ಬಳ್ಳಾರಿ

ಗುರು ತ್ರಿಮೂರ್ತಿಗಳ ಸಂಗಮ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಗುರು ತ್ರಿಮೂರ್ತಿಗಳ ಸಂಗಮ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಲೋಕದರ್ಶನ ವರದಿ 

ರಂಭಾಪುರಿ ಪೀಠ (ಬಾಳೆಹೊನ್ನೂರು) 24: ಗುರು ಆಧ್ಯಾತ್ಮ ಲೋಕದ ಅನಭಿಷಕ್ತ ಚಕ್ರವರ್ತಿ. ಗುರು ದೇವರ ಸ್ವರೂಪವೆಂಬ ನಂಬಿಕೆಯುಂಟು ಗುರು ಬ್ರಹ್ಮ ವಿಷ್ಣು ಮಹೆಶ್ವರ ಆಗಬಲ್ಲ. ತ್ರಿಮೂರ್ತಿಗಳ ಸಂಗಮ ಶಕ್ತಿ ಗುರುವಿನಲ್ಲಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.  

ಅವರು ಶನಿವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ “ಗುರು ಪೂರ್ಣಿಮಾ” ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಗು ಎಂದರೆ ಅಜ್ಞಾನ. ರು ಎಂದರೆ ನಿವಾರಕ ಎಂದರ್ಥ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೋಧಿಸುವಾತನೇ ನಿಜವಾದ ಗುರು. ಸಕಲ ಜೀವ ರಾಶಿಗಳಿಗೆ ಲೇಸನ್ನೇ ಬಯಸುವ ಗುರು ಕರುಣಾಸಾಗರ. ಆಧ್ಯಾತ್ಮ ಜ್ಞಾನದ ಸಿರಿ ಸಂಪದವನ್ನಿತ್ತ ಗುರುವನ್ನು ಮರೆಯಲಾಗದು. ಆದ್ದರಿಂದಲೇ ಆಚಾರ್ಯ ದೇವೋ ಭವ ಎಂದು ಶಾಸ್ತ್ರ ಸಾರಿ ಸಾರಿ ಹೇಳಿದೆ. ಹೂವಿಗೂ ಸೂರ್ಯನಿಗೂ ಯಾವ ಸಂಬಂಧ ಇರುವುದೋ ಅದೇ ಸಂಬಂಧ ಗುರುವಿಗೂ ಶಿಷ್ಯನಿಗೂ ಇದೆ ಎಂಬುದನ್ನು ಮರೆಯಬಾರದೆಂದು ರೇಣುಕ ಗೀತೆ ಸ್ಪಷ್ಟವಾಗಿ ನಿರೂಪಿಸಿದೆ. ಭೌತಿಕ ಸಂಬಂಧಗಳು ಕಾಲಾಂತರದಲ್ಲಿ ಸಡಿಲಗೊಳ್ಳಬಹುದು. ಆದರೆ ಗುರು ಶಿಷ್ಯರ ಸಂಬಂಧ ಅವಿನಾಭಾವವಾದುದು. ಗುರುವನ್ನು ನರನೆಂದವನಿಗೆ ನಾಯಕ ನರಕ ತಪ್ಪದೆಂದು ಸರ್ವಜ್ಞ ಕವಿ ಎಚ್ಚರಿಸಿದ್ದುಂಟು. ಶ್ರೀ ಗುರುವಿನಿಂದ ಅಮರ ಆಧ್ಯಾತ್ಮದ ಸಿರಿ ದಿವ್ಯ ಜೀವನ ಪ್ರಾಪ್ತವಾಗುವುದೆಂದರು. 

 

ಸಮಾರಂಭದಲ್ಲಿ ಪಾಲ್ಗೊಂಡ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜನ್ಮ ಜನ್ಮಾಂತರದ ಪಾಪ ಕರ್ಮಗಳನ್ನು ಕಳೆದು ಶಿವಜ್ಞಾನ ಸಂಪತ್ತನ್ನು ಕರುಣಿಸುವ ಗುರುವಿನ ಕಾರುಣ್ಯ ಕಿರಣ ಎಲ್ಲರಿಗೂ ಬೇಕಾಗಿದೆ. ಗುರು ಪೂರ್ಣಿಮಾ ಇದನ್ನು ವ್ಯಾಸ ಪೂರ್ಣಿಮಾ ಎಂತಲೂ ಕರೆಯುತ್ತಾರೆ. ಗುರು ಸೇವಾ ಮಾಡಿ ಗುರು ಕೃಪೆಗೆ ನಾವೆಲ್ಲ ಪಾತ್ರರಾಗೋಣ ಎಂದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು. ಸಂತೆಕೋಡಿಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಮುಳ್ಳಹಳ್ಳಿ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ಹುಮನಾಬಾದ ಹಿರೇಮಠದ ರೇಣುಕ ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಗುರು ಪೂರ್ಣಿಮಾ ನಿಮಿತ್ಯ ಶ್ರೀ ರಂಭಾಪುರಿ ಜಗದ್ಗುರುಗಳವರ ಅಷ್ಟೋತ್ತರ ಸಹಿತ ಪಾದಪೂಜಾ ನೆರವೇರಿತು. ದಾವಣಗೆರೆ ಚನ್ನಬಸಯ್ಯ, ಚಿರಸ್ತಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ಬೆಂಗಳೂರಿನ ಉದ್ಯಮಿ ಬಸವರಾಜ, ಉದಯ, ಬಾಳಯ್ಯ ಇಂಡಿಮಠ, ಚಂದ್ರು, ನಂದೀಶ, ನಾಂದೇಡ ವಿನಾಯಕ ಪರಿವಾರದವರು ಪಾಲ್ಗೊಂಡು ಶ್ರೀ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ದಾವಣಗೆರೆ ಕೊಟ್ರೇಶ ಸ್ವಾಗತಿಸಿದರು. ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಗುರು ಪೌರ್ಣಿಮೆ ನಿಮಿತ್ಯ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ನೆರವೇರಿತು. 


ಸುದ್ದಿ ಓದಿ