ ಸೇರಿಸಿ ಊಟ ಮಾಡುವ  ರೊಟ್ಟಿ ಜಾತ್ರೆ- ವರ್ಗ-ವರ್ಣ ವ್ಯವಸ್ಥೆಯಾದ ಬಹುದೂರ ನಿಲ್ಲುವಂತೆ ಮಾಡಿದ ಕೀರ್ತಿಯು  ಸರ್ವಧರ್ಮ ಸಮನ್ವಯದ- ಶಾಂತಿಯ ತೋಟ ಸರ್ವ ಜನರನ್ನು ಸೆಳೆಯುವ ಶಿರೋಳದ ಶ್ರೀ ತೋಂಟದಾರ್ಯ ಮಠಕ್ಕೆ ಸಲ್ಲುತ್ತದೆ. ಶ್ರೀ ಮಠವು ಐತಿಹಾಸಿಕದ ಹಿನ್ನಲೆಯನ್ನೊಳಗೊಂಡಿದೆ. ನಮ್ಮೂರ ರೊಟ್ಟ ಊಟದ ಜಾತ್ರೆಯು ಇದೇ ತಿಂಗಳು 11, 12, 13 ರಂದು ಜರುಗುವುದು. ತಾವು ಈ ಜಾತ್ರೆಗೆ ಬಂದು ರೊಟ್ಟಿ ಊಟದ ಸವಿಯನ್ನು ಸವಿಯಬಹುದು.  

ಉತ್ತರ ಕರ್ನಾಟಕದಲ್ಲಿ ಅಪರೂಪದ ರೊಟ್ಟಿ ಊಟದ ಜಾತ್ರೆಯೆಂದೆ ಜನಮನ್ನಣೆ ಗಳಿಸಿ ವರ್ಷದಿಂದ ವರ್ಷಕ್ಕೆ ಜಾತಿ ಮತಗಳನ್ನು ಮೀರಿನಿಂತು ಭಾವೈಕ್ಯತೆಯ ಮಂತ್ರವನ್ನು - ಸಾರಿ ನೆತ್ತಿ-ಹೊಟ್ಟೆಯನ್ನು ತುಂಬಿಸುತ್ತಿರುವ ಶ್ರೇಯಸ್ಸು ಗದಗ ಜಿಲ್ಲೆಯ  ನರಗುಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ತೊಂಟದಾರ್ಯ ಮಠಕ್ಕೆ ಸಲ್ಲುತ್ತದೆ.  

ಜಾತ್ರೆಯಂದರೆ- ಮೋಜು- ಮಜಾ- ಎಂದೆ ತಿಳಿಯುವ ಇಂದಿನ ಯುವ ಸಮುದಾಯಕ್ಕೆ ಸಾಂಸೃತಿಕ ಸೊಗಡನ್ನು ಸ್ಪರ್ಶಿಸುವ ಈ ಜಾತ್ರೆಯು ಹಿಂದಿನಿಂದಲೂ ಸಾಂಸೃತಿಕ ಸಾಹಿತ್ಯಕ ಜಾನಪದ ಹೀಗೆ ಪ್ರತಿಯೊಂದು ರಂಗಗಳ ಕಲಾ ಪ್ರದರ್ಶನದ ಜೊತೆಗೆ ಅನೇಕ- ಹಿರಿಯ-ಕಿರಿಯ ಸಾಹಿತಿಗಳನ್ನು, ಶಿಕ್ಷಣ ತಜ್ಞರನ್ನು - ಪ್ರತಿವರ್ಷ ಜಾತ್ರೆಯ ದಿನಗಳಲ್ಲಿ ಕರೆಸಿ ಅವರಿಂದ ಅನೇಕ ಗೋಷ್ಠಿಗಳನ್ನು ನೆರವೇರಿಸಿದೆ. ಕೃಷಿ ಆರೋಗ್ಯ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ಇನ್ನು ಹಲವಾರು ಪ್ರಕಾರದ ಪ್ರದರ್ಶನ ಪ್ರಾತಿಕ್ಷೆತೆಗಳನ್ನು ಏರಿ​‍್ಡಸಿ ಸಾರ್ವಜನಿಕರಿಗೆ ಉಪಯೋಗವನ್ನು ಒದಗಿಸಿದ್ದು ಈ ಜಾತ್ರೆಯ ವಿಶೇಷತೆ.  

ಶಿರೋಳದ ಜಾತ್ರೆಯ ಎರಡನೆಯ ದಿನದಂದು ಜರುಗುವ “ರೊಟ್ಟಿ ಉಟದ” ಮಹತ್ವ ವಿಶೇಷ ಗ್ರಾಮದ ಎಲ್ಲಾ ಜಾತಿ ವರ್ಗದವರು ತಮ್ಮ ತಮ್ಮ ಮನೆಗಳಲ್ಲಿ ಮಾಡಿದ ಜೋಳದ ರೊಟ್ಟಿಗಳನ್ನು ಶ್ರೀಮಠಕ್ಕೆ ತಂದುಕೊಡುತ್ತಾರೆ. ಹೀಗೆ ಶಿರೋಳ ಸುತ್ತ-ಮುತ್ತಲಿನ ಗ್ರಾಮದವರು. ರೊಟ್ಟಿ ಊಟಕ್ಕಾಗಿ ಮುಂಚಿತವಾಗಿಯೇ ರೊಟ್ಟಿಗಳನ್ನು ತಂದು ನೀಡುವರು. ಹೀಗೆ ಸಂಗ್ರಹವಾದ ಎಲ್ಲ ರೊಟ್ಟಿಗಳನ್ನು ಶ್ರೀಮಠದಲ್ಲಿ ಸಂಗ್ರಹಿಸಿ ಇಡಲಾಗಿರುತ್ತದೆ.   

ರೊಟ್ಟಿಗಳ ಜೊತೆಯಲ್ಲಿ ಗ್ರಾಮದ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ತಮ್ಮ ಹೊಲದಲ್ಲಿ ಬೆಳೆದ ಎಲ್ಲ ತರಹದ ಕಾಯಿಪಲ್ಲೆ, ಕಾಳು ಕಡಿಗಳನ್ನು ದಾನದ ರೂಪದಲ್ಲಿ ತಂದು ಜಾತ್ರಾ ಮಹೋತ್ಸವ ಈ ರೊಟ್ಟಿ ಊಟಕ್ಕಾಗಿ ನೀಡುತ್ತಾರೆ ಹೀಗೆ ಸಂಗ್ರಹವಾದ ರೊಟ್ಟಿಗಳನ್ನು ಮತ್ತು ಎಲ್ಲಾ ತರಕಾರಿ ಕಾಳುಗಳನ್ನು ಸೇರಿಸಿ ಕರಿಂಡಿಯನ್ನು ತಯಾರಿಸಿ ಬಾನ (ಅನ್ನದ) ಉಂಡಿ, ಕರಿಂಡಿಯ ಜೊತೆಗೆ ಜಾತ್ರೆಗೆ ಆಗಮಿಸಿದ ಸಾವಿರಾರು ಜನ ಭಕ್ತರಿಗೆ ಊಟವನ್ನು ಬಡಿಸುತ್ತಾರೆ. ಪ್ರತಿವರ್ಷ ಜನೇವರಿ ಫೆಬ್ರವರಿ ಜರುಗುವ ಈ ಜಾತ್ರೆಯಲ್ಲಿನ ಈ ರೊಟ್ಟಿ ಊಟದ ಪದ್ದತಿಯು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಸರ್ವಧರ್ಮದವರನ್ನು ಸಮಾನ ರೀತಿಯಲ್ಲಿ ಕಾಣುವ ದೃಷ್ಟಿಯಿಂದ ಪ್ರಾರಂಭಿಸಲಾದ ಈ ರೊಟ್ಟಿ ಊಟವು ಎಲ್ಲಾ ಜಾತಿಯ ಜನರನ್ನು ಒಂದು ಗೂಡಿಸುವ ಭಾವೈಕ್ಯತೆಯ ಸಂಗಮವಾಗಿದೆ.  

ಐತಿಹಾಸಿಕ ಹಿನ್ನಲೆಯನ್ನೂಳಗೊಂಡ ಶಿರೋಳ ಗ್ರಾಮದ ಶ್ರೀ ತೊಂಟದಾರ್ಯ ಮಠವು ಶೈಕ್ಷಣಿಕ, ಧಾರ್ಮಿಕ ಸಾಮಾಜಿಕ ಹೀಗೆ ಪ್ರತಿಯೊಂದು ರಂಗದಲ್ಲಿ ಮುಂಚೊಣೆಯಲ್ಲಿದ್ದು- ಮಠದ- ಉಸ್ತುವಾರಿಯನ್ನು ಶ್ರೀ ಮ.ನಿ.ಪ್ರ.ಸ್ವ. ಪೂಜ್ಯ ಗುರುಬಸವ ಮಹಾಸ್ವಾಮಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶ್ರೀ ಗುರುಬಸವ ಪ್ರೌಢ ಶಾಲೆ ಶ್ರೀ ಮಾದಾರಚನ್ನಯ್ಯ ಕೈಗಾರಿಕಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದ್ದು ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿ/ನಿಯರು ಖಾಸಗಿ ಸರಕಾರಿ ಹೀಗೆ ಅನೇಕ ಕಡೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ.  

ಶಿರೋಳದ ಶ್ರೀ ತೊಂಟದಾರ್ಯ ಮಠದ ಪ್ರತಿವರ್ಷದ ಜಾತ್ರಾ ಮಹೊತ್ಸವದಲ್ಲಿ ಅನೇಕ ಹಿರಿಯಕಿರಿಯ ಸಾಹಿತಿಗಳು ಗಣ್ಯರು ಹೆಸರಾಂತ ಶಿಕ್ಷಣ ತಜ್ಞರು ಆಗಮಿಸಿ ಜಾತ್ರೆಯನ್ನು ಕಂಡು ಮೆಚ್ಚುಗೆಯನ್ನು ಸೂಚಿಸಿದ್ದಾರೆ ಹೀಗೆ ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಿರುವ ಶಿರೋಳ ಗ್ರಾಮದ ಶ್ರೀ ತೊಂಟದಾರ್ಯ ಮಠದ ಜಾತ್ರೆಯು ಮನೆ ಮಾತಾಗಿದೆ. ಇಂಥಹ ಅಪರೂಪದ ಸರ್ವಧರ್ಮ ಸಮನ್ವಯದ ಭಾವೈಕ್ಯತೆಯ ಸಂದೇಶ ಸಾರುವ ಜಾತ್ರೆಗೆ ನೀವು ಒಮ್ಮೆ ಬಂದುರೊಟ್ಟಿ ಊಟದ ರುಚಿ ಸವಿಯಿರಿ ಇದೆ ತಿಂಗಳು ಜನವರಿ 11, 12, 13 ರಂದು ನಮ್ಮೂರ ಜಾತ್ರೆಯು ಅರ್ಥಪೂರ್ಣವಾಗಿ ಜರುಗಲಿದೆ. 

- ಚಿದಂಬರ ಪಿ. ನಿಂಬರಗಿ  

ಶಿರೋಳ, ಧಾರವಾಡ 

- * * * - 


ಸುದ್ದಿ ಓದಿ