ಕರ್ನಾಟಕದ ಸಂಸ್ಕೃತಿಯಲ್ಲಿ ಜೈನ ಧರ್ಮದ ಕೊಡುಗೆ ಅಪಾರ: ಡಾ. ವೀರಭದ್ರಯ್ಯ
ಬಳ್ಳಾರಿ 21: ಕರ್ನಾಟಕದ ಸಂಸ್ಕೃತಿಯಲ್ಲಿ ಜೈನ ಧರ್ಮದ ಕೊಡುಗೆ ಅಪಾರವಾಗಿದೆ ಎಂದು ಡಾ. ಚಿಕ್ಯಾಟೆ ಮಠದ ವೀರಭದ್ರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಭಗವಾನ್ ಪಾಶ್ವನಾಥ ತೀರ್ಥಂಕರರ ಜಿನಮಂದಿರದಲ್ಲಿ ನಡೆದ ‘ಬಳ್ಳಾರಿ ಜಿಲ್ಲೆಯ ಜೈನ ನೆಲೆಗಳು’ ಪುಸ್ತಕ ಲೋಕಾರ್ಪಣೆಯಲ್ಲಿ ಗ್ರಂಥಕತೃಗಳಾಗಿ ಅವರು ಮಾತನಾಡಿದರು.ಅಖಂಡ ಬಳ್ಳಾರಿ ಜಿಲ್ಲೆಯಾದ್ಯಂತ ವ್ಯಾಪಿಸಿರುವ ಜೈನ ಬಸದಿಗಳು, ತೀರ್ಥಂಕರರ ನೆಲೆಗಳು ಜೈನ ಧರ್ಮದ ವಿಸ್ತಾರವನ್ನು ವಿವರಿಸುತ್ತವೆ. ಜೈನ ಧರ್ಮ, ಜೈನ ಬಸದಿ ಮತ್ತು ಆಚಾರ - ಸಂಪ್ರದಾಯಗಳ ಕುರಿತಾದ ಅನೇಕ ಶಾಸನಗಳು ಜಿಲ್ಲೆಯಲ್ಲಿ ನೆಲೆಯೂರಿರುವ ಜೈನ್ ಸಂಸ್ಕೃತಿಯಲಿ ಸ್ಪಷ್ಟಪಡಿಸುತ್ತಿವೆ ಎಂದರು. ಅನೇಕ ಶಾಸನಗಳು, ಬಸದಿಗಳು ನಶಿಸುತ್ತಿದ್ದು, ಅವುಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸಬೇಕಾದ ಅನಿವಾರ್ಯತೆ ಸಿರುಗುಪ್ಪ ತಾಲೂಕಿನ ಬಲಕುಂದೆಯಿಂದ ಪ್ರಾರಂಭವಾದ ಜೈನ ನೆಲೆಗಳ ಅಧ್ಯಯನ, ಕೋಗಳಿ ಗ್ರಾಮದಲ್ಲಿರುವ ವಿಶೇಷಗಳನ್ನು - ಕುತೂಹಲಗಳನ್ನು ಅರಿಯುವಲ್ಲಿನ ನಡೆಗಳನ್ನು - ಅನುಭವಗಳನ್ನು ಅವರು ಮೆಲಕುಹಾಕಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಗ್ರಂಥಕತೃ ಡಾ. ಚಿಕ್ಯಾಟೆ ವೀರಭದ್ರಯ್ಯ ಅವರು, ಜೈನೇತರರಾಗಿ ಅತ್ಯುತ್ತಮವಾಗಿ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ. ‘ಬಳ್ಳಾರಿ ಜಿಲ್ಲೆಯ ಜೈನ ನೆಲೆಗಳು’ ಉತ್ತಮ ಗ್ರಂಥವಾಗಿದೆ ಎಂದರು.
ಬಳ್ಳಾರಿ ಜಿಲ್ಲಾ ಶ್ವೇತಾಂಬರ ಜೈನ್ ಸಮಿತಿ ಅಧ್ಯಕ್ಷ ಸಾಕಲಚಂದ್ ಬಾಗ್ರೆಚಾ ಅವರು ಅತಿಥಿಗಳಾಗಿ, ಗ್ರಂಥದ ಕುರಿತು ಮಾತನಾಡಿದರು. ಡಾ. ಕುಮಾರ್ ಅವರು ಸ್ವಾಗತಿಸಿದರು. ಡಾ. ವೀರೇಂದ್ರ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಮತ್ತು ಶ್ವೇತ ಅವರು ಪ್ರಾರ್ಥನೆ ಸಲ್ಲಿಸಿದರು. ರಾಜಕುಮಾರ್ ಗೋಗಿ ಅವರು ವಂದನಾರ್ಪಣೆ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ಗ್ರಂಥಕತೃ ಡಾ. ಚಿಕ್ಯಾಟೆ ಮಠದ ವೀರಭದ್ರಯ್ಯ ದಂಪತಿಗಳನ್ನು, ದಿಗಂಬರ ಜೈನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಿ ಅಭಿನಂದಿಸಲಾಯಿತು.ವೇದಿಕೆಯಲ್ಲಿ ಜೈನ ದಿಗಂಬರ ಮಂದಿರದ ಅಧ್ಯಕ್ಷ ಪಿ.ಬಿ. ನಡುವಿನ ಮನಿ, ಮುಖಂಡ ವೃಷಭರಾಜ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.