ಮಹಾಕಾವ್ಯಗಳು ಬದುಕಿನ ಸಂವಿಧಾನ: ಡಾ. ರಮೇಶ
ಲೋಕದರ್ಶನ ವರದಿ
ಬಳ್ಳಾರಿ 20: ರಾಮಾಯಣವು ಮನುಷ್ಯನ ಸಂಬಂಧಗಳ ಸಂವಿಧಾನವಾಗಿದೆ. ಬದುಕಿನ ಸತ್ಯವನ್ನು ಹೇಳುವ ಕೆಲಸವನ್ನು ಈ ಮಹಾಕಾವ್ಯ ಮಾಡುತ್ತವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಸ.ಚಿ. ರಮೇಶ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಕನ್ನಡ ಕಾವ್ಯಗಳ ಮೇಲೆ ವಾಲ್ಮೀಕಿ ರಾಮಾಯಣದ ಪ್ರಭಾವ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ ಕುಲಪತಿ ಡಾ. ಸ.ಚಿ ರಮೇಶ ಅವರು ಮಾತನಾಡಿ ಈ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೇವಲ ಪುಷ್ಪಾರ್ಚನೆ ಮಾಡಿ ಆಚರಿಸುವುದಲ್ಲದೆ ವಾಲ್ಮೀಕಿಯವರ ರಾಮಾಯಣದ ವಿಚಾರಗಳನ್ನು, ರಾಮಾಯಣದ ಬಗೆಗಿನ ಚಿಂತನೆಗಳನ್ನು ಚರ್ಚೆ ಮಾಡುವ ವಿಚಾರ ಗೋಷ್ಠಿ ನಡೆಯಬೇಕು. ಮನುಷ್ಯನಿಗೆ ಶಿಕ್ಷಣವನ್ನು ಕೊಡಿ. ಆಗ ಅವನಿಗೆ ಬೇಕಾದುದನ್ನು ಅವನು ಹುಡುಕಿ ಪಡೆಯುತ್ತಾನೆ. ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಅದಕ್ಕೆ ನಿದರ್ಶನವೆಂದರೆ ರಾಮಾಯಣದಲ್ಲಿ ಹನುಮಂತ ಹಾರಿದ್ದು. ಪರಿವರ್ತನೆಗಳ ಪರಿವರ್ತನೆ ಮತ್ತು ಬದಲಾವಣೆಗಳ ಬದಲಾವಣೆ ಒಂದು ಜೈನ ಕವಿಗಳ ಬಹುಮುಖ್ಯವಾದ ವಿಚಾರ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುವುದನ್ನು ನಮ್ಮ ಜೈನ ಕವಿಗಳು ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದ ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ.ಅಮರೇಶ ಯತಗಲ್ ಅವರು ಮಾತನಾಡಿ ವಾಲ್ಮೀಕಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಮಿನುಗುವ ಮಹರ್ಷಿ. ರಾಮಾಯಣವು ಕೌಟುಂಬಿಕ ವಿಷಯ, ಸಂಸ್ಕೃತಿ ಅಷ್ಟೇ ಅಲ್ಲದೆ ಅದು ಇಡೀ ಭಾರತದ ಭೌಗೋಳಿಕ ಹಿನ್ನೆಲೆಯ ಬಗ್ಗೆ ತಿಳಿಸಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ರಾಮಾಯಣ ಹುಟ್ಟಿಕೊಂಡಿದೆ.
ಸಂಶೋಧನಾ ವಿದ್ಯಾರ್ಥಿ ಸತೀಶ ಬಿ. ನಿರೂಪಿಸಿದರು ಹಾಗೂ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಡಾ.ಎ.ವೆಂಕಟೇಶ, ಉಪಕುಲಸಚಿವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.