ಸಾಂಕ್ರಮಿಕ ರೋಗ ಸಮುದಾಯದ ಎಲ್ಲ ವ್ಯವಸ್ಥೆಯನ್ನು ಏರುಪೇರು ಮಾಡಿದೆ: ವಿಜಯಲಕ್ಷ್ಮೀ
ಬಳ್ಳಾರಿ,ಜು.14: ಕೋವಿಡ್-19 ಸಾಂಕ್ರಮಿಕ ರೋಗ ಸಮುದಾಯದ ಎಲ್ಲ ವ್ಯವಸ್ಥೆಯನ್ನು ಏರುಪೇರು ಮಾಡಿದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ವ್ಯವಸ್ಥಾಪಕಿ ವಿಜಯಲಕ್ಷ್ಮೀ ಅವರು ಹೇಳಿದ್ದಾರೆ.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ 2020ನೇ ಸಾಲಿನ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಬೇವಿನಹಳ್ಳಿಯಲ್ಲಿ ಆಯೋಜಿಸಿದ್ದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ದಿನಾಚರಣೆಯ ಮುಖ್ಯ ಗುರಿ ಜನಸಂಖ್ಯೆ ನಿಯಂತ್ರಣವೇ ಆಗಿದೆ. ಆದರೆ ಇಂದು ಕರೋನಾ ವೈರಾಣುವಿನಿಂದ ಸಮುದಾಯದ ಎಲ್ಲಾ ವ್ಯವಸ್ಥೆಯನ್ನು ಏರುಪೇರು ಆಗಿದೆ. ಮಹಿಳೆಯರಿಗೆ ಗರ್ಭನಿರೋಧಕಗಳ ನಿರಂತರ ಪೂರೈಕೆಯ ಕೊರತೆ;ಈ ಸಮಸ್ಯೆಗೆ ಲಾಕ್ಡೌನ್ ಕಾರಣವಾಗಿದೆ.ಯು.ಎನ್.ಎಫ್.ಪಿ.ಎ ಸಂಸ್ಥೆ ನಡೆಸಿದ ಸಂಶೋಧನೆಯ ವರದಿಯಲ್ಲಿ ಈ ಸಮಯದಲ್ಲಿ ಲಿಂಗಧಾರಿತ ಹಿಂಸೆಗಳು, ಮತ್ತು ಬಾಲ್ಯ ವಿವಾಹಗಳು ಕೂಡ ಹೆಚ್ಚಾಗಿರುವ ಸಾಧ್ಯತೆಗಳು ಬಹಳ ಇವೆ ಎಂದರು.
ಕುಟುಂಬ ಯೋಜನೆ, ಸುರಕ್ಷಿತ ಗರ್ಭಪಾತ, ಹದಿಹರೆಯದವರಿಗೆ ಸಂಬಂಧಿಸಿದ ಸೇವೆಗಳು, ಲಿಂಗ ಸಮಾನತೆ, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಸೇವೆಗಳು ಸಮರ್ಪಕವಾಗಿ ದೊರೆಯುವಂತೆ ಎಫ್.ಪಿ.ಎ.ಐ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಸ್ವ-ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.