ಮನರಂಜನೆ

ಪುನೀತ್ ದರ್ಶನಕ್ಕೆ ಬರುತ್ತಿರುವ ಜನ ಸಾಗರ

ಪುನೀತ್ ದರ್ಶನಕ್ಕೆ ಬರುತ್ತಿರುವ ಜನ ಸಾಗರ

ಬೆಂಗಳೂರು: ಅಕ್ಟೋಬರ್ 30: ಪವರ್ ಸ್ಟಾರ್ ಪುನೀತ್ ನಿಧನಕ್ಕೆ ಇಡೀ ನಾಡಿಗೆ ನಾಡೇ ಕಂಬನಿ ಮಿಡಿಯುತ್ತಿದೆ. ಬೆಂಗಳೂರು ಮಹಾನಗರದ ಜೊತೆಗೆ ರಾಜ್ಯದ ಇತರೆಡೆಗಳಿಂದಲೂ ಅಂತಿಮ ದರ್ಶನಕ್ಕಾಗಿ ಜನ ಸಾಗರವೇ ಹರಿದು ಬರುತ್ತಿದೆ. ವಿಶೇಷವಾಗಿ ಚಿಕ್ಕಚಿಕ್ಕ ಮಕ್ಕಳು ತಮ್ಮ ಪೋಷಕರೊಂದಿಗೆ ಆಗಮಿಸುತ್ತಿದ್ದಾರೆ.

ನಿನ್ನೆ ರಾತ್ರಿಯಿಂದ ಇದುವರೆಗೂ ಏಳು ಲಕ್ಷಕ್ಕೂ ಹೆಚ್ಚು ಮಂದಿ ಪುನೀತ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಕಂಠೀರವ ಸ್ಟೇಡಿಯಂ ಸುತ್ತಲೂ ಕಿಲೋ ಮೀಟರ್ ಗಳ ತನಕ ಜನ ಕಿಕ್ಕಿರಿದು ನೆರೆದಿದ್ದಾರೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಸಾಲು ವ್ಯವಸ್ಥೆ ಮಾಡಲಾಗಿದೆ. ಬಹಳ ಹೊತ್ತು ಸರದಿಯಲ್ಲಿ ನಿಂತರೂ ಪುನೀತ್ ಅಂತಿಮ ದರ್ಶನ ಪಡೆಯಲೇಬೇಕೆಂಬ ಹಂಬಲ ಅವರಲ್ಲಿ ಮನೆ ಮಾಡಿದೆ. ಮಹಿಳಾ ಅಭಿಮಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಅಭಿಮಾನಿಗಳು ದುಃಖತಪ್ತರಾಗಿದ್ದಾರೆ. ಹಲವರ ಕಣ್ಣಾಲಿಗಳಲ್ಲಿ ನೀರು ಮಡುಗಟ್ಟಿದೆ. ಹಲವರು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ಬಹಳ ಹೊತ್ತು ಸರದಿಯಲ್ಲಿ ನಿಂತ ಇಬ್ಬರು ನಿತ್ರಾಣದಿಂದ ಕುಸಿದಿದ್ದಾರೆ. ಕೂಡಲೇ ಅಲ್ಲಿ ನೆರೆದವರೇ ಅವರಿಗೆ ನೀರು ಕುಡಿಸಿ ಸಂತೈಸಿದ್ದಾರೆ. ಜನ ಜಂಗುಳಿಯಲ್ಲಿ ಸಿಲುಕಿ ಕುಸಿದ ಓರ್ವನನ್ನು ಪೊಲೀಸರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಗೊಂದಲ – ಗಲಾಟೆಗೆ ಆಸ್ಪದವಾಗದಂತೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 20 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ತತೆಗೆ ನಿಯೋಜನೆಗೊಂಡಿದ್ದಾರೆ. ಬೇರೆಬೇರೆ ಜಿಲ್ಲೆಗಳಿಂದಲೂ ಅಗತ್ಯ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಗಿದೆ.  

ಸುದ್ದಿ ಓದಿ