ನೀಲಿ ಬಯಲಿನ ಬೆಡಗು ಬೆರಗು
ಪುಸ್ತಕವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆಯನ್ನು ಗಮನಿಸಿದಾಗ ಆಶ್ಚರ್ಯ ಮೂಡುತ್ತದೆ. ಉತ್ತಮ ಕೃತಿಗಳು ಬಂದರೆ ಓದುಗರು ಸ್ವೀಕರಿಸುತ್ತಾರೆ ಎನ್ನುವುದು ಸ್ಪಷ್ಟ. ಸಾಹಿತ್ಯದ ವಿವಿಧ..... ಪ್ರಕಾರಗಳಲ್ಲಿ ಪ್ರಕಟವಾಗುತ್ತಿರುವ ಕೃತಿಗಳನ್ನು ನೋಡಿದರೆ ಅವುಗಳಲ್ಲಿ ಕವನ ಸಂಕಲನಗಳೇ ಹೆಚ್ಚು. ಉದಯೋನ್ಮುಖರು ಕಾವ್ಯ ರಚನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಕವಿಯತ್ರಿಯರು ಕಾಣಿಸಿಕೊಂಡದ್ದು ಈ ದಶಕದ ಇನ್ನೊಂದು ಬೆಳವಣಿಗೆ. ವಚನ ಸಾಹಿತ್ಯ ಸಂದರ್ಭವನ್ನು ಬಿಟ್ಟರೆ ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಕಾವ್ಯಲೋಕವನ್ನು ಪ್ರವೇಶಿಸಿದ್ದಿಲ್ಲ.
ವಸ್ತು ವೈವಿಧ್ಯತೆ, ಭಾವುಕತೆ, ಬೌದ್ದಿಕತೆ, ವಾಚ್ಯತೆಯನ್ನು ಮೀರುವ ಸೂಚ್ಯತೆ ಅವರ ರಚನೆಗಳಲ್ಲಿ ಗುರುತಿಸಬಹುದು. ಆಧುನಿಕ ಭಾವದಿಂದ ಮೂಡಿ ಬರುವ ಮಹಿಳಾ ಕಾವ್ಯ ಹೊಸ ಹಾದಿಯನ್ನು ಹಿಡಿಯುವ ಹವಣಿಕೆಯಲ್ಲಿದೆ. ಅನುಭವವನ್ನು ಜೀಣರ್ಿಸಿಕೊಳ್ಳಬಲ್ಲ ಧಾರಣಶಕ್ತಿ ಮತ್ತು ಬೇಕಾದ್ದನ್ನು ಕಾವ್ಯವಾಗಿಸಬಲ್ಲ ಸೃಜನಾಶಕ್ತಿ ಕವಿಗಿರಬೇಕಾಗಿದ್ದು ಅನಿವಾರ್ಯ. ಭಟ್ಕಳದ ಎಂ.ಜಿ ತಿಲೋತ್ತಮೆಯವರ ನೀಲಿ ಬಯಲು ಸಂಕಲನದ ಮೇಲೆ ಕಣ್ಣು ಹಾಯಿಸಿದಾಗ ಅವರ ಅನುಭವಗಳು ಭಾವಕೋಶದಲ್ಲಿ ತೀವ್ರತೆಯೊಂದಿಗೆ ಸಮಗ್ರವಾಗಿ,ಸಂಕ್ಷಿಪ್ತವಾಗಿ ಕಾವ್ಯ ಶರೀರದಲ್ಲಿ ದಾಖಲಾಗಿರೋದು ಗಮನಕ್ಕೆ ಬರುತ್ತದೆ.
ಸಮಚಿತ್ತದ ವೈಚಾರಿಕ ನೆಲೆಗಟ್ಟಿನಿಂದ ಬದುಕನ್ನು ಕಟ್ಟುವ ಹಂಬಲವಿರುವ ಕವಯತ್ರಿ ಕನ್ನಡ ಮಹಿಳಾ ಕಾವ್ಯದ ದಿಟ್ಟ ಮತ್ತು ಪರಿಪಕ್ವ ಧ್ವನಿಯಾಗಬಲ್ಲರು ಎನ್ನುವ ಸೂಚನೆಯಿದು. ಕಾವ್ಯ ಭಾವಕೊಳದಲ್ಲಿ ಹರಿಯುವ ಜೀವನದಿ. ಅದಕ್ಕೆ ನಿರಂತರತೆಯ ಸೆಳವು,ಆಳ,ಹರಿವು ಇದೆ. ಸಂಕಲನದ 'ಶರಾವತಿ' ಕವನದಲ್ಲಿ "ವಿಸ್ಮಯಗಳ ಸೃಷ್ಟಿಸುವ ಈ ಜಲಧಾರೆ ನಮ್ಮ ಶರಾವತಿ" ಎಂದು ಕವಯಿತ್ರಿ ಹೇಳುತ್ತಾರೆ. ಶರಾವತಿಯಲ್ಲಿ ಬೆಡಗು ಬೆರಗು ಎರಡೂ ಇದೆ. ರೂಪಕಗಳು ಕಾವ್ಯ ಬಂಧದಲ್ಲಿ ಹೊಸ ಅರ್ಥಗಳನ್ನು ಹೊಳೆಯುತ್ತದೆ. ಮಳೆ ಸಮೃದ್ಧಿಯ ಸಂಕೇತ. ಮಳೆಯಿಲ್ಲದೆ ಬೆಳೆ ಇಲ್ಲ,ಬದುಕಿಲ್ಲ. "ಮೊದಲ ಮಳೆಯೆಂದರೆ /ಬಾಲ್ಯ ಮರುಕಳಿಸುತ್ತಾ/ಯೌವ್ವನ ನೆನೆಯುತ್ತಾ/ ಕನಸುಗಳು ಯಾರದೋ /ನಿದಿರೆಯಲ್ಲಿ ಸದ್ದು ಮಾಡಲು ಸಜ್ಜಾಗಿರೋದು/"( ಮೊದಲ ಮಳೆಯೆಂದರೆ). ಎಂಬ ಸಾಲುಗಳು ಅನುಭವದ ಮಾತುಗಳು. ಅದನ್ನು ಮರೆಯಲಸಾಧ್ಯ. 'ಮೊದಲ ಮಳೆ'ಯಲ್ಲಿ ಬಾಲ್ಯದ ಆಟ,ಯೌವನದ ಮಾಟ,ಕನಸುಗಳ ನೋಟ ಕಾಡುತ್ತದೆ. "ಸುರಿದು ಹೋದ ಮೇಲೆ ಹನಿಗಳು ತಾರೆಯಂತೆ/ ಅಲ್ಲಲ್ಲಿ ಕಂಗೋಳಿಸಿದವು"(ತಂಪಾದವು) . ಮಳೆ ನೀರು ಹರಿದು ಹೊಳೆಗೆ ಸೇರುತ್ತದೆ. ಕಾಲದ ಕಶ್ಮಲಗಳನ್ನು ಕೊಚ್ಚಿ ಹರಿವ ಹೊಳೆ ಮತ್ತು ಮಳೆ ಹೊಸ ಅನುಭೂತಿ ನೀಡುತ್ತದೆ. ಸಂಕಲನದ 'ನೀಲಿಬಯಲು' ನಾನಾರ್ಥವನ್ನು ಚಿಮ್ಮಿಸುತ್ತದೆ. ಪ್ರಕತಿ - ಮಾನವನ ಅನುಸಂಧಾನದ ನೆಲೆಯನ್ನು ಇದರಲ್ಲಿ ಗುರುತಿಸಬಹುದು".... ಸ್ಪರ್ಶ ದ ಅವಂತಾರಕ್ಕೆ/ ಉಬ್ಬು ತಗ್ಗುಗಳು ಹೆಚ್ಚಾಗಿ/ ಚೆಲವು ಬದಲಾಗಿ ಮದುಮಗಳು/ ಸಿಂಗಾರದಲ್ಲಿ ಕಣ್ಣು ಕುಕ್ಕುತ್ತಿದೆ....
ಕಪ್ಪು ಮೋಡಗಳ ಕರಗಿಸಿ ಮುತ್ತಾನಾಗಿಸಿ/ ಅಂತರದಿ ತಗ್ಗಿಸಿ ಮಿಲನದಲ್ಲಿ/ ಮತ್ತೆ ಪುಟ್ಟಿದೆದ್ದ ಫಸಲಿಗೆ ಕಾರಣ/ ನೀನೆಂದು ರುಜುವಾಗಿದೆ". ಇಲ್ಲಿ ಬಯಲು ತೆರೆದ ಮನಸ್ಸು , ಅದಕ್ಕೆ ಗೋಡೆಗಳಿಲ್ಲ ಆಕಾಶದ ಬಣ್ಣ ನೀಲಿ. ನೀಲಿಯೆಂಬುದು ಶುದ್ಧತೆ, ಶುಭ್ರತೆ,ಸೌಮ್ಯತೆಯ ಸಂಕೇತ. ಬಯಲು ಹಸಿರ ಒಡಲು. ವಿಶಾಲ ಹೃದಯದ ಪ್ರತೀಕ.ಸಮೃದ್ಧಿಯ ಸಂಕೇತ. ಈ ಬಣ್ಣಗಳೇ ಕವಿತೆಯ ಆಶಯಗಳು. ಸಮಾಜಕ್ಕೆ ನೀಡುವ ಸಂದೇಶಗಳು. ಮತ್ತೆ ಮತ್ತೆ ಓದಿಸಿಕೊಳ್ಳುವ ಸಂಪ್ರೀತ ಸಾಲುಗಳನ್ನು ಸಂಕಲನದ ಉದ್ದಕ್ಕೂ ಕಾಣಬಹುದು. ಬಣ್ಣಗಳೇ ವಿಚಿತ್ರ ಆಟಗಳಿಗೆ ಕನ್ನಡಿ ಹಿಡೆಯುವ 'ಬಣ್ಣಗಳೇ ವಿಚಿತ್ರ ಓದುಗರ ಒಳಗಣ್ಣು ತೆರೆಯುತ್ತದೆ.
'ಅಂಚೆಪೆಟ್ಟಿಗೆ' ಕಾಗದವೆಂಬ ವಸ್ತುವನ್ನು ಪರೋಕ್ಷವಾಗಿ ಆಯ್ದುಕೊಂಡು ಬರೆದ ಕವನ. ಸಂಕೀರ್ಣ ಅನುಭದ ಹಂತಗಳು ಇಲ್ಲಿ ತೆರೆದುಕೊಂಡಿದೆ. " ಮೊದಲಿನಿಂದ/ ಆಕೆ ಮತ್ತು ಸವಾಲು /ಜೊತೆ ಜೊತೆಗೆ ಸಾಗುತ್ತಿದೆ" ಎಂಬ ಸಾಲುಗಳಲ್ಲಿ ಕೊನೆಗೊಳ್ಳುವ 'ಆಕೆ ಮತ್ತು ಸವಾಲು' ಕವನದಲ್ಲಿ ಮಹಿಳೆಯ ದಾರುಣ ಬದುಕಿನ ಯಾತನೆಯಿದೆ. ಬಳಸಿದ ಭಾಷೆ ಮತ್ತು ನಿರೂಪಣೆಯಿಂದ ಗಮನ ಸೆಳೆಯುತ್ತಿದೆ.
ಪುಟ್ಟ ಮಗು ಕಾಣೆಯಾದ ಸಂದರ್ಭದಲ್ಲಿ ಮನಸ್ಸು ಮರುಗೋದು ಸಹಜ. 'ಹುಡುಕಿಕೊಡಿ' ಸಮಕಾಲೀನ ಘಟನೆಯನ್ನು ಮಾಮರ್ಿಕವಾಗಿ ನಿರೂಪಿಸುತ್ತದೆ. ವಾಸ್ತವಿಕತೆ ಮರೆತು ಬದುಕುತ್ತಿರುವ ಕಾಲಘಟ್ಟ 'ವಿಪಯರ್ಾಸ' ದಲ್ಲಿದೆ. ಗೊಂದಲದಲ್ಲಿ ಸಿಲುಕಿದ ಮನಸ್ಸು ಮಂಕಾಗಿ ಏನು ಹೇಳಲಾಗದೆ ನಿಗೂಢವಾಗಿ ಮುಸ್ಸಂಜೆಗೆ ಒದ್ದಾಡುವ ಚಿತ್ರಣ 'ಮಸ್ಸಂಜೆ ಮನಸ್ಸು ಕವನದಲ್ಲಿದೆ. ಕವಯತ್ರಿ ಅಭಿವ್ಯಕ್ತ ರೀತಿಯಲ್ಲಿ ಅನೇಕ ಸೂಕ್ಷ್ಮಗಳನ್ನು ಅಳವಡಿಸಿದ್ದಾರೆ. ಶ್ರೀಮಂತಿಕೆಯ ಸೊಕ್ಕಿನಲ್ಲಿ ಸುಳ್ಳು ಹೇಳಿ ಮೆರೆಯುತ್ತಿರುವರ ಸಮಾಜ ದ್ರೋಹಿಗಳನ್ನು ಅಣಕಿಸುವ 'ಅ(ಸತ್ಯ)ದ ಜಾಗಟೆ' ವರ್ತಮಾನವನ್ನು ಧ್ವನಿಸುತ್ತದೆ.
'ಸಮಯ ನಿಲ್ಲುವುದಿಲ್ಲ ನಿರುಪಣಾ ರೀತಿಯಿಂದ ಗಮನಸೆಳೆಯುತ್ತದೆ. ಯಾವ ಕರಾರಿಗೂ ಬಾಗದೆ ಓಡುತ್ತಿರುವ ಸಮಯವನ್ನು ನಿಲ್ಲಿಸಬೇಕೆನ್ನುವ ಸಾಹಸ ಮಾಡಬೇಕೆನ್ನುವ ಕವಯತ್ರಿಗೆ ಹಲವು ಸಂದರ್ಭದಲ್ಲಿ ಅರಿವಿಲ್ಲದೆಯೇ ಸಮಯ ಬಾಗುವುದು ಅಚ್ಚರಿಯ ಸಂಗತಿ. ಹಲವು ಸಂದರ್ಭಗಳಲ್ಲಿ ಮುಖಾಮುಖಿಯಾಗುವ ಹವಣಿಸುವಾಗ ಕೆಲವು ಸತ್ಯಗಳು 'ಬಚ್ಚಿಟ್ಟ ಮಾತು' ,ಪ್ರತಿಮೆ, ಸಂಕೇತಗಳ ಶಬ್ದಶಿಲ್ಪ. 'ದಾರಿಸಾಗುವಾಗ' ಅನುಭವದ ಆಳವನ್ನು ಬಗೆದು ತೋರಿಸಿದ ಪರಿ ವಿಭಿನ್ನ. ವ್ಯವಹಾರ ನೆಪದಲ್ಲಿ ಅಸ್ತಿತ್ವವನ್ನು ಭದ್ರಪಡಿಸಿದ 'ಬಡವನ ಜೇಬು' ತುಂಬಿದಷ್ಟು ಸದ್ದು ಮಾಡದಿರುವ ನಿಶ್ಚಲ ಜೇಬು "ಕೈಚಾಚದೆ ಕಾಲುದಾರಿಯಲ್ಲಿ ನಡೆದುಹೋಗುವ ಮಾನವೀಯ"ಜೇಬು. ಇದು ದಂಧ್ವ ಅರ್ಥವನ್ನು ಧ್ವನಿಸುತ್ತದೆ.
ಬಲವ ಸಂಧಿಸಲು ಹನಿ ಹನಿ ಭಾವನೆ ಚಿಗುರಿಸಲು ಯಾರು ಬಂದಿರಬಹುದು ಎಂಬ ಪ್ರಶ್ನೆಯಲ್ಲಿಯೇ ಉತ್ತರವನ್ನು ಹುಡುಕವ ಕವಯತ್ರಿಯ ಜೀವದೊಳಗಿನ ಏರಳಿತದ ಬೋಗರ್ೆತವನ್ನು ನಿವೇದಿಸುತ್ತಾರೆ. 'ಯಾರು ಬಂದಿರಬಹುದು' ಕವನದಲ್ಲಿ ಮೊದಲ ಭೇಟಿಯ ಹಸಿಬಿಸಿಯ ನೆನಪುಗಳು ಅವರನ್ನು ಕಾಡುತ್ತದೆ. ಹಡೆದವ್ವನನ್ನು ನೆನಪಿಸುವ ಎದೆಯ ಹಾಲು ಬಸಿದು ಉಸಿರು ಕೊಟ್ಟ 'ಅವಳೇ ಮೊದಲು'. ಮುಸುಕಾದ ಬದುಕಿನಲ್ಲಿ ತವಕ ತಲ್ಲಣ ಸೃಷ್ಟಿಯಾಗಿ ಅಂತರಂಗದಲ್ಲಿ ' ಅವಳು ನೆನೆಪಾದಾಗ' ಮಾತೃ ಹೃದಯದ ತುಡಿತ ಮಿಡಿತ ಅಭ್ಯವ್ಯಕ್ತವಾಗಿರುವುದನ್ನು ಕಾಣಬಹುದು. ಜೀವ,ಭಾವ ಸಂಬಂಧಗಳನ್ನು ಆಳವಾಗಿ ಅಭಿವ್ಯಕ್ತಿಸಲು ತವಕಿಸುವ ಸಂವೇದನಶೀಲತೆಯನ್ನು ಇಲ್ಲಿ ಗಮನಿಸಬಹುದು. 'ಅಪ್ಪನಂಗಿ' ಮತು 'ಅಪ್ಪನ ಹೆಗಲು' ಕವನಗಳು ತೀವ್ರ ಆದ್ರವಾಗಿ ತಟ್ಟುತ್ತದೆ. "ಗಡಸು ಧ್ವನಿಯ ಗಂಭೀರ ಮುಖದ ಅಪ್ಪ /ಎಲ್ಲರಿಗೂ ಕಿರಿ ಕಿರಿ/ ಮನೆಗೆ ಬಾರದೆ ತಡ ಘಳಿಗೆ/ ಎಲ್ಲರೂ ಎದೆಗುಂದುವರು/ ಶಿಖರದಷ್ಟು ಧೈರ್ಯ ಅಪ್ಪನಿಗೆ/ ಸಾಟಿ ಯಾರಿಲ್ಲ( ಅಪ್ಪನಂಗಿ), "ನೀ ಭುವಿಗೆ ಬರುವಾಗ ಅಮ್ಮನ ಒದ್ದಾಟಕ್ಕೆ/ ಗೋಡೆಯ ಮರೆಯಲ್ಲಿ /ಅಪ್ಪ ಬಿಕ್ಕಳಿಸೋದು/ ಯಾರು ನೋಡಿರಲ್ಲ/ ದಿಬ್ಬಣ ಹೊರಟಾಗ/ ಖಾಲಿ ಜೇಬಿನ ತಂದೆ ಕಾಣಿಸದು/
.....ತವರೆಂದರೆ ತಾಯಿ ಮಾತ್ರವಲ್ಲ /ತಂದೆಯು ಕಾಯುವನು/ "( ಅಪ್ಪನ ಹೆಗಲು) ಮೊದಲಾದಿ ಸಾಲುಗಳಲ್ಲಿ ವಾಸ್ತವವನ್ನು ಹೃದಯಂಗಮವಾಗಿ ಚಿತ್ರಿಸಲಾಗಿದೆ. ಆಪ್ತ ಸಂಬಂಧದ ಅನುಭವ ಜನ್ಯ ಸಂರಚನೆಯ ಮೂಲಕ ಆಳವಾಗಿ ಅಭಿವ್ಯಕ್ತಿಸಲು ತವಕಿಸುವ ಸಂವೇದಶೀಲತೆಯನ್ನು ಈ ಎರಡು ಕವಿತೆಗಳಲ್ಲಿ ಗುರುತಿಸಲಾಗುವುದು.
ಪ್ರಕೃತಿ ದುರಂತದ ಕರಾಳ ಛಾಯೆ 'ಹಳ್ಳಿ ಹುಡುಗಿಯ ಅಂತರಂಗ'ದಲ್ಲಿದೆ. "ಬಡ ಬಿಡಾರದಲ್ಲಿ ಹರೆಯ ಸವೆಯುತ್ತಾ ಕಾಲ ಸವೆಯುತ್ತಿದೆ/....ಉರುಳಿದ ಗುಡಿಸಲು ಎತ್ತಿ / ತುಂಬಿಸು ಸಂತಸದ ಬುತ್ತಿ".
ಒಡಲಹಕ್ಕಿ, ಕಾಲದ ಹಕ್ಕಿ -ಹೀಗೆ ದ್ವಂದ್ವಾರ್ಥದ ಮೂಲಕ ವರ್ತಮಾನದ ನಾನಾರ್ಥಗಳಿಗೆ ಸಾಕ್ಷಿಯಾಗುವ ಮೂಕ ವೇದನೆಗಳಿಗೆ ಈ ಕವನ ಮಿಡಿಯುತ್ತದೆ. ವಿಕಿರಣದ ತೀವ್ರತೆಯಿಂದ ಉಸಿರು ಕಟ್ಟಿ ಚಡಪಡಿಸಿ ಪಲಾಯನ ಸೂತ್ರ ಹಿಡಿದ 'ಹಕ್ಕಿ ಹಾರಿದವು' ಗತಿ ,ಸ್ಥಿತಿ ಪರಿಸ್ಥಿತಿಗಳ ಮಧ್ಯೆ ಮೌನವಾಗಿ ಕೆಲವೊಮ್ಮೆ ಸೆಟೆದು ನಿಂತು ಪ್ರತಿಭಟಿಸುವ ಅಸಾಹಯಕತೆ 'ತುಟಿ ಬಿಚ್ಚುತ್ತಿದ್ದಾಳೆ' ಕವನದಲ್ಲಿದೆ.
"ಕೊನೆಗೆ ಸೋಲಬೇಕೆನ್ನುವ ಹಟ ಬೇಕೇ/ ಮೊದಲ ಭೇಟಿಗೆ ಒಪ್ಪಬಹುದಲ್ಲವೇ" ಎಂದು ದಿಟವಾಗಿ ಪ್ರಶ್ನಿಸುವ 'ನಡುಗಡ್ಡೆಯ ಹುಡುಗಿ' ಹೊಸ ವ್ಯಾಖ್ಯಾನಕ್ಕೆ ತೆರೆದುಕೊಳ್ಳುತ್ತದೆ. ಪ್ರತಿ ಓದಿಗೂ ಅರ್ಥ ಹಿಗ್ಗಿಸುವ 'ನಯನದಲ್ಲಿ ಹಾಜರಾತಿ' ವಿಶಿಷ್ಟ ರೀತಿಯ ರಚನೆ ಮಹಾಮಾರಿ ಕೊರೋನಾ ಕುರಿತಾದ 'ಯಾರ ತಪ್ಪು?, ಕೊರೊನದಿಂದಾದ ಸಾವಿನ ಚಿತ್ರಣ ನೀಡುವ 'ನಾಕುಭುಜ' ಸಮಕಾಲೀನ ಸ್ಥಿತಿಗೆ ಸ್ಪಂದಿಸಿ ಬರೆದವುಗಳು. ಮನುಷ್ಯ ಸಹಜ ಭಾವನೆಗಳನ್ನು ಪ್ರತಿಬಿಂಬಿಸುವ 'ಕನ್ನಡಿ' ಅರೆಬರೆ ಕನಸುಗಳು ತಿರುಗುತ್ತಿರುವ 'ಬೀದಿ' ಹುರಿದುಹೋಗುತ್ತಿರುವ ನಗುವಿನ ಮನಸ್ಸಿಗೆ ಧೈರ್ಯ ತುಂಬಿದ ಹಿಂಬಾಲಿಸುವ 'ನೆರಳು' ಮೊದಲಾದ ಕವನಗಳಲ್ಲಿ ಭಾಷೆಯನ್ನು ದುಡಿಸಿಕೊಂಡ ರೀತಿ ಮೆಚ್ಚುಗೆ ಆಗುತ್ತದೆ. 'ಬಂಡಾಯದ ಅಕ್ಕ' ಮಹಾದೇವಿ ಅಕ್ಕನ ಕುರಿತಾದುದು ಗೋವಿಂದ ಪೈಗಳ 'ಇನ್ನಿನಿಸು ನೀ ಮಹಾತ್ಮಾ ಬದುಕ ಬೇಕಿತ್ತು' ಕವನವನ್ನು ಇದು ನೆನೆಪಿಸುತ್ತದೆ. ವಿಚಾರದಿ ನೇರ ಅಭಿವ್ಯಕ್ತಿ ಬದುಕು ಬವಣೆಗಳ ವಾಸ್ತವ ಚಿತ್ರಣ 'ಗೋಡೆಯ ಒಳಗೂ ಹೊರಗೂ' ಕವನದಲ್ಲಿದೆ. 'ಅವಳು ನೆನೆಪಾದಾಗ' ಕವನದಲ್ಲಿ ಮೌನ ಮುರಿದು ಸಂವಹನ ಸಾಗಿಸುವ ಕವಿಯತ್ರಿ, " ಶಿಖರವೇರದಿದ್ದರೂ/ ಅದರಷ್ಟು ಗಟ್ಟಿ/ ಕಠೋರ ಧ್ಯಾನ ನಿಶ್ಯಬ್ದ /ನನ್ನೊಳಗೆ ಮೊಳಗಬೇಕು" (ಅನಿಸುವುದು ಹೀಗೆ ) ಎನ್ನುತ್ತಾರೆ. ಸುತ್ತಲಿನ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ಅಮಾಯಕತನಕ್ಕೆ ಮರಗುವ 'ನಾನು ಬದುಕುತ್ತಿದ್ದೆ', " ಆಡಂಬರದಿ ಬೀಗುವವರ ಕಥೆಗಳನ್ನು ಬಿಟ್ಟು /ಮನುಷ್ಯನ ಪ್ರೀತಿ ಹಂಚುವ" ವಿಷಯಗಳನ್ನು ಅರಹುಬೇಕೆಂಬ ಸಂದೇಶ ನೀಡುವ 'ಹೊಸದೇನಾದರೂ ಹೇಳು' ಸ್ವವಿಮಶರ್ೆಗೆ ಒಡ್ಡುತ್ತದೆ. 'ಮೌನ ಮಾತಾಡು' ಉತ್ತಮ ಶಬ್ದ ಚಿತ್ರ ಆಧುನಿಕತೆಯ ಭರಾಟೆಯ ಮಾಯಲೋಕದಲ್ಲಿ ವಿಹರಿಸಿದಾಗ ನೆನಪಿಗೆ ಬರುವ ಬಡತನದಿ ಬದುಕಿನ ಕರಾಳ ಚಿತ್ರಣ 'ಜಾತ್ರೆಯಲ್ಲಿ ಪುಟ್ಟ ಪೋರಿ'ಯಲ್ಲಿದೆ. ತಿಲೋತ್ತಮೆ ಭಾವಕ್ಕೆ ತಕ್ಕಂತೆ ಭಾಷೆಯಲ್ಲಿ ಬಳಸಿದ್ದಾರೆ . ಅರ್ಥ ಗಳನ್ನು ಹೊಳೆಯಿಸುವ ಭಾವವನ್ನು ಹೊರಗಿಳಿಸುವ,ವಿಚಾರಗಳನ್ನು ಪ್ರತಿಪಾದಿಸುವ ಸಂದರ್ಭಗಳಲ್ಲಿ ಭಾಷೆಯನ್ನು ಬಳಸಿದ ರೀತಿ ಹೊಸತು. ವಸ್ತು, ಭಾಷೆ ,ಪ್ರತಿಮೆ ರೂಪಕ, ಸಂಕೇತಗಳ ಮೂಲಕ ಹುಟ್ಟಿದ ಕಾವ್ಯವನ್ನು ಅವರಿಲ್ಲಿ ಕಟ್ಟಿದ್ದಾರೆ. ಬಾಹ್ಯ ಅನುಭವ, ಆಂತರಿಕ ಮಂಥನ ,ಸಮಾಜ ಉಂಟುಮಾಡುವ ತಲ್ಲಣದ ಕ್ಷಣಗಳು ಕಾವ್ಯಕ್ಕೆ ಜೀವ ತುಂಬಿದೆ.
ಗದ್ಯಾಲಯ ಮತ್ತು ಪದ್ಯಾಲಯವನ್ನು ಸಂಯೋಜಿಸಿ ಕಾವ್ಯ ರಚಿಸಲು ತಿಲೋತ್ತಮೆಯವರಿಗೆ ಗೊತ್ತು . ಸಂಕಲನದ ಉದ್ದಕ್ಕೂ ಸಾಮಾಜಿಕ ಪ್ರಜ್ಞೆ ವ್ಯಕ್ತಿ ಮತ್ತು ಸಮಾಜದ ಮುಖಾಮುಖಿಯಾಗಲು ಹವಣಿಸಿದಾಗ ಮಾನವೀಯ ಮೌಲ್ಯಗಳು ಆತ್ಮೀಯ ಸಂಬಂಧಗಳು ಕಾಣಸಿಗುತ್ತದೆ.
ಸೌಮ್ಯವಾಗಿ ಹಿತಮಿತವಾಗಿ ಹೇಳಿ ಹಸಿಗೋಡೆಯಲ್ಲಿ ಹರಳು ತುರಿದಂತ ಪರಿಣಾಮವನ್ನು ಉಂಟುಮಾಡಬಲ್ಲ ರಚನೆಗಳಿವೆ. ತಿಲೋತ್ತಮೆ ಕಾವ್ಯಾಧ್ಯಯನ ಮಾಡೀದವರು. ಹಿರಿಯ ಕವಿಗಳ ರಚನೆಗಳನ್ನು ಓದಿದವರು. 'ನೀಲಿ ಬಯಲು' ಸಂಕಲನದಿ ಅವರ ಮನದಾಳದ ಮಾತಿನಲ್ಲಿ ಅದು ವೇದ್ಯವಾಗುತ್ತದೆ. ತಾನು ಮುಂದೆ ಇನ್ನೂ ಸಮರ್ಥವಾಗಿ ಕವನಗಳನ್ನು ನೀಡಬಲ್ಲೆ ಎಂಬುದನ್ನು ಆ ಮಾತುಗಳು ಸೂಚಿಸುತ್ತದೆ. "ಮಳೆ ,ಬಿಸಿಲು, ಚಳಿ ಬಿರುಗಾಳಿ ಈ ಏರುಪೇರಿನ ವಾತಾವರಣದಲ್ಲಿ ಬಾನು ಬಯಲಿಗೆ ನೋಟ ನೆಟ್ಟಗೆ ಸಾಮಾನ್ಯ ವ್ಯಕ್ತಿಯು ಅವನಿಗೆ ಗೊತ್ತಿಲ್ಲದೆ ಕವಿಯಾಗುತ್ತಾನೆ" ಎಂಬ ಅವರ ಅನಿಸಿಕೆ ಕಾವ್ಯ ಕೃಷಿಗೆ ತೊಡಗುವ ಹೊಸಬರಲ್ಲಿ ಕುತೂಹಲ ಮೂಡಿಸಬಹುದು. 'ನೀಲಿಬಯಲು' ತಿಲೋತ್ತಮೆಯವರ ಎರಡನೇ ಕವನ ಸಂಕಲನ ಇನ್ನಷ್ಟು ಕೃತಿಗಳನ್ನು ನೀಡುವ ಮೂಲಕ ಅವರು ಸಾಹಿತ್ಯ ನಕಾಶೆಯಲ್ಲಿ ಮೆರುಗುವ ಸ್ಥಾನ ಪಡೆಯಲಿ ಎಂದು ಹಾರೈಸುತ್ತೇನೆ.
ರಾಧಾಕೃಷ್ಣ. ಕೆ. ಉಳಿಯತ್ತಡ್ಕ