ಭಕ್ತಿ ಭಂಡಾರದಲ್ಲಿ ಮಿಂದೆದ್ದ ಜನ ಸಾಗರ
ಚಡಚಣ03: ಸಮೀಪದ ಗಡಿನಾಡಿನ ಶಿರಾಡೋಣ ಗ್ರಾಮವು ಹಾಲುಮತ ಸುಕ್ಷೇತ್ರವೆಂದು ಪ್ರಸಿದ್ಧವಾಗಿದ್ದು, ಪ್ರತಿವರ್ಷ ದೀಪಾವಳಿಯಂದ ಜಾತ್ರೆಯು ಭೇಟಿ ಕಾರ್ಯಕ್ರಮವು ಜರುಗುವುದು. ಬೀರಲಿಂಗೇಶ್ವರನ ಮೂಲ ಸ್ಥಾನವಾದ ಶಿರಾಡೋಣದಲ್ಲಿ ಬೀರಲಿಂಗೇಶ್ವರ ಮತ್ತು ಶೀಲವಂತಿ ಹಾಗೂ ಹುಲಜಂತಿಯ ಮಾಳಿಂಗರಾಯ ದೇವರ ಮತತು ಹುನ್ನೂರ ಬೀರಣ್ಣದೇವರ ಭೇಟಿ ಕಾರ್ಯಕ್ರಮವು ಬುಧುವಾರದಂದು ಜರುಗಿತು.
ಬುಧುವಾರದ ನಸುಕಿನ ಜಾವ 5 ಗಂಟೆಗೆ ಬೀರಲಿಂಗೇಶ್ವರ ಹಾಗೂ ಶೀಲದೇವಿ ದೇವರುಗಳಿಗೆ ಪೂಜಾರಿಯವರಿಂದ ಮಹಾಪೂಜೆ ಜರುಗಿತು. ನಂತರ ಭಕ್ತರಿಂದ ನೈವೇದ್ಯ ಕಾರ್ಯಕ್ರಮ ಜರುಗಿತು. ಬೆಳಗ್ಗೆ 10 ಗಂಟೆಗೆ ‘ಜಂಗಿ ನಿಕಾಲಿ’ ಕುಸ್ತಿಗಳು ಜರುಗಿದವು. ಸ್ಥಳೀಯ ಕಲಾವಿದರಿಂದ ಡೊಳ್ಳಿನ ವಾಲಗ, ಕೈಪಟ್ಟು ಮತ್ತು ಡೊಳ್ಳಿನ ಹಾಡುಗಳು ಜರುಗಿದವು. ಸತತ ಮೂರು ದಿನಗಳಿಂದ ಜಾತ್ರೆಗೆ ಬರುವ ಭಕ್ತರಿಗೆ ಅನ್ನಸಂತರೆ್ಣ ಕಾರ್ಯಕ್ರಮವು ನೆರವೇರಿಸಲಾಗಿತ್ತು.
ಸಾಯಂಕಾಲ 5 ಗಂಟೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿಯು ಮೆರವಣಿಗೆಯೊಂದಿಗೆ ಬೀರಲಿಂಗೇಶ್ವರ, ಶೀಲವಂತಿದೇವಿ, ಹುಲಜಂತಿ ಮಾಳಿಂಗರಾಯ, ಹುನ್ನೂರಿನ ಬೀರಣ್ಣ ದೇವರ ಪಲ್ಲಕ್ಕಿಗಳ ಭವ್ಯ ಭಂಡಾರದೊಂದಿಗೆ ಭೇಟಿ ಕಾರ್ಯಕ್ರಮ ಜರುಗಿತು. ಈ ವೇಳೆಯಲ್ಲಿ ಭಕ್ತಾದಿಗಳು ಭಂಡಾರ, ಉಣ್ಣೆ, ಉತ್ತತ್ತಿ ಹಾರಿಸಿ ತಮ್ಮ ಹರಕೆ ತೀರಿಸಿದರು. ಭೇಟಿಯ ನಂತರ ನುಡಿಮುತ್ತುಗಳು ಜರುಗಿದವು. ಇದನ್ನು ನೋಡಲು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಸಹಸ್ರಾರು ಭಕ್ತರಿದ್ದರು.
ಸಂಜೆ 9:30 ಗಂಟೆಗೆ ಶಿರಾಡೋಣ ಗ್ರಾಮದ ಹವ್ಯಾಸಿ ಕಲಾ ಬಳಗದವರಿಂದ ‘ಗರತಿಗೆ ಬಂದ ಅಗ್ನಿ ಪರೀಕ್ಷೆ’ ಅರ್ಥಾತ್ ‘ಪಾಪಿಗೇನು ಗೊತ್ತು ಧರ್ಮದ ಬುತ್ತಿ’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.